ಬೆಂಗಳೂರು(ಜು.24):  ಜೀವನದಲ್ಲಿ ಜಿಗುಪ್ಸೆಗೊಂಡು ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ನಗರದಲ್ಲಿ ನಡೆದಿದೆ.

ಹೆಗಡೆ ನಗರದ ನಿಕೋ ಹೋಮ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಖಾಲಿದ್‌ ಮಹಮ್ಮದ್‌ (32) ಮೃತ ದುರ್ದೈವಿ. ತನ್ನ ಫ್ಲ್ಯಾಟ್‌ನಲ್ಲಿ ಬುಧವಾರ ಬೆಳಗ್ಗೆ ಖಾಲಿದ್‌ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಸಂಜೆ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಫ್ಲ್ಯಾಟ್‌ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಹೆಣ್ಣು ಮಗಳು ಜನಿಸಿದ್ದಕ್ಕೆ ತಂದೆ ಆತ್ಮಹತ್ಯೆ, ಹೃದಯಾಘಾತದಲ್ಲಿ ತಾಯಿಯೂ ಸಾವು..!

ಮೈಸೂರು ಮೂಲದ ಖಾಲಿದ್‌, ಕೆಲ ತಿಂಗಳಿಂದ ನಿಕೋ ಹೋಮ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. 6 ತಿಂಗಳ ಹಿಂದೆ ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ನಿಶ್ಚಿತಾರ್ಥವಾದ ಬಳಿಕ ಖಾಲಿದ್‌ ಅವರ ಮದುವೆ ಮುರಿದು ಬಿದ್ದಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಖಾಲಿದ್‌, ಕುಟುಂಬದ ಸದಸ್ಯರಿಂದ ಪ್ರತ್ಯೇಕವಾಗಿದ್ದರು. ಯಾರೊಂದಿಗೂ ಮಾತಿಲ್ಲದೆ ಅಂರ್ತಮುಖಿ ಆಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲೇ ಖಾಲಿದ್‌, ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಲಿದ್‌ ಮೊಬೈಲ್‌ಗೆ ಬುಧವಾರ ನಿರಂತರವಾಗಿ ಸಿಂಗಾಪುರದಲ್ಲಿ ನೆಲೆಸಿರುವ ಆತನ ಹಿರಿಯ ಸೋದರ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಅವರು, ಕೂಡಲೇ ಅಪಾರ್ಟ್‌ಮೆಂಟ್‌ ಸಮಿತಿಗೆ ಮಾಹಿತಿ ನೀಡಿದ್ದರು. ಅಂತೆಯೇ ಭದ್ರತಾ ಸಿಬ್ಬಂದಿ ಫ್ಲ್ಯಾಟ್‌ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹದ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.