ಬೆಳಗಾವಿಯ ಮಸೀದಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾ*ಚಾರ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಸಾಮಾಜಿಕ ಜಾಲತಾಣದ ಮಧ್ಯಪ್ರವೇಶದ ನಂತರ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆ ದೃಢಪಡಿಸಿವೆ.
ಬೆಳಗಾವಿ (ಆ.06): ಇಸ್ಲಾಂ ಧರ್ಮದ ಪವಿತ್ರ ಧಾರ್ಮಿಕ ಸ್ಥಳವಾದ ಮಸೀದಿಯಲ್ಲೇ ಅಪ್ರಾಪ್ತ ಬಾಲಕಿಯ ಮೇಲೆ ಕಾಮಿ ಮೌಲ್ವಿಯೊಬ್ಬ ಅತ್ಯಾಚಾ*ರ ಎಸಗಿರುವ ಅಮಾನವೀಯ ಮತ್ತು ಆಘಾತಕಾರಿ ಘಟನೆ ಎರಡು ವರ್ಷಗಳ ನಂತರ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಅವರ ಸಾಮಾಜಿಕ ಜಾಲತಾಣದ ಮಧ್ಯಪ್ರವೇಶದ ನಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೇಯ ಕೃತ್ಯ ನಡೆದಿದೆ. ಸುಮಾರು ಎರಡು ವರ್ಷಗಳ ಹಿಂದೆ ಮಸೀದಿಯ ಮೌಲ್ವಿಯೊಬ್ಬ, ಮಸೀದಿ ಮುಂದೆ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮಸೀದಿ ಒಳಗೆ ಎಳೆದುಕೊಂಡು ಹೋಗಿದ್ದಾನೆ. ನಂತರ, ಬಾಲಕಿಯ ಮೇಲೆ ಎರಗಿ ಅತ್ಯಾ*ಚಾರ ಎಸಗಿದ್ದಾನೆ. ಈ ರಾಕ್ಷಸ ಕೃತ್ಯವು ಮಸೀದಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ಮಗಳ ಭವಿಷ್ಯ ಮತ್ತು ಸಾಮಾಜಿಕ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಭಯದಿಂದ ಸಂತ್ರಸ್ತೆಯ ಕುಟುಂಬವು ದೂರು ನೀಡಲು ಹಿಂಜರಿದಿತ್ತು.
ಪುನೀತ್ ಕೆರೆಹಳ್ಳಿ ಮೂಲಕ ಸತ್ಯ ಬಹಿರಂಗ:
ಇನ್ನು ತಮ್ಮ ಮಗಳಿಗೆ ನ್ಯಾಯ ಸಿಗದೆ ಸಂತ್ರಸ್ತ ಬಾಲಕಿಯ ತಂದೆ ಕಂಗಾಲಾಗಿದ್ದರು. ಇತ್ತೀಚೆಗೆ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಅವರಿಗೆ ಕರೆ ಮಾಡಿ, ತಮ್ಮ ಮಗಳಿಗೆ ಆಗಿರುವ ಅನ್ಯಾಯ ಮತ್ತು ತಮಗಾಗುತ್ತಿರುವ ನೋವಿನ ಅಳಲನ್ನು ತೋಡಿಕೊಂಡು ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ತಕ್ಷಣ ಸ್ಪಂದಿಸಿದ ಪುನೀತ್ ಕೆರೆಹಳ್ಳಿ, ಬಾಲಕಿಯ ತಂದೆಯೊಂದಿಗೆ ಮಾತನಾಡಿ, ಘಟನೆಯ ಸಂಪೂರ್ಣ ವಿವರ ಹಾಗೂ ಸಿಸಿಟಿವಿ ವಿಡಿಯೋ ತುಣುಕನ್ನು ತಮ್ಮ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದರು. ಜೊತೆಗೆ, ಈ ಪೋಸ್ಟ್‌ನಲ್ಲಿ ಉತ್ತರ ವಲಯ ಐಜಿಪಿ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಟ್ಯಾಗ್ ಮಾಡಿ, ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದರು.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ಪುನೀತ್ ಕೆರೆಹಳ್ಳಿ ಅವರ 'ಎಕ್ಸ್' ಖಾತೆಯ ಪೋಸ್ಟ್ ಮತ್ತು ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸರು, ಅದನ್ನು ಸಾಕ್ಷಿಯಾಗಿಟ್ಟುಕೊಂಡು ತನಿಖೆಗೆ ಇಳಿದರು. ಕುಟುಂಬಸ್ಥರು ದೂರು ನೀಡಲು ಹಿಂದೇಟು ಹಾಕಿದರೂ, ಕಾನೂನಿನ ಪ್ರಕಾರ ಸ್ವಯಂಪ್ರೇರಿತವಾಗಿ ಕಾರ್ಯಪ್ರವೃತ್ತರಾದರು.
ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ, 'ಸಾಮಾಜಿಕ ಜಾಲತಾಣದ ಪೋಸ್ಟ್ ಗಮನಕ್ಕೆ ಬಂದ ತಕ್ಷಣವೇ ವಿಶೇಷ ತಂಡವನ್ನು ರಚಿಸಲಾಯಿತು. ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಮುಕ ಆರೋಪಿ ಮೌಲ್ವಿಯನ್ನು ಬಂಧಿಸಿದೆ. ಆರೋಪಿಯ ಬಂಧನದ ನಂತರ, ಕಾನೂನು ಪ್ರಕ್ರಿಯೆಯಂತೆ ಮಕ್ಕಳ ಕಲ್ಯಾಣ ಯೋಜನಾಧಿಕಾರಿ (ಸಿಡಿಪಿಒ) ಮುಖಾಂತರ ಸಂತ್ರಸ್ತ ಕುಟುಂಬದಿಂದ ಅಧಿಕೃತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ' ಎಂದು ಖಚಿತಪಡಿಸಿದ್ದಾರೆ.
ಪವಿತ್ರ ಸ್ಥಳದಲ್ಲೇ ನಡೆದ ಈ ರಾಕ್ಷಸ ಕೃತ್ಯವು ಸಮಾಜದ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


