ಮಠದ ಭಕ್ತರ ವೇಷದಲ್ಲಿ ಯುವಕನ ಭೇಟಿಯಾಗಿ ಹಿಡಿದ ಅರಣ್ಯಾಧಿಕಾರಿಗಳು ಚಿರತೆ ಚರ್ಮ, 17 ಉಗುರು, ದವಡೆ, ಬೈಕ್‌ ಜಪ್ತಿ

ಬೆಂಗಳೂರು(ಸೆ.08): ಹಣದಾಸೆಗೆ ಚಿರತೆ ಚರ್ಮ ಹಾಗೂ ಉಗುರು ಮಾರಾಟಕ್ಕೆ ಯತ್ನಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ನನ್ನು ಸಿಐಡಿ ಅರಣ್ಯ ಘಟಕದ ಬೆಂಗಳೂರು ಅರಣ್ಯ ಸಂಚಾರಿ ದಳ ಮಠವೊಂದರ ಭಕ್ತರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದೆ.

ತುರುವೆಕೆರೆ ತಾಲೂಕು ಬೆನಕನಕೆರೆ ಗ್ರಾಮದ ನಿವಾಸಿ, ಹಾಲಿ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೆಲೆಸಿರುವ ಬಿ.ಎಸ್‌.ಪುಟ್ಟರಾಜು ಬಂಧಿತನಾಗಿದ್ದು, ಆರೋಪಿಯಿಂದ ಚಿರತೆ ಚರ್ಮ, 17 ಉಗುರು, ದವಡೆ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ತನಿಖೆ ಮುಂದುವರಿದಿದೆ.

Uttar Pradesh: ₹ 10 ಕೋಟಿ ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ: ವಾಂತಿಗೇಕಿಷ್ಟು ಬೆಲೆ ನೋಡಿ..!

ಚಿರತೆ ಚರ್ಮ ಮಾರಾಟಕ್ಕೆ ಸಾಫ್‌್ಟವೇರ್‌ ಉದ್ಯೋಗಿ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತು. ಎರಡು ದಿನಗಳ ಹಿಂದೆ ಅರಣ್ಯ ಸಂಚಾರಿ ದಳದ ಇನ್‌ಸ್ಪೆಕ್ಟರ್‌ ಸಂಜೀವ್‌ ಕುಮಾರ್‌ ಮಹಾಜನ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಎನ್‌.ಲತಾ ನೇತೃತ್ವದ ತಂಡ, ಮಠವೊಂದರ ಭಕ್ತರಂತೆ ಮಾರು ವೇಷದಲ್ಲಿ ಚಿರತೆ ಚರ್ಮ ಖರೀದಿ ನೆಪದಲ್ಲಿ ಕಾರ್ಯಾಚರಣೆ ನಡೆಸಿ ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ಚಿಕ್ಕಬೆನಕನಕೆರೆ ಸಮೀಪ ಮಾಲೀನ ಸಮೇತ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೂಗಲ್‌ನಲ್ಲಿ ಮಾರಾಟದ ಮಾಹಿತಿ:

ತುರುವೆಕೆರೆ ತಾಲೂಕು ಬೆನಕನಕೆರೆ ಗ್ರಾಮದ ಎಂಜಿನಿಯರ್‌ ಪದವೀಧರ ಪುಟ್ಟರಾಜು, ನಗರದ ಎಚ್‌ಎಸ್‌ಆರ್‌ ಲೇಔಟ್‌ ಸಮೀಪ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಹಣದಾಸೆಗೆ ವನ್ಯ ಜೀವಿ ಹಾಗೂ ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ನಿರ್ಧರಿಸಿ ಈ ಸಂಬಂಧ ಗೂಗಲ್‌ನಲ್ಲಿ ಮಾಹಿತಿ ಮಾಹಿತಿ ಸಂಗ್ರಹಿಸಿದ್ದ. ಕೆಲ ದಿನಗಳ ಹಿಂದೆ ಕಾಡುಗಳ್ಳರಿಂದ ಆತನಿಗೆ ಚಿರತೆ ಚರ್ಮ, ಉಗುರು ಹಾಗೂ ದವಡೆಗಳು ಸಿಕ್ಕಿವೆ. ಬೇಟೆಗಾರರ ಪ್ರತಿನಿಧಿಯಾಗಿ ಚಿರತೆ ಚರ್ಮ ಮಾರಾಟ ಮಾಡಲು ಸಾರ್ವಜನಿಕರನ್ನು ಆತ ಸಂಪರ್ಕಿಸಿರುವ ಬಗ್ಗೆ ಬಾತ್ಮೀದಾರರಿಂದ ನಮಗೆ ಮಾಹಿತಿ ಸಿಕ್ಕಿತು ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಚಿರತೆ ಉತ್ಪನ್ನ ಖರೀದಿಸುವ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿದ್ದರು. ಆಗ ತುರುವೆಕೆರೆ ತಾಲೂಕಿನಲ್ಲಿರುವ ತನ್ನೂರು ಬೆನಕನಕೆರೆ ಗ್ರಾಮದ ಬಳಿಗೆ ಬರುವಂತೆ ಆರೋಪಿ ಸೂಚಿಸಿದ್ದ. ಅಂತೆಯೇ ಸೆ.5ರಂದು ಆತನ ಊರಿಗೆ ತೆರಳಿ ಮಾರಾಟ ಮಾಡಲು ಬಂದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನೀನ್ ಬೇಡ..ನನಗೆ ಬಾಯ್‌ಫ್ರೆಂಡೇ ಬೇಕು ಎಂದ ಪತ್ನಿ ಗಂಡನನ್ನೇ ಕೊಂದಳು..!

15 ದಿನಗಳ ಹಿಂದೆ ಕೊಂದ ಚಿರತೆ?

ಜಪ್ತಿಯಾದ ಚಿರತೆ ಚರ್ಮ, ಉಗುರು ಹಾಗೂ ದವಡೆ ವಾಸನೆ ಬರುತ್ತಿದೆ. ಹೀಗಾಗಿ ಚಿರತೆಯನ್ನು 15 ದಿನಗಳ ಹಿಂದೆ ಕೊಂದು ಚರ್ಮ, ಉಗುರು ಹಾಗೂ ದವಡೆ ತಂದಿರುವ ಸಾಧ್ಯತೆಗಳಿವೆ. ಯಾವ ಕಾಡಿನಲ್ಲಿ ಚಿರತೆ ಕೊಲ್ಲಲಾಗಿದೆ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಮೈಸೂರಿನ ಮಠದ ಭಕ್ತರ ವೇಷ!

ನಾವು ಮೈಸೂರು ಜಿಲ್ಲೆಯ ಮಠದ ಸ್ವಾಮೀಜಿ ಶಿಷ್ಯರು. ಮಠದಲ್ಲಿ ಸ್ವಾಮೀಜಿಯವರ ಪೂಜೆಗೆ ಚಿರತೆ ಚರ್ಮದ ಅಗತ್ಯವಿದೆ ಎಂದು ಹೇಳಿ ಪುಟ್ಟರಾಜುನನ್ನು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸಂಪರ್ಕಿಸಿದ್ದರು. ಸ್ವಾಮೀಜಿಗಳು ಧ್ಯಾನ ಮಾಡಲು ಚಿರತೆ ಹಾಗೂ ಹುಲಿ ಚರ್ಮ ಬಳಸುವುದು ಆತನಿಗೆ ಗೊತ್ತಿತ್ತು. ಆರಂಭದಲ್ಲಿ ಪೊಲೀಸರ ಬಗ್ಗೆ ಪುಟ್ಟರಾಜುಗೆ ಅನುಮಾನ ಬಂದಿದೆ. ಹೀಗಾಗಿ ಬೆಳಗ್ಗೆ 6.30ಕ್ಕೆ ತುರುವೆಕೆರೆ ತಾಲೂಕಿನ ತನ್ನೂರಿಗೆ ಬರುವಂತೆ ಹೇಳಿದ ಆತ ಸಂಜೆವರೆಗೆ ಅಧಿಕಾರಿಗಳ ಕೈಗೆ ಸಿಗದೆ ಆಟವಾಡಿಸಿದ್ದಾನೆ. ಕೊನೆಗೆ ವಿಶ್ವಾಸ ಬಂದು ಚಿರತೆ ಉತ್ಪನ್ನ ಮಾರಲು ಬಂದಾಗ ಆತ ಸಿಐಡಿ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.