Raichur; 48 ಗಂಟೆಯಲ್ಲಿಯೇ ಮೂವರು ಕಳ್ಳರನ್ನು ಬಂಧಿಸಿದ ಸಿಂಧನೂರು ಪೊಲೀಸ್!
ಸಿಂಧನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ. 48 ಗಂಟೆಯಲ್ಲಿಯೇ 46 ಲಕ್ಷ ನಗದು ರಿಕವರಿ ಮಾಡಿದ ಪೊಲೀಸರು. ಮೂವರು ಆರೋಪಿಗಳ ಸಮೇತ ಕಳ್ಳತನವಾದ ಎಲ್ಲಾ ಹಣ ರಿಕವರಿ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಆ.22): ರಾಯಚೂರು ಜಿಲ್ಲೆ ಸಿಂಧನೂರು ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಗಣೇಶ ಬೀಡಿ ಮಾರಾಟ ಮಾಡಿ ತೆಗೆದುಕೊಂಡು ಬರುತ್ತಿರುವ 46 ಲಕ್ಷದ 23 ಸಾವಿರ 324 ರೂ. ಹಣದ ಬ್ಯಾಗ್ ಕಳ್ಳತನವಾಗಿತ್ತು. ಕಳ್ಳತನ ಆಗಿ 48 ಗಂಟೆಯೊಳಗಾಗಿ ಮೂವರು ಆರೋಪಿಗಳ ಸಮೇತ ಸಂಪೂರ್ಣ ಹಣವನ್ನು ರಿಕವರಿ ಮಾಡುವಲ್ಲಿ ಸಿಂಧನೂರು ನಗರ ಪೊಲೀಸರ ತಂಡ ಯಶಸ್ವಿಯಾಗಿದೆ. ಆಗಸ್ಟ್ 18 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಸಿಂಧನೂರು ನಗರದ ಕನಕದಾಸ ವೃತ್ತದ ಬಳಿ ರಾಯಚೂರು ನಗರದ ಗಣೇಶ ಬೀಡಿ ಕಂಪನಿಯ ವಾಹನದ ಚಾಲಕ ಮತ್ತು ಸೇಲ್ಸ್‌ಮೆನ್ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಂಪನಿ ಬೀಡಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿದ 46 ಲಕ್ಷ 23 ಸಾವಿರದ 360ರೂಪಾಯಿ ಹಣ ತೆಗೆದುಕೊಂಡು ಬರುತ್ತಿದ್ರು. ಟಾಟಾ ಟರ್ಬೋ ಕಂಟೇನರ್ ವಾಹನ ಕೆಎ36 ಎ3107 ದ ಬಾಕ್ಸ್ ನಲ್ಲಿ ಇಟ್ಟು, ಊಟಕ್ಕೆ ಹೋಗಿ ಮರಳಿ ಬರುವಷ್ಟರಲ್ಲಿ ವಾಹನದಲ್ಲಿ ಇದ್ದ ಹಣದ ಬ್ಯಾಗ್ ಕಳ್ಳತನವಾಗಿತ್ತು.
ವಾಹನದಲ್ಲಿ ಇದ್ದ ಮೂವರು ಒಟ್ಟಿಗೆ ಊಟಕ್ಕೆ ಹೋಗಿದ್ರು.ಊಟ ಮಾಡಿ ಬಂದು ನೋಡಿದಾಗ ವಾಹನದಲ್ಲಿ ಹಣದ ಬ್ಯಾಗ್ ಮಾಹವಾಗಿತ್ತು. ಈ ಮಾಹಿತಿ ಮೊದಲು ರಾಯಚೂರಿನ ಮಾಲೀಕರಿಗೆ ತಿಳಿಸಿದರು. ಮಾಲೀಕರು ಸಿಂಧನೂರು ನಗರ ಠಾಣೆಗೆ ಹೋಗಲು ತಿಳಿಸಿದರು. ವಾಹನದ ಸಮೇತ ಲಾರಿ ಚಾಲಕ ಮತ್ತು ಮ್ಯಾನೇಜರ್ ಸಿಂಧನೂರು ಠಾಣೆಗೆ ತೆರಳಿದರು. ಅಷ್ಟರಲ್ಲಿ ರಾಯಚೂರಿನ ಬೀಡಿ ಮಾರಾಟಗಾರರು ಸಹ ಸಿಂಧನೂರು ನಗರ ಠಾಣೆಗೆ ಬಂದು ದೂರು ನೀಡಿದರು.
ದೂರು ದಾಖಲಿಸಿಕೊಂಡ ಪೊಲೀಸರು ವಾಹನ ಚಾಲಕ ಮತ್ತು ಸೇಲ್ಸ್ ಮೆನ್ ಮತ್ತು ಮ್ಯಾನೇಜರ್ ಗೆ ವಿಚಾರಣೆ ನಡೆಸಿದರು. ಆಗ ಮೂರು ಜನರು ನಾವು ಊಟಕ್ಕೆ ಹೋಗಿ ಬರುವಷ್ಟರಲ್ಲಿ ಈ ಕಳ್ಳತನವಾಗಿದೆ ಎಂದು ಕಥೆ ಹೇಳಿದ್ರು. ಪೊಲೀಸರು ಖದೀಮರ ಕಥೆ ಕೇಳಿ..ಏನು ಗೊತ್ತಿಲ್ಲದಂತೆ ವರ್ತಿಸಿದ ಚಾಲಕನನ್ನ ವಶಕ್ಕೆ ತೆಗೆದುಕೊಂಡರು.
ಅಷ್ಟೇ ಅಲ್ಲದೆ ಮಾಲೀಕರ ಹೇಳಿಕೆಗಳು ಪಡೆದಾಗ ಚಾಲಕನೇ ಹಣವೂ ಕಳ್ಳತನ ಮಾಡಿರಬಹುದು ಎಂಬುವುದು ಪೊಲೀಸರಿಗೆ ಖಾತ್ರಿ ಆಯ್ತು. ಆದ್ರೂ ಆರೋಪಿಯನ್ನ ಬಿಟ್ಟು ಹಣದ ಸುಳಿವು ತಿಳಿಯಲು ಮುಂದಾಗಿದ್ರು. ಇತ್ತ ಚಾಲಾಕಿ ಚಾಲಕ ನಾನು ತಪ್ಪು ಮಾಡಿಲ್ಲವೆಂಬಂತೆ ಅದೇ ಮಾಲೀಕರ ಬಳಿ ಲಾರಿ ಓಡಿಸುತ್ತಾ ಕೆಲಸ ಶುರು ಮಾಡಿದ್ದ,ಇತ್ತ ಪೊಲೀಸರು ಆತನ ಹಿಂದೆ ಓಡಾಟ ನಡೆಸಿದಾಗ ಚಾಲಕನ ಅಸಲಿ ಬಣ್ಣ ಬಯಲಾಯ್ತು.
ಸಿಸಿಟಿವಿ ಇಲ್ಲದ ಕಡೆ ಲಾರಿ ನಿಲ್ಲಿಸಿ ಕಳ್ಳತನ :
ರಾಯಚೂರು ನಗರದ ಏಳು ಜನರು ಸೇರಿ ಬೀಡಿ ವ್ಯಾಪಾರದ ವ್ಯವಹಾರ ಮಾಡುತ್ತಿದ್ದಾರೆ. ನಿತ್ಯ ಲಕ್ಷಾಂತರ ರೂ. ನಗದು ವಹಿವಾಟು ಆಗುತ್ತೆ. ಕಳೆದ 8 ತಿಂಗಳ ಹಿಂದಷ್ಟೇ ಖದೀಮ 24 ವರ್ಷದ ಸೈಯದ್ ಜುಬೇರ್, ಚಾಲಕನಾಗಿ ಕೆಲಸಕ್ಕೆ ಸೇರಿದ, ಹತ್ತಾರು ಬಾರಿ ಕೊಪ್ಪಳ - ರಾಯಚೂರು ಮಾರ್ಗದಲ್ಲಿ ಬರುವಾಗ ಊಟಕ್ಕೆ ವಾಹನ ಅದೇ ಜಾಗದಲ್ಲಿ ನಿಲ್ಲಿಸುತ್ತಿದ್ದ, ಆದ್ರೆ ಪ್ರತಿ ಬಾರಿಯೂ ಸಿಸಿಟಿವಿ ಇರುವ ಕಡೆಗೆ ವಾಹನ ನಿಲ್ಲಿಸಿ ಊಟಕ್ಕೆ ಹೋಗುತ್ತಿದ್ದ, ಆದ್ರೆ ಈ ಬಾರಿ ಸಿಸಿಟಿವಿಯಲ್ಲಿ ವಾಹನ ಕಾಣದಂತೆ ನಿಲ್ಲಿಸಿ ಊಟಕ್ಕೆ ತೆರಳಿದೆ. ಅಲ್ಲದೇ ವಾಹನದಲ್ಲಿ ಇದ್ದ ಲಾಕರ್ ನ ನಕಲಿ ಕೀ ಕೂಡ ಆತ ಮಾಡಿಸಿಕೊಂಡು. ತನಗೆ ಬೇಕಾದಾಗ ಹಣವೂ ಕಳವು ಮಾಡುವುದು ರೂಢಿ ಮಾಡಿಕೊಂಡಿದ್ದ, ಏಕೆಂದರೆ ಹಣದ ಏಣಿಕೆಯೂ ರಾಯಚೂರಿಗೆ ಬಂದ ಬಳಿಕವೇ ಮಾಡಲಾಗುತ್ತಿತ್ತು.
ಈ ಎಲ್ಲಾ ವಿಷಯವೂ ತಿಳಿದುಕೊಂಡಿದ್ದ ಖದೀಮ. ಆವತ್ತು ರಾತ್ರಿ ವೇಳೆ ಊಟಕ್ಕೆ ಅಂತ ವಾಹನ ನಿಲ್ಲಿಸುವ ಮುಂಚೆಯೇ ಆತನ ಸಹೋದರ ಮತ್ತು ಸ್ನೇಹಿತನಿಗೆ ಬರಲು ಹೇಳಿ ನಕಲಿ ಕೀ ಬಳಸಿ ಹಣದ ಬ್ಯಾಗ್ ನೀಡಿದ್ದ, ಹಣದ ಬ್ಯಾಗ್ ತೆಗೆದುಕೊಂಡು ವಾಹನ ಚಾಲಕ ಸೈಯದ್ ಜುಬೇರ್ ಸಹೋದರ ಖಲಂದರ್ ಹಾಗೂ ಸ್ನೇಹಿತ ಗಣೇಶ ಬೈಕ್ ನಲ್ಲಿ ಬಂದು ಹಣ ತೆಗೆದುಕೊಂಡು ಹೋಗಿದ್ರು. ವಾಹನದಲ್ಲಿ ಇದ್ದವರಂತೆ ಆತನವೂ ಸಹ ಅಂದು ಊಟ ಮಾಡಿ ಎಲ್ಲರೊಂದಿಗೆ ಬಂದಾಗ ಬ್ಯಾಗ್ ಇರಲಿಲ್ಲ. ಹಣ ಕಳವು ಆಗಿದೆ ಎಂದು ನಾಟಕ ಶುರು ಮಾಡಿ ಪರಾರಿಯಾಗಲು ಯತ್ನಿಸಿ ವಿಫಲನಾಗಿ ಈಗ ಅಂದರ್ ಆಗಿದ್ದಾನೆ.
ವ್ಯಾಟ್ಸ್ಆ್ಯಪ್‌ಗೆ ಬಂತು ಲಿಂಕ್, ಕ್ಲಿಕ್ ಮಾಡಿದ ನಿವೃತ್ತ ಶಿಕ್ಷಕಿಯ ಖಾತೆಯಿಂದ 21 ಲಕ್ಷ ರೂಪಾಯಿ
ಹಣ ಸಿಕ್ಕ ಖುಷಿಗೆ ಪೊಲೀಸರಿಗೆ ವ್ಯಾಪಾರಿಗಳ ಸನ್ಮಾನ:
ಕಳ್ಳತನವಾಗಿದ್ದ ಹಣವೂ ಸಿಗುವುದು ತುಂಬಾ ವಿರಳ. ಆದ್ರೆ ರಾಯಚೂರು ಜಿಲ್ಲೆ ಸಿಂಧನೂರು ನಗರದ ಪೊಲೀಸರು ಕಳವು ಆಗಿ 48 ಗಂಟೆಗಳ ಒಳಗಾಗಿ ಆರೋಪಿಗಳ ಸಮೇತ ಹಣವನ್ನು ರಿಕವರಿ ಮಾಡಿದ್ರು. ಹೀಗಾಗಿ ಖುಷಿಯಿಂದ ಬೀಡಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ರಾಯಚೂರು ಎಸ್ ಪಿ ಕಚೇರಿಗೆ ಆಗಮಿಸಿ ರಾಯಚೂರು ಎಸ್ ಪಿ ನಿಖಿಲ್. ಬಿ. ಸಿಂಧನೂರು ಡಿವೈಎಸ್ ಪಿ ವೆಂಕಟೇಶ ನಾಯಕ, ಪಿಐ ರವಿಕುಮಾರ್ ಹಾಗೂ ಪಿಎಸ್ ಐ ಸೌಮ್ಯ ಹಿರೇಮಠ ಸನ್ಮಾನಿಸಿ ಧನ್ಯವಾದಗಳು ಅರ್ಪಿಸಿದರು.
ಮಹಿಳೆಯರ ಜೊತೆ ರಾಜಸ್ಥಾನ ಕ್ಯಾಸಿನೋ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಕರ್ನಾಟಕ ಪೊಲೀಸರು!
ಉತ್ತಮ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ ಪಿ ಬಹುಮಾನ ಘೋಷಣೆ:
ಸಿಂಧನೂರು ನಗರದ ಪೊಲೀಸರು ಪ್ರಕರಣ ದಾಖಲಾಗಿ 48 ಗಂಟೆಗಳ ಒಳಗಾಗಿಯೇ ಮೂವರು ಆರೋಪಿಗಳ ಸಹಿತ 48 ಲಕ್ಷ 23 ಸಾವಿರ 360 ರೂಪಾಯಿ ನಗದು ರಿಕವರಿ ಮಾಡಿದ್ರು. ಹೀಗಾಗಿ ಕಾರ್ಯಾಚರಣೆ ನಡೆಸಿದ ಸಿಂಧನೂರು ಡಿವೈಎಸ್ ಪಿ ಮತ್ತು ಪಿಐ ಹಾಗೂ ನಗರ ಮತ್ತು ಗ್ರಾಮೀಣ ಪಿಎಸ್ ಐ ಮತ್ತು ಕಾರ್ಯಾಚರಣೆಯಲ್ಲಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಾದ ಸಂಗಮೇಶ ಎಪಿಸಿ-167, ಆದಯ್ಯ ಪಿಸಿ-67, ಅನಿಲಕುಮಾರ ಪಿಸಿ-447, ದ್ಯಾಮಣ್ಣ ಪಿಸಿ-396, ಗೋಪಾಲ ಪಿಸಿ-679, ಶಿವಅಂಗಪ್ಪ ಹೆಚ್.ಸಿ-167, ಪ್ರಕಾಶ ಪಿಸಿ-413, ವಾಹನ ಚಾಲಕರಾದ ಸುರೇಶ್ ಸಿಪಿಸಿ-314, ಅಮರೇಶ ಹೆಚ್.ಸಿ-364, ತಾಂತ್ರಿಕ ಸಹಾಯಕ ಅಜೀಮ್ ಪಾಷಾ, ಎಎಚ್‌ಸಿ ರವರನ್ನೊಳಗೊಂಡ ವಿಶೇಷ ತಂಡಕ್ಕೆ ಬಹುಮಾನ ಘೋಷಣೆ ಮಾಡಿದ್ರು.
ಒಟ್ಟಿನಲ್ಲಿ ಕಳವು ಆಗಿದ್ದ ಹಣವೂ ಸಿಗಲ್ಲವೆಂದುಕೊಂಡ ವ್ಯಾಪಾರಿಗಳಿಗೆ 48 ಗಂಟೆಯಲ್ಲಿಯೇ ಅವರ ಹಣವನ್ನು ಮರಳಿ ಕೊಡುವಲ್ಲಿ ಸಿಂಧನೂರು ನಗರ ಠಾಣೆಗೆ ಪೊಲೀಸರು ಯಶಸ್ವಿಯಾಗಿ ಸಾರ್ವಜನಿಕರ ನಂಬಿಕೆಗೆ ಪಾತ್ರರಾಗಿದ್ದಾರೆ.