ಹಾಸನ ಜಿಲ್ಲೆಯ ಹಂಚೂರು ಗ್ರಾಮದಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಅಪಹರಣ ಯತ್ನ ನಡೆದಿದೆ. ಬಿಳಿ ಓಮಿನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಭಯಭೀತರಾದ ಬಾಲಕಿ, ಓಡಿ ತಪ್ಪಿಸಿಕೊಂಡಿದ್ದಾಳೆ.

ಹಾಸನ (ಆ.14): ಮನೆಯಿಂದ ಶಾಲೆಗೆ ಹೊರಟಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ನಡೆದಿದೆ.

ಹಂಚೂರು ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಅರ್ಪಿತಾ (13) ಎಂಬ ಬಾಲಕಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಅಂಜಿಹಳ್ಳಿಯ ಮನೆಯಿಂದ ಶಾಲೆಗೆ ಹೊರಟಿದ್ದ ಅರ್ಪಿತಾ, ದಾರಿಯಲ್ಲಿ ಬಿಳಿ ಬಣ್ಣದ ಮಾರುತಿ ಓಮಿನಿ ಕಾರಿನಲ್ಲಿ ಬಂದ ಆಗಂತುಕರಿಂದ ಕಿಡ್ನಾಪ್‌ಗೆ ಯತ್ನಿಸಲಾಗಿದೆ. ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು ಎಂದು ಬಾಲಕಿ ತಿಳಿಸಿದ್ದಾಳೆ.

ಆತಂಕಗೊಂಡ ಅರ್ಪಿತಾ, ದುಷ್ಮರ್ಮಿಗಳು ಅಪಹರಕ್ಕೆ ಯತ್ನಿಸಿದಾಗ ತನ್ನ ಸ್ಕೂಲ್ ಬ್ಯಾಗ್ ಬಿಸಾಡಿ, ಓಡಿಹೋಗಿ ಶಾಲೆಯನ್ನು ತಲುಪಿದ್ದಾಳೆ. ಆದರೆ, ಘಟನೆಯಿಂದ ತೀವ್ರ ಭಯಗೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ಬಾಲಕಿಯ ದೃಶ್ಯ ಹೃದಯವಿದ್ರಾವಕವಾಗಿದೆ. ಅರ್ಪಿತಾ ತನಗಾದ ಅನುಭವವನ್ನು ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಹಂಚಿಕೊಂಡಿದ್ದಾಳೆ. ಆಕೆಯ ಮಾಹಿತಿಯಂತೆ, ಕಾರಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಆಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿನಿ ಮತ್ತು ಶಾಲಾ ಸಿಬ್ಬಂದಿಯಿಂದ ಘಟನೆಯ ಮಾಹಿತಿ ಪಡೆದಿದ್ದಾರೆ. ಆಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಕಿಡ್ನಾಪ್ ಯತ್ನದ ಹಿಂದಿನ ಉದ್ದೇಶ ಏನು? ಆರೋಪಿಗಳು ಯಾರು? ಗುರುತು ಪತ್ತೆಗೆ ತೀವ್ರಗೊಂಡಿರುವ ತನಿಖೆಯಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಚರ್ಚೆ ತೀವ್ರಗೊಂಡಿದೆ.