ಹಳೆ ಮೊಬೈಲ್ ಕೊಟ್ಟರೂ ಹೊಸ ಮೊಬೈಲ್‌ಗೆ ಪಟ್ಟು ಹಿಡಿದಿದ್ದ ಮಗ! ತನ್ನ ಜನ್ಮದಿನದಂದು ಮಗನ ಹೆಸರಲ್ಲಿ ಹಣ ಡಿಪಾಸಿಟ್ ಇಟ್ಟಿದ್ದ ಪಿಗ್ಮಿ ಕಲೆಕ್ಟರ್  ತಂದೆ  ಮೊಬೈಲ್ ಕೊಡಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮಗ ನೇಣಿಗೆ ಶರಣು!

ಬೆಳಗಾವಿ (ಜು.13): ತಂದೆ ತಾಯಿ ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ 17 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಕರ್ಣಿಯಲ್ಲಿ ನಡೆದಿದೆ. ಹಲಕರ್ಣಿಯ ಅಂಬೇಡ್ಕರ್ ಬೀದಿಯಲ್ಲಿ ವಾಸವಿದ್ದ ರಾಜು ಕೋಳಿ ಸ್ಥಳೀಯ ಸೊಸೈಟಿಯೊಂದರಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರೆ ರಾಜು ಪತ್ನಿ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು‌. ಮಗ ಪ್ರಥಮೇಶ್ ಚೆನ್ನಾಗಿ ಓದಿ ವಿದ್ಯಾವಂತನಾಗಲಿ ಎಂದು ಎಸ್‌ಎಸ್‌ಎಲ್‌ಸಿ ಮುಗಿದ ಬಳಿಕ ಬೆಳಗಾವಿಯ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಪ್ರಥಮೇಶ್‌ಗೆ ಮೊಬೈಲ್ ಹುಚ್ಚಿತ್ತು‌. ತಂದೆ ಬಳಿ ಹೊಸ ಮೊಬೈಲ್ ಕೊಡಿಸುವಂತೆ ಪಟ್ಟು ಹಿಡಿದಿದ್ದ. ಸದ್ಯಕ್ಕೆ ಮನೆಯಲ್ಲಿರುವ ಹಳೆಯ ಫೋನ್ ಬಳಸು, ನಾಲ್ಕು ದಿನಗಳ ಬಳಿಕ ಹೊಸ ಮೊಬೈಲ್ ಕೊಡಿಸೋದಾಗಿ ತಂದೆ ತಾಯಿ ಬುದ್ದಿವಾದ ಹೇಳಿದ್ದರು. ಆದ್ರೆ ಇದರಿಂದ ಮನನೊಂದ ಪ್ರಥಮೇಶ್ ಇಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಪ್ರಥಮೇಶ್ ತಂದೆ ರಾಜು ಕೋಳಿ ಜನ್ಮದಿನವೂ ಇತ್ತು.‌ ತನ್ನ ಜನ್ಮದಿನದಂದು ಮಗನ ಭವಿಷ್ಯಕ್ಕಾಗಿ ಮಗ ಪ್ರಥಮೇಶ್ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿ ಬ್ಯಾಂಕ್‌ ನಲ್ಲಿ ಫಿಕ್ಸ್ ಡಿಪಾಜಿಟ್ ಇಟ್ಟಿದ್ದ. ಆದ್ರೆ ಮನೆಗೆ ಬರುವಷ್ಟರಲ್ಲೇ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ತಂದೆಯ ಜನ್ಮದಿನದಂದೇ ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ.

ಕಾವೇರಿ ನದಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ: ಕೃಷ್ಣರಾಜಸಾಗರ ಜಲಾಶಯ ಬಳಿ ಕಾವೇರಿ ನದಿಗೆ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೈಸೂರಿನ ಪಡುವಾರಹಳ್ಳಿ ನಿವಾಸಿ ಸೃಜನ್‌ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸ್ನೇಹಿತರೊಂದಿಗೆ ಕೆಆರ್‌ಎಸ್‌ ಜಲಾಶಯ ವೀಕ್ಷಣೆಗೆ ಆಗಮಿಸಿದ್ದ ಸಮಯದಲ್ಲಿ ಸೃಜನ್‌ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೃಷ್ಣರಾಜಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಳೆ ಶವಕ್ಕಾಗಿ ಶೋಧ ಕಾರ್ಯ ನಡೆಯಲಿದೆ.

ಗುಟ್ಕಾ ವ್ಯಾಪಾರಿ ಹತ್ಯೆ ಕೇಸ್‌ ನಲ್ಲಿ ದಂಪತಿ ಸೆರೆ

ಸಾಲಬಾಧೆ ರೈತ ಆತ್ಮಹತ್ಯೆ
ಶ್ರೀರಂಗಪಟ್ಟಣ: ಸಾಲಬಾಧೆಯಿಂದ ನೇಣು ಬಿಗಿದು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಿರೀಶ್‌ (38) ಮೃತ ರೈತ. ತನ್ನ 1 ಎಕರೆ ಕೃಷಿ ಭೂಮಿಯನ್ನು ನಂಬಿ ಬದುಕು ಸಾಗಿಸುತ್ತಿದ್ದ ಗಿರೀಶ್‌ ಕರ್ಣಾಟಕ ಬ್ಯಾಂಕ್‌ ಹಾಗೂ ಇತರೆ ಕೈ ಸಾಲಗಳು ಸೇರಿದಂತೆ ಒಟ್ಟು 5 ಲಕ್ಷ ರು. ಕೃಷಿಗಾಗಿ ಸಾಲ ಮಾಡಿದ್ದರು. ಇತ್ತೀಚೆಗೆ ಬಿದ್ದ ನಿರಂತರ ಮಳೆಯಿಂದ ಬೆಳೆ ಹಾನಿಯಾಗುವುದರ ಜೊತೆಗೆ ವೈಜ್ಞಾನಿಕ ಬೆಲೆ ಸಿಗದ ಕಾರಣ ಇದನ್ನೇ ನಂಬಿ ಬದುಕು ಮಾಡುತ್ತಿದ್ದ ಗಿರೀಶ್‌ಗೆ ಇತ್ತೀಚೆಗೆ ಕರ್ಣಾಟಕ ಬ್ಯಾಂಕ್‌ನಿಂದ ಸಾಲ ಮರು ಪಾವತಿಗಾಗಿ ನೋಟಿಸ್‌ ಬಂದಿತ್ತು. ಇದರಿಂದ ಮನನೊಂದು ಗಿರೀಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಒಳಗಾದ ರೈತನಿಗೆ ತಾಯಿ ರತ್ನ, ಅಣ್ಣ ಹರೀಶ್‌, ಪತ್ನಿ ಬಿ.ಎಸ್‌.ಅಂಜಲಿ, ಓರ್ವ ಪುತ್ರ ಕೆ.ಜಿ.ಮೋಹನ್‌ (13) ಇದ್ದಾರೆ. ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಗಿರೀಶ್‌ ಆತ್ಮಹತ್ಯೆಯಿಂದ ರೈತನ ಕುಟುಂಬ ಕಂಗಾಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.