ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಇನ್ನೂ ಮುಂದೆ ಬೆಳ್ಳಿ ಖರೀದಿಸುವುದಕ್ಕೂ ಜನ ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಬೆಳ್ಳಿಯ ಕಡಗಕ್ಕಾಗಿ ವೃದ್ಧೆಯೊಬ್ಬರ ಪ್ರಾಣವೇ ಹೋಗಿದೆ.
ಜೈಪುರ: ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಇನ್ನೂ ಮುಂದೆ ಬೆಳ್ಳಿ ಖರೀದಿಸುವುದಕ್ಕೂ ಜನ ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಬೆಳ್ಳಿಯ ಕಡಗಕ್ಕಾಗಿ ವೃದ್ಧೆಯೊಬ್ಬರ ಕೊಲೆಯೇ ನಡೆದು ಹೋಗಿದೆ. ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಬಾಮನ್ವಾಸ್ ಪ್ರದೇಶದ ಜಾಹಿರಾ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದ್ದು, ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಕೊಲೆಯಾದ ವೃದ್ಧೆಯನ್ನು 60 ವರ್ಷದ ಊರ್ಮಿಳಾ ಮೀನಾ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಊರ್ಮಿಳಾ ಮೀನಾ ತಮ್ಮ ಮನೆಯ ಹತ್ತಿರದ ಹೊಲಕ್ಕೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಮೊದಲು ಮಹಿಳೆಯನ್ನು ಕೆಳಗೆ ತಳ್ಳಿ, ಬೆಳ್ಳಿ ಕಡಗಗಳನ್ನು ಕಿತ್ತುಕೊಳ್ಳಲು ಹೋಗಿ ಅವರ ಎರಡೂ ಕಾಲುಗಳನ್ನು ಕತ್ತರಿಸಿದ್ದಾರೆ. ನಂತರ ಅವರ ಗಂಟಲು ಕೊಯ್ದು ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಜೈಪುರದಿಂದ ವಿಶೇಷ ಎಫ್‌ಎಸ್‌ಎಲ್ ತಂಡ ಆಗಮನ
ಘಟನೆಯನ್ನು ನೋಡಿ ಪ್ರತ್ಯಕ್ಷದರ್ಶಿ ಗ್ರಾಮಸ್ಥರು ಕೂಗಾಡಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಜೈಪುರದಿಂದ ಎಫ್‌ಎಸ್‌ಎಲ್ ತಂಡವನ್ನು ಕೂಡ ಸ್ಥಳಕ್ಕೆ ಕರೆಯಿಸಲಾಗಿದ್ದು, ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಮೇಲ್ನೋಟಕ್ಕೆ ಇದೊಂದು ಆಭರಣಕ್ಕಾಗಿಯೇ ನಡೆದಿರಬಹುದಾದ ಕೊಲೆ ಎಂದು ಶಂಕಿಸಲಾಗಿದೆ. ಆದರೆ ಪೊಲೀಸರ ತನಿಖೆಯ ನಂತರವಷ್ಟೇ ಈ ಕೊಲೆಗೆ ಬೇರೆನಾದರೂ ಹಿನ್ನೆಲೆ ಇದೆಯೇ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ:ಸ್ಕಿಜೋಫ್ರೇನಿಯ ಪೀಡಿತ ಪತ್ನಿ ಪಲ್ಲವಿಯಿಂದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ಗೆ 10 ಬಾರಿ ಚಾಕು ಇರಿತ!
ಈ ಘಟನೆಯಿಂದ ಗ್ರಾಮದಲ್ಲಿ ಆತಂಕ
ಹಾಡಹಗಲೇ ನಡೆದ ಈ ಬರ್ಬರ ಘಟನೆಯಿಂದ ಗ್ರಾಮದಲ್ಲಿ ಆತಂಕದ ಜೊತೆಗೆ ಜನ ಆಕ್ರೋಶಗೊಂಡಿದ್ದಾರೆ. ಕೋಪಗೊಂಡ ಗ್ರಾಮಸ್ಥರು ವೃದ್ಧೆಯ ಮೃತದೇಹವನ್ನು ಜಾಹಿರಾ ಬಸ್ ನಿಲ್ದಾಣದಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಶೀಘ್ರದಲ್ಲೇ ಕೊಲೆಗಾರರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮ ದುಃಖದಲ್ಲಿ ಮುಳುಗಿದೆ.
ಹೃದಯಾಘಾತಕ್ಕೆ 21 ವರ್ಷದ MBBS ವಿದ್ಯಾರ್ಥಿ ಬಲಿ
ಆಲ್ವಾರ್: ದೇಶದೆಲ್ಲೆಡೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ರಾಜಸ್ಥಾನದ ಆಲ್ವಾರ್‌ನ ಗಂಗಾವಿಹಾರ್ ಕಾಲೋನಿಯಲ್ಲಿ 21 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಜಲದ್ ಇನ್ನೇನು ಸ್ವಲ್ಪ ದಿನ ಕಳೆದರೆ ವೈದ್ಯರಾಗಿ ಕೆಲಸ ಶುರು ಮಾಡುತ್ತಿದ್ದರು. ಆದರೆ ಅಷ್ಟರಲ್ಲೇ ವಿಧಿ ಘೋರವಾದ ಆಟವಾಡಿದ್ದು, ಇಹಲೋಕ ತ್ಯಜಿಸಿದ್ದಾರೆ. 21 ವರ್ಷದ ಜಲದ್ ಶರ್ಮಾ ಜೈಪುರದ ನಿಮ್ಸ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು, ಶನಿವಾರ ಸಂಜೆ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕರ್ನಾಟಕ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಆಸ್ತಿಗಾಗಿ ಹತ್ಯೆ? ಹೆಂಡತಿ, ಮಗಳು ಪೊಲೀಸ್ ವಶಕ್ಕೆ!
ಆಲ್ವಾರ್‌ನಲ್ಲಿ ಮನೆಯಲ್ಲಿ ದುಃಖ ಮಡುಗಟ್ಟಿದ ಶೋಕ
ಮಾಹಿತಿಯ ಪ್ರಕಾರ ಜಲದ್ ಶರ್ಮಾಗೆ ಬೆಳಗ್ಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡಿತ್ತು. ಆಗ ಮೊದಲು ಅವರು ಸ್ವಯಂ ಔಷಧಿ ತೆಗೆದುಕೊಂಡರು, ಆದರೆ ನೋವು ಕಡಿಮೆಯಾಗದಿದ್ದಾಗ ಸ್ನೇಹಿತರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ನಡುವೆಯೇ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ. ಜಲದ್ ಅವರ ಪಾರ್ಥಿವ ಶರೀರ ರಾತ್ರಿ ಸುಮಾರು 9.45ಕ್ಕೆ ಆಲ್ವಾರ್‌ನಲ್ಲಿರುವ ಅವರ ಮನೆಗೆ ತಲುಪಿತು.ಈ ವೇಳೆ ನೂರಾರು ಜನರು ಅಂತಿಮ ದರ್ಶನ ಪಡೆದರು. ಆದರೆ ಜಲದ್ ಶರ್ಮಾ ತಮ್ಮ ಪೋಷಕರಿಗೆ ಒಬ್ಬನೇ ಒಬ್ಬ ಮಗನಾಗಿದ್ದು, ಮಗನ ಮೇಲೆಯೇ ಭವಿಷ್ಯದ ಎಲ್ಲಾ ನಿರೀಕ್ಷೆಗಳನ್ನು ಇಟ್ಟು ವೈದ್ಯಕೀಯ ಶಿಕ್ಷಣ ಕೊಡಿಸಿದ್ದರು. ಆದರೆ ಮಗನ ಹಠಾತ್ ನಿಧನ ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಆಘಾತಕ್ಕೀಡಾದ ಅವಧ್ ಶರ್ಮಾ ತಾಯಿಗೆ ಮಗನ ಶವ ನೋಡುತ್ತಿದ್ದಂತೆ ಪ್ರಜ್ಞೆ ತಪ್ಪಿದ್ದು, ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
