ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ನಡೆದ ಘಟನೆ. 

ಉತ್ತರಕನ್ನಡ(ಏ.23): ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಗನೇ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಗ ಭರತ್ ಮೇಸ್ತಾ (26), ಕೆಲವು ತಿಂಗಳ ಹಿಂದೆಯಷ್ಟೇ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದ. ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗದ ಮಗನನ್ನು ಮನೆಯಿಂದ ಆಚೆ ಬಿಡದೆ ಮನೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯಲು ಹೇಳುತ್ತಿದ್ದ ಅಪ್ಪ ಪಾಂಡುರಂಗ ಮೇಸ್ತಾ (62)ನನ್ನು ಕಿರಾತಕ ಮಗ ಕೊಂದೇ ಹಾಕಿದ್ದಾನೆ. 

ಕೊಲೆಗೀಡಾದ ಪಾಂಡರಂಗ ಮೇಸ್ತಾ ಅವರಿಗೆ ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದು, ಆರೋಪಿ ಕೊನೆಯವನಾಗಿದ್ದಾನೆ. ಹೆಣ್ಣು ಮಗಳಿಗೆ ಮದುವೆಯಾಗಿದ್ದು, ಮೊದಲನೇ ಮಗ ವಿಶಾಲ್ (30) ಹೊನ್ನಾವರದಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ತಾಯಿ ಸವಿತಾ ದೇವಸ್ಥಾನಕ್ಕೆ ಹೋಗಿದ್ದು, ಹಿರಿಯ ಮಗ ಕೆಲಸಕ್ಕೆ ತೆರಳಿದ್ದ. ಮಧ್ಯಾಹ್ನ ಕೆಲಸ ಮುಗಿಸಿ ಬಂದಿದ್ದ ಅಪ್ಪನ ಜತೆ ಆರೋಪಿ ಪುತ್ರ ಔಷಧಿ ಸೇವನೆ‌ ವಿಚಾರ ಸಂಬಂಧಿಸಿ ಜಗಳವಾಡಿದ್ದ. ನಂತರ ಊಟ ಮುಗಿಸಿ ತಂದೆ ಮಲಗಿದ್ದರೂ, ಕೋಪದಿಂದ ಕುದಿಯುತ್ತಿದ್ದ ಮಗ ಚಾಕುವಿನಿಂದ ತಂದೆಯ ಕುತ್ತಿಗೆ ಭಾಗಕ್ಕೆ 4 ಬಾರಿ ಇರಿದಿದ್ದಾನೆ.‌ ಮಗನಿಂದ ತಪ್ಪಿಸಿಕೊಳ್ಳಲು ಸೋಫಾ ಕೆಳಗೆ ಅವಿತಾಗ ಮತ್ತೆ ಗ್ರೈಂಡರ್ ಸ್ಟ್ಯಾಂಡ್‌ನಿಂದ ಹೊಡೆದು ತಂದೆಯನ್ನು ಸಾಯಿಸಿದ್ದಾನೆ.

ಹತ್ಯೆಯಾದ ಗ್ಯಾಂಗ್‌ಸ್ಟಾರ್ ಅತೀಕ್‌ ಸಾವಿರಾರು ಕೋಟಿಯ ಒಡೆಯ

ಕೃತ್ಯ ನಡೆಸುವ ವೇಳೆ ಮನೆಯ ನಾಲ್ಕು ಬಾಗಿಲು ಹಾಕಿದ್ದ‌ ಆರೋಪಿ, ಕೊಲೆಯ ಬಳಿಕ ಮನೆಯ ಒಳಗೇ ಅವಿತು ಕುಳಿತಿದ್ದ. ಗಲಾಟೆ ಕೇಳಿ ಸ್ಥಳೀಯರು ಓಡಿ‌ ಬಂದು ಬಾಗಿಲು‌ ಒಡೆದ ಬಳಿಕ ಆರೊಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗನಿಗೆ ಔಷಧಿ ವಿಚಾರದಲ್ಲಿ ಬೈದದ್ದಕ್ಕೆ ಕೊಲೆಯಾಗಿದ್ಯಾ ಅಥವಾ ಇತರ ವಿಚಾರದಲ್ಲಿ ಗಲಾಟೆಯಾಗಿದೆಯೇ ಎಂದು ವಿಚಾರಣೆ ಮುಂದುವರಿಸಿದ್ದಾರೆ.