ಭಾರತೀಯ ಪ್ರಜೆ ಎಂದು ನಿರೂಪಿಸಲು ಯಾವುದೇ ದಾಖಲೆ ಇಲ್ಲದ ವ್ಯಕ್ತಿಗಳ ಪತ್ತೆ, ಅವರಿಂದ ಹಣ ಪಡೆದು ಆಧಾರ್‌

ಬೆಂಗಳೂರು(ಸೆ.25): ದಾಖಲೆ ಇಲ್ಲದ ಜನರಿಂದ 2,500 ಪಡೆದು ನಕಲಿ ದಾಖಲೆ ಸೃಷ್ಟಿಸಿ ಆಧಾರ್‌ ಕಾರ್ಡ್‌ ಮಾಡಿಕೊಡುತ್ತಿದ್ದ ನಿವೃತ್ತ ಸರ್ಕಾರಿ ವೈದ್ಯ ಸೇರಿದಂತೆ ಆರು ಮಂದಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ 7ನೇ ಹಂತದ ಡಾ. ಸುನೀಲ್‌ ಅಚಲ್‌, ಹೊಂಗಸಂದ್ರದ ಪ್ರವೀಣ್‌, ವಿಜಯ ನಗರದ ನಾಗರಾಜ್‌, ಗಾರ್ವೆಬಾವಿಪಾಳ್ಯದ ರಮೇಶ್‌, ರವಿ ಹಾಗೂ ಗುರುಮೂರ್ತಿ ಲೇಔಟ್‌ನ ರೂಪಮ್‌ ಚಾತಿ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ದಾಖಲೆಗಳು, 50ಕ್ಕೂ ಹೆಚ್ಚಿನ ಆಧಾರ್‌ ಕಾರ್ಡ್‌ ಹಾಗೂ ಕಂಪ್ಯೂಟರ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಕಲಿ ಆಧಾರ್‌ ಕಾರ್ಡ್‌ ಜಾಲದ ಬಗ್ಗೆ ಮಾಹಿತಿ ಪಡೆದು ಆಗ್ನೇಯ ವಿಭಾಗದ ಪೊಲೀಸರಿಗೆ ರಾಜ್ಯ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ವಿಷಯ ಮುಟ್ಟಿಸಿತು. ಈ ಸುಳಿವು ಆಧರಿಸಿ ತನಿಖೆ ಕೈಗೆತ್ತಿಕೊಂಡ ಮೈಕೋ ಲೇಔಟ್‌ ಉಪ ವಿಭಾಗದ ಎಸಿಪಿ ಪ್ರತಾಪ್‌ ರೆಡ್ಡಿ ನೇತೃತ್ವದ ತಂಡವು, ಆಧಾರ್‌ ಕಾರ್ಡ್‌ ಪಡೆಯುವ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime News: ಸೀರಿಯಲ್​ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್‌

500 ನಕಲಿ ಆಧಾರ್‌ ಕಾರ್ಡ್‌?

ಬೊಮ್ಮನಹಳ್ಳಿಯಲ್ಲಿ ಎಸ್‌ಎಸ್‌ಡಿ ಕಮ್ಯುನಿಕೇಷನ್‌ ಹೆಸರಿನಲ್ಲಿ ಕಂಪ್ಯೂಟರ್‌ ಸೆಂಟರ್‌ ಹೊಂದಿದ್ದ ಪ್ರವೀಣ್‌ ಈ ದಂಧೆಯ ಕಿಂಗ್‌ಪಿನ್‌ ಆಗಿದ್ದು, ಹಣದಾಸೆ ತೋರಿಸಿ ಆತ ಇನ್ನುಳಿದ ಆರೋಪಿಗಳನ್ನು ತನ್ನ ದಂಧೆಗೆ ಸೆಳೆದಿದ್ದ. ವಾಸ ದೃಢೀಕರಣ ಪ್ರಮಾಣ ಪತ್ರ ಸೇರಿ ದೇಶದ ಪ್ರಜೆ ಎಂದು ರುಜುವಾತು ಪಡಿಸುವ ಯಾವುದೇ ದಾಖಲೆ ಇಲ್ಲದ ಜನರಿಗೆ ಆರೋಪಿಗಳು ಆಧಾರ್‌ ಕಾರ್ಡ್‌ ಮಾಡಿಕೊಡುತ್ತಿದ್ದರು. ತಲಾ ಒಬ್ಬರಿಗೆ 2ರಿಂದ 2,500 ಸಾವಿರ ರು.ವನ್ನು ಪ್ರವೀಣ್‌ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆಧಾರ್‌ ಕಾರ್ಡ್‌ ಅಗತ್ಯವಿದ್ದವರನ್ನು ಪ್ರವೀಣ್‌ಗೆ ರವಿ ಹಾಗೂ ರೂಪಮ್‌ ಪರಿಚಯಿಸುತ್ತಿದ್ದರು. ಬಳಿಕ ಈ ಜನರಿಗೆ ಗೆಜೆಟೆಡ್‌ ಅಧಿಕಾರಿ ಎಂದು ದಾಖಲೆಗೆ ನಿವೃತ್ತ ಸರ್ಕಾರಿ ವೈದ್ಯ ಸುನೀಲ್‌ ಸಹಿ ಮಾಡುತ್ತಿದ್ದ. ಇದಾದ ಬಳಿಕ ಆಧಾರ್‌ ಸೆಂಟರ್‌ನಲ್ಲಿದ್ದ ನಾಗರಾಜ್‌ ಬಳಿಗೆ ಜನರನ್ನು ಆಟೋ ಚಾಲಕ ರಮೇಶ್‌ ಕರೆದೊಯ್ಯುತ್ತಿದ್ದ. ಹೀಗೆ ವ್ಯವಸ್ಥಿತವಾಗಿ ಈ ಜಾಲವು ಕಾರ್ಯನಿರ್ವಹಿಸುತ್ತಿತ್ತು. ಈ ದಂಧೆ ಬಗ್ಗೆ ಐಎಸ್‌ಡಿ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿತು. ಕೂಡಲೇ ಆರೋಪಿಗಳ ಪತ್ತೆಗೆ ಯೋಜನೆ ರೂಪಿಸಲಾಯಿತು. ಅಂತೆಯೇ ನಮ್ಮ ಓರ್ವ ಸಿಬ್ಬಂದಿಯನ್ನು ವಿದೇಶಿ ಪ್ರಜೆ ಎಂದು ಹೇಳಿಕೊಂಡು ಪ್ರವೀಣ್‌ ಬಳಿಗೆ ಕಳುಹಿಸಲಾಯಿತು.

ಆ ಸಿಬ್ಬಂದಿಗೆ ಈಗಾಗಲೇ ಆಧಾರ್‌ ಕಾರ್ಡ್‌ ಇತ್ತು. ಹೀಗಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಸಿಬ್ಬಂದಿಗೆ ಆಧಾರ್‌ ಕಾರ್ಡ್‌ ಮಾಡಿಕೊಡಲು ಪ್ರವೀಣ್‌ ತಂಡ ಯತ್ನಿಸಿತು. ಆಗ ಕಾರ್ಯಾಚರಣೆ ನಡೆಸಿ ರೆಡ್‌ ಹ್ಯಾಂಡ್‌ ಆಗಿ ಆರೋಪಿಗಳನ್ನು ಬಂಧಿಸಲಾಯಿತು. ಕಳೆದ ಆರು ತಿಂಗಳಿಂದ ಈ ದಂಧೆ ನಡೆದಿದ್ದು, 250ರಿಂದ 500 ಜನರಿಗೆ ಕಾರ್ಡ್‌ ಮಾಡಿಕೊಟ್ಟಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾ ವಲಸಿಗೆ ಆಧಾರ್‌ ಹಂಚಿಕೆ?

ನಕಲಿ ದಾಖಲೆ ಬಳಸಿ ಆಧಾರ್‌ ಕಾರ್ಡ್‌ ಪಡೆದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೀಗೆ ಆಧಾರ್‌ ಪಡೆದವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿರುವ ಬಗ್ಗೆ ಶಂಕೆ ಇದೆ. ಆರೋಪಿ ನಾಗರಾಜ್‌ನ ಲ್ಯಾಪ್‌ ಟಾಪ್‌ ಜಪ್ತಿ ಮಾಡಲಾಗಿದ್ದು, ಅದರಲ್ಲಿ ಸುಮಾರು 6 ತಿಂಗಳ ದತ್ತಾಂಶವನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.