ತಾಯಿ ಮತ್ತು ಹೆಂಡತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವಲಿಂಗಪ್ಪ(60) ಕೊಲೆಯಾದವ.

ಹಗರಿಬೊಮ್ಮನಹಳ್ಳಿ (ನ.12): ತಾಯಿ ಮತ್ತು ಹೆಂಡತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವಲಿಂಗಪ್ಪ(60) ಕೊಲೆಯಾದವ. ಮಗ ಶಂಕ್ರಪ್ಪ ಕೊಲೆ ಮಾಡಿದ ಆರೋಪಿ. ಶಿವಲಿಂಗಪ್ಪ ತನ್ನ ಪತ್ನಿಗೆ ನಿತ್ಯವೂ ದೈಹಿಕ, ಮಾನಸಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ತನ್ನ ಮಗ ಶಂಕ್ರಪ್ಪನ ಹೆಂಡತಿ ಸ್ನಾನ ಮಾಡುವ ವೇಳೆ ಕದ್ದುಮುಚ್ಚಿ ನೋಡುತ್ತಿದ್ದ. ಈ ಕುರಿತು ಮಗ ಶಂಕ್ರಪ್ಪ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ, ತನ್ನ ಚಾಳಿಯನ್ನು ಬಿಡದೆ ಮುಂದುವರಿಸಿದ್ದ.

ಇದರಿಂದಾಗಿ ತಂದೆ ಮತ್ತು ಮಗನ ನಡುವೆ ಸೋಮವಾರ ಪುನಃ ಜಗಳ ನಡೆದಿದೆ. ಶಂಕ್ರಪ್ಪ ತನ್ನ ತಂದೆಯನ್ನು ಜಗಳದಲ್ಲಿ ತಳ್ಳಿದ್ದರಿಂದ ಒಳಕಲ್ಲು ಮೇಲೆ ಬಿದ್ದಿದ್ದಾನೆ. ತಕ್ಷಣವೇ ಅಲ್ಲಿಯೆ ಇದ್ದ ಒನಕೆಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ಕುರಿತು ಮೃತನ ಪತ್ನಿ ನೀಡಿದ ದೂರಿನ ಅನ್ವಯ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗ ಶಂಕ್ರಪ್ಪನನ್ನು ಕೊಲೆ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಪಿ. ಲಮಾಣಿ ಭೇಟಿ ನೀಡಿದ್ದರು.

ಪತಿಯಿಂದ ಪತ್ನಿಯ ಕೊಲೆ

ವಿಪರೀತ ಪಾನಮತ್ತನಾಗಿ ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮದ ಅಂದಗೋವೆ ಖಾಸಗಿ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಿದ್ದ ಪತಿ ಮುತ್ತ ಭಾನುವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಪತ್ನಿ ಲತಾ (45) ಎಂಬಾಕೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗದು ಪತ್ನಿಯ ತಲೆಗೆ ಬಲವಾಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಲತಾಳನ್ನು ಸ್ಥಳದಲ್ಲೇ ಹತ್ಯೆಗೈದಿದ್ದಾನೆ.

ಸೋಮವಾರ ಸಂಜೆ ಲತಾಳ ಅಕ್ಕ ವಳ್ಳಿಯಮ್ಮ ಎಂಬಾಕೆ ದೂರು ನೀಡಿದ ಮೇರೆ ಸುಂಟಿಕೊಪ್ಪ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಮುತ್ತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ದಿನೇಶ್‌ ಕುಮಾರ್, ಸುಂಟಿಕೊಪ್ಪ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.