Asianet Suvarna News Asianet Suvarna News

ಬೆಂಗಳೂರು: ಪಿಎಸ್‌ಐಗೇ ಒದ್ದು ಹಲ್ಲೆ ಮಾಡಿದ ವಿದ್ಯಾರ್ಥಿ..!

ಬಸ್‌ ಪಾಸ್‌ ಜೊತೆ ಕಾಲೇಜು ಐಡಿ ಜೆರಾಕ್ಸ್‌ ತೋರಿಸಿದ್ದ ವಿದ್ಯಾರ್ಥಿ, ಇದಕ್ಕೆ ಕಂಡಕ್ಟರ್‌ ಆಕ್ಷೇಪಿಸಿದ್ದಕ್ಕೆ ನಿಂದನೆ, ಠಾಣೆಗೆ ಕಂಡಕ್ಟರ್‌ ದೂರು, ಠಾಣೆಯಲ್ಲಿ ಸಹೋದರನೊಂದಿಗೆ ವಿದ್ಯಾರ್ಥಿ ಅರಚಾಟ, ಗಲಾಟೆ ಕೇಳಿ ಹೊರಬಂದ ಎಸ್‌ಐಗೆ ಕಪಾಳ ಮೋಕ್ಷ, ವಿದ್ಯಾರ್ಥಿಯ ಬಂಧನ

Student Arrested For Assaulted to PSI in Bengaluru grg
Author
First Published Jun 15, 2023, 6:01 AM IST

ಬೆಂಗಳೂರು(ಜೂ.15):  ಬಿಎಂಟಿಸಿ ಬಸ್‌ನಲ್ಲಿ ಪಾಸ್‌ ವಿಚಾರವಾಗಿ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನುಚಿತ ವರ್ತನೆ ತೋರಿದ ಕಾರಣಕ್ಕೆ ಪೊಲೀಸ್‌ ಠಾಣೆಗೆ ಕರೆತಂದಾಗ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ದಂತ ವೈದ್ಯ ವಿದ್ಯಾರ್ಥಿಯೊಬ್ಬನನ್ನು ಪೀಣ್ಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಕುವೆಂಪುನಗರದ ನಿವಾಸಿ ಮೌನೇಶ್‌ (20) ಬಂಧಿತ. ಈ ಕೃತ್ಯದ ಬಳಿಕ ತಪ್ಪಿಸಿಕೊಂಡಿರುವ ವಿದ್ಯಾರ್ಥಿಯ ಸೋದರ, ಆಟೋ ಚಾಲಕ ಶರತ್‌ ಪತ್ತೆಗೆ ತನಿಖೆ ನಡೆದಿದೆ. ಗಂಗಮ್ಮನ ಗುಡಿ ಸರ್ಕಲ್‌ನಿಂದ ತುಮಕೂರು ರಸ್ತೆಯ ತನ್ನ ಕಾಲೇಜಿಗೆ ಬೆಳಗ್ಗೆ ಬಿಎಂಟಿಸಿ ಬಸ್‌ನಲ್ಲಿ ಮೌನೇಶ್‌ ಬರುವಾಗ ಈ ಗಲಾಟೆ ನಡೆದಿದೆ.

ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ

ಪಿಎಸ್‌ಐ ಮುಖಕ್ಕೆ ಪಂಚ್‌:

ತುಮಕೂರು ರಸ್ತೆಯ ಗೊರಗುಂಟೆಪಾಳ್ಯದ ಕೆಎಲ್‌ಇ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೌನೇಶ್‌ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ತೆರಳಲು ಬೆಳಗ್ಗೆ ಗಂಗಮ್ಮನ ಗುಡಿ ಸರ್ಕಲ್‌ನಲ್ಲಿ ಆತ ಬಿಎಂಟಿಸಿ ಬಸ್‌ ಹತ್ತಿದ್ದಾನೆ. ಆಗ ಟಿಕೆಟ್‌ ತೆಗೆದುಕೊಳ್ಳುವಂತೆ ನಿರ್ವಾಹಕ ಅಶೋಕ್‌ ಹೇಳಿದಾಗ ವಿದ್ಯಾರ್ಥಿ ತನ್ನ ಬಳಿ ಪಾಸ್‌ ಇದೆ ಎಂದಿದ್ದಾನೆ. ಆಗ ಪಾಸ್‌ ತೋರಿಸುವಂತೆ ನಿರ್ವಾಹಕ ಸೂಚಿಸಿದ್ದಾನೆ. ಪಾಸ್‌ ತೋರಿಸಿದಾಗ ನಿರ್ವಾಹಕ, ಕಾಲೇಜಿನ ಗುರುತಿನ ಪತ್ರ ತೋರಿಸುವಂತೆ ಮೌನೇಶ್‌ನನ್ನು ಕೇಳಿದ್ದಾನೆ. ಆತ ಗುರುತಿನ ಪತ್ರದ ಜೆರಾಕ್ಸ್‌ ಪ್ರತಿ ಪ್ರದರ್ಶಿಸಿದ್ದಾನೆ. ಇದಕ್ಕೆ ಆಕ್ಷೇಪಿಸಿದ ನಿರ್ವಾಹಕ, ಅಸಲಿ ಐಡಿ ತೋರಿಸುವಂತೆ ಕೇಳಿದ್ದಾನೆ. ಈ ಮಾತಿಗೆ ಕೆರಳಿದ ಮೌನೇಶ್‌, ‘ಮಹಿಳೆಯರು ಐಡಿ ಜೆರಾಕ್ಸ್‌ ಪ್ರತಿ ತೋರಿಸಿದರೆ ಸುಮ್ಮನೇ ಇರ್ತೀಯಾ’ ಎಂದು ಏರಿದ ದನಿಯಲ್ಲಿ ನಿಂದಿಸಿದ್ದಾನೆ. ಈ ಹಂತದಲ್ಲಿ ನಿರ್ವಾಹಕ ಹಾಗೂ ಮೌನೇಶ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಬಸ್‌ ನಿಲ್ಲಿಸಿ ನಿರ್ವಾಹಕನ ನೆರವಿಗೆ ಚಾಲಕ ಬಂದಿದ್ದಾನೆ. ಆಗ ಚಾಲಕ ಜತೆಗೂ ಮೌನೇಶ್‌ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ಈ ಗಲಾಟೆಯಿಂದ ಸಿಟ್ಟಿಗೆದ್ದ ಚಾಲಕ, ಅದೇ ಮಾರ್ಗದಲ್ಲೇ ಇದ್ದ ಪೀಣ್ಯ ಪೊಲೀಸ್‌ ಠಾಣೆಗೆ ಬಸ್‌ ತೆಗೆದುಕೊಂಡು ಹೋಗಿದ್ದಾನೆ. ಬಸ್ಸಿನಿಂದಿಳಿದು ಠಾಣೆಗೆ ತೆರಳಿ ಘಟನೆ ಸಂಬಂಧ ಚಾಲಕ ಹಾಗೂ ನಿರ್ವಾಹಕ ದೂರು ಸಲ್ಲಿಸುತ್ತಿದ್ದರು. ಅಷ್ಟರಲ್ಲಿ ತನ್ನ ಸೋದರ ಶರತ್‌ಗೆ ಕರೆ ಮಾಡಿ ನನ್ನ ಮೇಲೆ ಬಿಎಂಟಿಸಿ ಬಸ್‌ ಚಾಲಕ ಹಾಗೂ ನಿರ್ವಾಹಕ ಗಲಾಟೆ ಮಾಡಿದ್ದಾರೆ ಎಂದು ಮೌನೇಶ್‌ ಹೇಳಿದ್ದಾನೆ. ಅದೇ ಹೊತ್ತಿಗೆ ಜಾಲಹಳ್ಳಿ ಭಾಗದಲ್ಲೇ ಆಟೋ ಓಡಿಸುತ್ತಿದ್ದ ಶರತ್‌, ಕೂಡಲೇ ಸೋದರನ ರಕ್ಷಣೆಗೆ ಧಾವಿಸಿದ್ದಾನೆ. ತದನಂತರ ಠಾಣೆಯಲ್ಲಿ ಜೋರಾಗಿ ಸೋದರರು ಅರಚಾಡಿದ್ದಾರೆ.

ಈ ಕೂಗಾಟ ಕೇಳಿ ತಮ್ಮ ಕ್ಯಾಂಬೀನ್‌ನಿಂದ ಹೊರ ಬಂದ ಪಿಎಸ್‌ಐ ಸಿದ್ದು ಹೂಗಾರ ಅವರ ಕಪಾಳಕ್ಕೆ ಏಕಾಏಕಿ ಹೊಡೆದಿದ್ದಲ್ಲದೆ ತೊಡೆಗೆ ಕಾಲಿನಿಂದ ಮೌನೇಶ್‌ ಒದ್ದು ಹಲ್ಲೆ ನಡೆಸಿದ್ದಾನೆ. ಆಗ ಕುಸಿದು ಬಿದ್ದ ಪಿಎಸ್‌ಐ ನೆರವಿಗೆ ತಕ್ಷಣವೇ ಧಾವಿಸಿದ ಸಿಬ್ಬಂದಿ, ಹಲ್ಲೆ ನಡೆಸಿದ ಮೌನೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಹಂತದಲ್ಲಿ ಪೊಲೀಸರನ್ನು ತಳ್ಳಾಡಿ ಆಟೋ ತೆಗೆದುಕೊಂಡು ಶರತ್‌ ಪರಾರಿಯಾಗಿದ್ದಾನೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಿಎಸ್‌ಐ ಮರಳಿದ್ದಾರೆ. ಈ ಸಂಬಂಧ ಬಿಎಂಟಿಸಿ ನಿರ್ವಾಹಕ ಹಾಗೂ ಹಲ್ಲೆಗೊಳಗಾದ ಪಿಎಸ್‌ಐ ಸಿದ್ದು ನೀಡಿದ ದೂರುಗಳ ಆಧಾರದ ಮೇರೆಗೆ ಮೌನೇಶ್‌ ವಿರುದ್ಧ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಗನಿಗೆ ಪೊಲೀಸರಿಂದ ಹಲ್ಲೆ: ಮೌನೇಶ್‌ ತಂದೆ

ನನ್ನ ಮಗ ಮೌನೇಶ್‌ ತುಂಬಾ ಮೃದು ಸ್ವಭಾದವನಾಗಿದ್ದು, ಯಾವುದೇ ತಂಟೆ ತಕರಾರಿಗೆ ಹೋಗುವನಲ್ಲ. ಠಾಣೆಯಲ್ಲಿ ಮಗನನ್ನು ಕೂಡಿ ಹಾಕಿ ತಾವೇ ಮನಬಂದಂತೆ ಹೊಡೆದು ಈಗ ಆತನ ಮೇಲೆಯೇ ಪೊಲೀಸರು ಹಲ್ಲೆ ಆರೋಪ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿ ಮೌನೇಶ್‌ ತಂದೆ ರಾಜ ಕಿಡಿಕಾರಿದ್ದಾರೆ.

ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಮಂಗಳವಾರ ಪ್ರಕಟವಾದ ನೀಟ್‌ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಮಗನಿಗೆ ಬೇಸರವಾಗಿತ್ತು. ಹೀಗಾಗಿ ಬೆಳಗ್ಗೆ ಆತನನ್ನು ನಾನೇ ಗಂಗಮ್ಮನಗುಡಿ ಸರ್ಕಲ್‌ನಲ್ಲಿ ಬಿಬಿಎಂಟಿಸಿ ಬಸ್‌ ಹತ್ತಿಸಿದ್ದೆ. ಇದಾದ ಕೆಲ ಹೊತ್ತಿಗೆ ನನಗೆ ಅಳುತ್ತ ಕರೆ ಮಾಡಿ ಪೀಣ್ಯ ಠಾಣೆಗೆ ಕರೆತಂದಿದ್ದಾರೆ ಎಂದು ಮೌನೇಶ್‌ ಹೇಳಿದೆ. ಕೂಡಲೇ ನಾನೇ ಠಾಣೆಗೆ ಹೊರಟು ಬಂದೆ. ಆ ವೇಳೆಗೆ ಆತನಿಗೆ ಪೊಲೀಸರು ಹೊಡೆಯುತ್ತಿದ್ದರು. ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ರಾಜ ಆರೋಪಿಸಿದ್ದಾರೆ.

ಪಿಎಸ್‌ಐ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿರುವುದಕ್ಕೆ ಪುರಾವೆಯಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿವೆ. ಪೊಲೀಸರ ವಿರುದ್ಧ ವಿದ್ಯಾರ್ಥಿ ಪೋಷಕರು ಲಿಖಿತವಾಗಿ ದೂರು ನೀಡಿದರೆ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಅಂತ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದ್ದಾರೆ.  

Follow Us:
Download App:
  • android
  • ios