* ಮಂಗಳೂರು ನಗರದ ಮೋರ್ಗನ್ಸ್‌ಗೇಟ್ ಸಮೀಪ ನಡೆದ ಘಟನೆ* ವೇತನಕ್ಕೆ ಸಂಬಂಧಪಟ್ಟಂತೆ ಗುಂಡು ಹಾರಾಟ ನಡೆದಿದೆಯೇ? * ಸಿಸಿಟಿವಿ ಫುಟೇಜ್ ವಶಕ್ಕೆ ಪಡೆದ ಪೊಲೀಸರು
ಮಂಗಳೂರು(ಅ.06): ಕ್ಷುಲ್ಲಕ ಕಾರಣಕ್ಕೆ ಆವೇಶಗೊಂಡ ಉದ್ಯಮಿಯೊಬ್ಬರು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ ಪರಿಣಾಮ ಪುತ್ರ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಮೋರ್ಗನ್ಸ್‌ಗೇಟ್ ಸಮೀಪ ಮಂಗಳವಾರ ಸಂಜೆ ನಡೆದಿದೆ.
ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಎಂಬವರೇ ಗುಂಡು ಹಾರಿಸಿದ ವ್ಯಕ್ತಿ ಎಂದು ಹೆಸರಿಸಲಾಗಿದೆ. ಪುತ್ರ ಸುಧೀಂದ್ರ (16) ತಂದೆಯಿಂದಲೇ ಗಂಭೀರವಾಗಿ ಗಾಯಗೊಂಡವರು. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿ ರಾಜೇಶ್ ಪ್ರಭುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಮೋರ್ಗನ್ಸ್‌ಗೇಟ್ ಸಮೀಪದಲ್ಲಿ ಸರಕು ಸಾಗಾಟ ಸಂಸ್ಥೆಯಾದ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಕಚೇರಿ ಬಳಿ ಮಂಗಳವಾರ ಸಂಜೆ 3.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಂಸ್ಥೆಯ ಮಾಲೀಕ ರಾಜೇಶ್ ಎಂಬವರಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯು ವೇತನದ ಬಗ್ಗೆ ವಿಚಾರಿಸಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕ ಹಾಗೂ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದು, ರಾಜೇಶ್ ಸಿಟ್ಟಿನಲ್ಲಿ ತನ್ನಲ್ಲಿದ್ದ ಪಿಸ್ತೂಲಿನಿಂದ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗ್ಳೂರಲ್ಲಿ ಕಳೆದ 21 ದಿನದಲ್ಲಿ 6 ಶೂಟೌಟ್..!
ದುರದೃಷ್ಟವಶಾತ್ ಗುಂಡು ತಪ್ಪಿ ತನ್ನ ಮಗನ ತಲೆಗೇ ತಾಗಿದೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿದೆ. ಆತನ ಸ್ಥಿತಿ ಚಿಂತಾಜನಕವಾಗಿದ್ದು, ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಬಾಲಕನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್(Police) ಕಮಿಷನರ್ ಶಶಿಕುಮಾರ್ ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಉದ್ಯಮಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ವೇತನದ ಬಗ್ಗೆ ವಿಚಾರಿಸಲು ಬಂದಿದ್ದ ಸಿಬ್ಬಂದಿಗೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಎರಡು ಸುತ್ತು ಗುಂಡು ಹಾರಾಟ: ಕಮೀಷನರ್
ಮೋರ್ಗನ್ಸ್‌ಗೇಟ್ ಶೂಟೌಟ್(Shootout) ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಮೋರ್ಗನ್ಸ್‌ಗೇಟ್ ಸಮೀಪ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸಂಸ್ಥೆಯನ್ನು ರಾಜೇಶ್ ಪ್ರಭು ಎಂಬವರು ನಡೆಸುತ್ತಿದ್ದಾರೆ. ಉದ್ಯಮಿಯಲ್ಲಿ ಪರವಾನಿಗೆ ಪಡೆದ ಪಿಸ್ತೂಲ್ ಇದೆ ಎಂಬ ಮಾಹಿತಿ ಇದೆ. ಸುಮಾರು 3.30ರ ಸುಮಾರಿಗೆ ಘಟನೆ ನಡೆದಿದೆ. ರಾಜೇಶ್ ಮಧ್ಯಾಹ್ನ ಪಿಸ್ತೂಲ್ ಸಹಿತ ಸಂಸ್ಥೆಯ ಕಚೇರಿಗೆ ಬಂದಿದ್ದಾರೆ. ಕಚೇರಿ ಬಳಿ ಗೊಂದಲಮಯ ವಾತಾವರಣ ಏರ್ಪಟ್ಟವೇಳೆ ಉದ್ಯಮಿಯಿಂದ ಎರಡು ಸುತ್ತು ಗುಂಡು ಹಾರಾಟ ನಡೆದಿದೆ. ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷ ಪತ್ತೆಯಾಗಿವೆ ಎಂದರು.
ಸಿಸಿಟಿವಿ ಫುಟೇಜ್ ವಶಕ್ಕೆ:
ವೇತನಕ್ಕೆ ಸಂಬಂಧಪಟ್ಟಂತೆ ಗುಂಡು ಹಾರಾಟ ನಡೆದಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಹಣಕಾಸು ವಿಚಾರದಲ್ಲಿ ದುರ್ಘಟನೆ ಸಂಭವಿಸಿದೆ ಎಂಬ ಊಹಾಪೋಹ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರವೇ ಘಟನೆಗೆ ನಿರ್ದಿಷ್ಟ ಕಾರಣ ಬೆಳಕಿಗೆ ಬರಲಿದೆ. ಗುಂಡೇಟು ತಿಂದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಹತ್ತು ಹಲವು ಗಾಳಿಸುದ್ದಿಗಳು ಹರಡುತ್ತಿವೆ. ಹಾಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್‌ಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
