6 ತಿಂಗಳ ನಂತರ ಕುಣಿಗಲ್ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಹಿಂದೆ ದುರಂತ ಪ್ರೇಮದ ಕಥೆ
* ಪ್ರಿಯತಮೆ ಆತ್ಮಹತ್ಯೆಯಿಂದ ಮನನೊಂದ ಪ್ರಿಯತಮ ಆತ್ಮಹತ್ಯೆ.
* 6 ತಿಂಗಳ ಬಳಿಕ ಸಂತೋಷ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ
* ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಅರಣ್ಯ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆ
ತುಮಕೂರು, (ಮೇ.22): ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ವ್ಯಾಪ್ತಿಯ ಅರಣ್ಯ ಪ್ರದೇಶವೊಂದರಲ್ಲಿ ಯುವಕನ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಜಾಡು ಹಿಡಿದು ಹೋದ ಪೊಲೀಸರಿಗೆ ಆರು ತಿಂಗಳ ಹಿಂದೆ ಕಾಣೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು....ಪ್ರೀತಿಸಿದ ಯುವತಿಯ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬೇಸತ್ತ ಪ್ರಿಯತಮ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು 6 ತಿಂಗಳ ನಂತರ ಆತನ ಅಸ್ಥಿ ಪಂಜರ ಪತ್ತೆಯಾಗಿದೆ. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗಮಧ್ಯದ ಕಾಡುಶನೇಶ್ವರ ದೇವಾಲಯದ ಹಿಂಭಾಗದ ಕಾಡಿನ ಬಂಡೆ ಬಳಿ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಅಸ್ಥಿಪಂಜರ ಸಿಕ್ಕಿದೆ.
ವಾಹನದ ಸಂಖ್ಯೆ ಆಧರಿಸಿ ಮೃತನ ವಿಳಾಸ ಪತ್ತೆಯಾಗಿದ್ದು, ಮೃತ ವ್ಯಕ್ತಿ ಅರಮನೆ ಹೊನ್ನಮಾಚನಹಳ್ಳಿಯ ಸಂತೋಷ (28) ಎಂದು ಗುರುತಿಸಲಾಗಿದೆ.
ಸಾವಿನಲ್ಲಿ ಒಂದಾದ ಪ್ರೇಮಿಗಳು, ಪ್ರೀಯಕರನ ಸಮಾಧಿ ಪಕ್ಕದಲ್ಲಿ ಯುವತಿಯ ಅಂತ್ಯಕ್ರಿಯೆ
ಘಟನೆ ಹಿನ್ನೆಲೆ
ಸಂತೋಷ್ ಕೆಬ್ಬಳಿಯ ನಿವಾಸಿ ಶಾಲಿನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ, ವಿವಾಹಕ್ಕೆ ಪೋಷಕರು ನಿರಾಕರಿಸಿದ ಕಾರಣ ಶಾಲಿನಿ ಕಳೆದ ಅಕ್ಟೋಬರ್ 25 ರಂದು ವಿಷ ಸೇವಿಸಿದ್ದರು. ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ 27 ರಂದು ಕೊನೆಯುಸಿರೆಳೆದಿದ್ದರು.
ಇದರಿಂದ ಮನನೊಂದಿದ್ದ ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇವರ ಮನೆಯವರು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಉಳಿದುಕೊಂಡಿದ್ದ. ಸಂತೋಷ್ ವಿಷ ಸೇವಿಸಿದ್ದಾನೆ ಎನ್ನುವುದನ್ನು ಅರಿತ ಶಾಲಿನಿ ಕೂಡಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಪ್ರೇಯಸಿ ಇನ್ನಿಲ್ಲ ಎನ್ನುವುದನ್ನು ಅರಿತ ಸಂತೋಷ್, ಆರು ತಿಂಗಳ ಹಿಂದೆ ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದ. ಪೊಲೀಸರಿಗೆ ದೂರು ದಾಖಲಾಗಿದ್ದರೂ, ಆತನ ಸುಳಿವು ಸಿಕ್ಕಿರಲಿಲ್ಲ.
ಬಳಿಕ ಆರು ತಿಂಗಳ ಹಿಂದೆ ಸಂತೋಷ್ ಎನ್ನುವ ಯುವಕ ನಾಪತ್ತೆಯಾಗಿದ್ದಾನೆ ಎಂದು ಆತನ ಮನೆಯವರು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ರಾಜೇಂದ್ರಪುರ ಅರಣ್ಯ ವ್ಯಾಪ್ತಿಯಲ್ಲಿ ಬೈಕ್ ಒಂದು ಪತ್ತೆಯಾಗಿತ್ತು. ಇದು ಕಾಣೆಯಾದ ಯುವಕನದ್ದೇ ಎಂದು ಖಚಿತ ಪಡಿಸಿಕೊಂಡಿದ್ದ ಪೊಲೀಸರಿಗೆ ಯುವಕನ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ (ಮೇ 20) ದನ ಮೇಯಿಸುವವರು ಅಸ್ಥಿಪಂಜರ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು. ಈಗ, ಆ ಅಸ್ಥಿಪಂಜರ ಕಾಣೆಯಾಗಿದ್ದ ಯುವಕ ಸಂತೋಷ್ ಎನ್ನುವವನದ್ದೇ ಎಂದು ಪೊಲೀಸರಿಗೆ ತಿಳಿದು ಬಂದಿದೆ.