ಪ್ರತ್ಯೇಕ ಘಟನೆಯಲ್ಲಿ ಗಾಂಜಾ ವಶ, ಮಹಿಳೆ ಸೇರಿ ಐವರ ಬಂಧನ ಒಡಿಶಾದಿಂದ ಡ್ರಗ್ಸ್‌ ತಂದು ಬೆಂಗಳೂರಿನಲ್ಲಿ ಮಾರಲು ಯತ್ನ

ಬೆಂಗಳೂರು(ಸೆ.14):  ರಾಜಧಾನಿಯ ಮಾದಕ ವಸ್ತು ಮಾರಾಟ ದಂಧೆ ಮೇಲೆ ಕೆಂಪೇಗೌಡ ನಗರ ಹಾಗೂ ಜಯನಗರ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿದಂತೆ ಆರು ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ .5 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಗೋರಿಪಾಳ್ಯದ ನವಾಜ್‌ ಪಾಷಾ, ಕೊಟ್ಟಿಗೆಪಾಳ್ಯದ ನೂರ್‌ ಅಹ್ಮದ್‌, ದೊಡ್ಡಬಸ್ತಿಯ ಮುಬಾರಕ್‌, ಮೈಸೂರು ರಸ್ತೆ ವಾಲ್ಮೀಕಿ ನಗರದ ಇಮ್ರಾನ್‌ ಪಾಷಾ, ಕೆ.ಪಿ.ಅಗ್ರಹಾರದ ಕಿರಣ ಅಲಿಯಾಸ್‌ ಬಂಗಾರಪ್ಪ ಹಾಗೂ ಬನಶಂಕರಿಯ ನವಾಜ್‌ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.

ಕೆ.ಜಿ.ನಗರ ಸಮೀಪದ ನಂಜಾಂಬ ಕೆಂಪಾಬುದಿ ಕೆರೆಯ ನಾತ್‌ರ್‍ ಗೇಟ್‌ ರಸ್ತೆಯಲ್ಲಿ ಮಹಿಳೆ ಹಾಗೂ ಐವರು ಗಾಂಜಾ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಬ್‌ ಇನ್‌ಸ್ಪೆಕ್ಟರ್‌ ಪ್ರವೀಣ್‌ ಹೊಸೂರು ನೇತೃತ್ವದ ತಂಡ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ .2 ಕೋಟಿ ಮೌಲ್ಯದ 506 ಕೇಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

Kalaburagi Crime: ಸುರಪುರದಲ್ಲಿ 1.6 ಕೋಟಿ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

ಈ ಐವರು ಹಲವು ದಿನಗಳಿಂದ ಡ್ರಗ್ಸ್‌ ದಂಧೆಯಲ್ಲಿ ನಿರತರಾಗಿದ್ದಾರೆ. ಈ ತಂಡದ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಒಡಿಶಾ ರಾಜ್ಯದ ಮಲ್ಕಾನ್‌ಗಿರಿಯಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ಆಯುಕ್ತರು ವಿವರಿಸಿದ್ದಾರೆ.

ಆಂಧ್ರದಲ್ಲಿ ನಗರ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿ

ಇತ್ತೀಚೆಗೆ ಜಯನಗರದ 4ನೇ ಹಂತದಲ್ಲಿ ಗಾಂಜಾ ಸೇವಿಸುವಾಗ ಬನಶಂಕರಿಯ ನವಾಜ್‌ನನ್ನು ಜಯನಗರ ಪೊಲೀಸರು ಸೆರೆ ಹಿಡಿದು ವಿಚಾರಣೆ ನಡೆಸಿದ ವೇಳೆ ಗಾಂಜಾ ಪೂರೈಕೆ ಜಾಲದ ಕುರಿತು ಮಾಹಿತಿ ನೀಡಿದ್ದ. ಈ ಸುಳಿವು ಆಧರಿಸಿ ಆಂಧ್ರಪ್ರದೇಶದ ಗೊಪ್ಪಲಿಗೆ ಪ್ರದೇಶದಲ್ಲಿ ಗಾಂಜಾ ದಂಧೆಕೋರರ ಮೇಲೆ ದಾಳಿ ನಡೆಸಿ .3 ಕೋಟಿ ಮೌಲ್ಯದ 6 ಕೇಜಿ ಹಶೀಶ್‌ ಆಯಿಲ್‌ ಹಾಗೂ .20 ಲಕ್ಷ ಮೌಲ್ಯದ ಗಾಂಜಾವನ್ನು ಜಯನಗರ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ ತನಗೆ ಗಾಂಜಾ ಪೂರೈಸಿದ್ದ ಆಂಧ್ರಪ್ರದೇಶ ಪೆಡ್ಲರ್‌ಗಳ ಮಾಹಿತಿಯನ್ನು ನವಾಜ್‌ ನೀಡಿದ್ದ. ನಂತರ ಗಾಂಜಾ ಖರೀದಿ ನೆಪದಲ್ಲಿ ಪೆಡ್ಲರ್‌ಗಳನ್ನು ಸಂಪರ್ಕಿಸಲಾಯಿತು. ನಮ್ಮ ಮಾತಿನಂತೆ ಗಾಂಜಾ ಹಾಗೂ ಹಶೀಶ್‌ ಅನ್ನು ಮಾರಾಟ ಮಾಡಲು ತಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಆರೋಪಿಗಳಿಗೆ ನಾವು ಪೊಲೀಸರು ಎಂಬುದು ಗೊತ್ತಾದಾಗ ತನಿಖಾ ತಂಡದ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.