ಬೆಳಗಾವಿ(ಜ.13): ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೆ ನುಗ್ಗಿ ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ನಗರದ ರಾಣಿ ಚನ್ನಮ್ಮ ವಿವಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ನಿವಾಸಿ ಬಸಪ್ಪ ಹೊನವಾಡ (23) ಎಂದು ಗುರುತಿಸಲಾಗಿದೆ. 

"

ಬಸಪ್ಪ ಹೊನವಾಡ ಜಮಖಂಡಿ ತಾಲೂಕಿನ ಹುನ್ನೂರ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಕಾಂ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದನು. ಹಲವು ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದನು. ಹಲವು ಬಾರಿ ಮರು ಪರೀಕ್ಷೆ ಬರೆದರೂ ಪಾಸಾಗಿಲ್ಲ ಎಂದು ಬಸಪ್ಪ ಹೊನವಾಡ ಹತಾಶೆಯಾಗಿದ್ದನು. ಹಲವು ಬಾರಿ ಪರೀಕ್ಷೆ ಬರೆದರೂ ನೀವು ನನ್ನನ್ನು ಪಾಸ್ ಮಾಡುತ್ತಿಲ್ಲ ಎಂದು ಮೌಲ್ಯಮಾಪನ ಕುಲಸಚಿವರೊಂದಿಗೆ ಜಗಳ ಕೂಡ ಮಾಡಿದ್ದ ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಗ ಮರು ಮೌಲ್ಯಮಾಪನಕ್ಕೆ ಹಾಕುವಂತೆ ಬಸಪ್ಪ ಹೊನವಾಡನಿಗೆ ಕುಲಸಚಿವರು ಸಲಹೆ ನೀಡಿದ್ದರು. ಆದರೆ ಅಷ್ಟಕ್ಕೆ ಸುಮ್ಮನಾಗದ ಬಸಪ್ಪ ಕುಲಸಚಿವರಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದನು ಎಂದು ತಿಳಿದು ಬಂದಿದೆ. 
ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಜನವರಿ 10ರ ರಾತ್ರಿ ಬೆಳಗಾವಿಗೆ ಬಂದಿದ್ದನು. ಜ.11ರ ತಡರಾತ್ರಿ 1.30ಕ್ಕೆ ಶೌಚಾಲಯದ ಮುಖಾಂತರ ಕಚೇರಿ ಒಳಗಡೆ ನುಗ್ಗಿದ್ದ ಬಸಪ್ಪ ರಾತ್ರಿ 3 ಗಂಟೆಗಳ ಕಚೇರಿಯೊಳಗೆ ಇದ್ದು 300 ಪ್ರಮಾಣ ಪತ್ರ ಹಾಗೂ ಸ್ಕ್ಯಾನರ್ ಕದ್ದು‌ ಪರಾರಿಗೆ ಯತ್ನಿಸಿದ್ದನು. 

ಈ ವೇಳೆ ಆರೋಪಿ ಬಸಪ್ಪ ಸೆಕ್ಯೂರಿಟಿ ಗಾರ್ಡ್‌ಗೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ವಿವಿ ಸಿಬ್ಬಂದಿ ಆರೋಪಿ ಬಸಪ್ಪನನ್ನ ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.