ಬೆಳಗಾವಿ(ಜೂ.26): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತೇನೆ ಎಂದು ಭೀತಿಗೊಂಡ ವಿದ್ಯಾರ್ಥಿನಿ ಬುಧವಾರ ತಡರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಡಗಾವಿಯಲ್ಲಿ ಸಂಭವಿಸಿದೆ. 

ವಡಗಾವಿ ಪ್ರದೇಶದ ಕಲ್ಮೇಶ್ವರ ಗಲ್ಲಿಯ ಸುಜಾತಾ ಸುಭಾಷ್‌ ಢಗೆ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿ, ಓದಿದ ವಿಷಯ ನೆನಪಿಲ್ಲ ಪರೀಕ್ಷೆ ಬರೆದರೆ ಅನುತ್ತೀರ್ಣನಾಗುತ್ತೇನೆ ಎಂದು ಭಯಗೊಂಡು ಪರೀಕ್ಷೆಯ ಮುನ್ನಾ ದಿನವೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಹಾಪುರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

20 ವಿದ್ಯಾರ್ಥಿಗಳನ್ನು ಹೊರಹಾಕಿದ ಸಿಬ್ಬಂದಿ

ಧಾರವಾಡ: ಬಾಸೆಲ್‌ ಮಿಶನ್‌ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ 20ಕ್ಕೂ ಹೆಚ್ಚು ಬಾಹ್ಯ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮುಖ್ಯ ಶಿಕ್ಷಕರ ದೃಢೀಕರಣ ಪತ್ರ ತಂದಿರಲಿಲ್ಲ. ಹೀಗಾಗಿ ಅವರನ್ನು ಕೆಲ ಹೊತ್ತು ಹೊರಹಾಕಿದ ಪ್ರಸಂಗ ನಡೆಯಿತು. 

ಅಬ್ಬಬ್ಬಾ..! ಶಿಕ್ಷಕಿ ಮನೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

ಆಗ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಯಂ ದೃಢೀಕರಣ ಪತ್ರ ಬರೆಸಿಕೊಂಡು ಪರೀಕ್ಷೆಗೆ ಅವಕಾಶ ಕೊಡಲಾಯಿತು. ಮುಂದಿನ ಪರೀಕ್ಷೆಗೆ ದೃಢೀಕರಣ ಪತ್ರ ತಂದ ನಂತರ ಅವಕಾಶ ಮಾಡಿಕೊಡುವುದಾಗಿ ಅವರಿಗೆ ಎಚ್ಚರಿಕೆ ನೀಡಲಾಯಿತು.

ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಕುಳಿತಿದ್ದ ಕಂಟೈನ್ಮೆಂಟ್‌ ಜೋನ್‌ ವಿದ್ಯಾರ್ಥಿ

ಬಳ್ಳಾರಿ: ಜಿಲ್ಲೆಯ ಕಂಪ್ಲಿಯ ಎಸ್‌ಜಿಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಕಂಟೈನ್ಮೆಂಟ್‌ ಪ್ರದೇಶದ ವಿದ್ಯಾರ್ಥಿ ಎಲ್ಲ ವಿದ್ಯಾರ್ಥಿಗಳ ಜತೆ ಪರೀಕ್ಷೆಗೆ ಕುಳಿತಿದ್ದು, ಬಳಿಕ ವಿದ್ಯಾರ್ಥಿಯನ್ನು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಲಾಯಿತು.

ಕಂಟೈನ್ಮೆಂಟ್‌ ಜೋನ್‌ ವಿದ್ಯಾರ್ಥಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ಇದರ ಜವಾಬ್ದಾರಿಯನ್ನು ಅಧಿಕಾರಿಯೊಬ್ಬರಿಗೆ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಯನ್ನು ಕರೆ ತಂದ ವಾಹನ ಚಾಲಕ ನಿಗದಿತ ಅವಧಿಗಿಂತ ಮೊದಲೇ ಆಗಮಿಸಿದ್ದರಿಂದ ಎಲ್ಲರ ಜತೆ ಸ್ಕ್ರೀನಿಂಗ್‌ ಮಾಡಿಸಿಕೊಂಡ ವಿದ್ಯಾರ್ಥಿ ಎಲ್ಲ ವಿದ್ಯಾರ್ಥಿಗಳ ಜೊತೆಯಲ್ಲೇ ಪರೀಕ್ಷೆಗೆ ಕುಳಿತಿದ್ದ. ಇತ್ತ ಇನ್ನೂ ವಿದ್ಯಾರ್ಥಿ ಬಂದಿಲ್ಲ ಎಂದು ಕಾಯುತ್ತ ನಿಂತಿದ್ದ ಅಧಿಕಾರಿಗೆ ಆತಂಕವಾಗಿದ್ದು, ಕೊನೆಗೆ ವಿದ್ಯಾರ್ಥಿ ಆಗಲೇ ಕೇಂದ್ರದಲ್ಲಿದ್ದಾನೆ ಎಂದು ತಿಳಿದು ಆತನನ್ನು ಪ್ರತ್ಯೇಕ ಕೋಣೆಗೆ ಕಳಿಸಿ, ಪರೀಕ್ಷೆ ಬರೆಸಲಾಯಿತು.