ವಿಕೃತಕಾಮಿ  ಉಮೇಶ್ ರೆಡ್ಡಿಯನ್ನು ಜೂನ್ 3 ರಂದು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.

ಬೆಂಗಳೂರು (ಜೂ.21): ಅತ್ಯಾಚಾರಿ, ವಿಕೃತಕಾಮಿ ಮತ್ತು ಸರಣಿ ಹಂತಕ ಉಮೇಶ್ ರೆಡ್ಡಿಯನ್ನು ಜೂನ್ 3 ರಂದು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. 2011ರಿಂದ ಈತನನ್ನು ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು. 2022ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಈತನ ಗಲ್ಲು ಶಿಕ್ಷೆಯನ್ನು 30 ವರ್ಷಗಳ ಶಿಕ್ಷೆಗೆ ಪರಿವರ್ತಿಸಿದೆ. ಇದಾದ ನಂತರ ಜೂನ್ 3 ರಂದು ಈತನನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. 

2011ರಿಂದ ಹಿಂಡಲಗಾ ಜೈಲಿನಲ್ಲಿದ್ದ ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ 2009 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು, 2011 ರಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ 2022 ರಲ್ಲಿ, ಸುಪ್ರೀಂ ಕೋರ್ಟ್ ಈತನನ್ನು 10 ವರ್ಷಗಳ ಕಾಲ ಕಾನೂನುಬಾಹಿರವಾಗಿ ಒಂಟಿಯಾಗಿ ಸೆರೆಮನೆಯಲ್ಲಿ ಇರಿಸಲಾಗಿದೆ ಎಂಬ ಕಾರಣಕ್ಕೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದು ಮಾಡಿ 30 ವರ್ಷಗಳ ಶಿಕ್ಷೆಗೆ ಗುರಿಪಡಿಸಿತ್ತು. 2006 ರಲ್ಲಿ ಈತನ ಬಂಧನವಾಗಿದ್ದು 2013 ರಲ್ಲಿ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವವರೆಗೆ ಅಂದರೆ 2016 ರವರೆಗೆ ಸೆರೆಮನೆಯಲ್ಲಿ ಇರಿಸಲಾಯಿತ್ತು. ಇದನ್ನು ಪರಿಗಣಿಸಿ ಮರಣದಂಡನೆಯನ್ನು ರದ್ದು ಮಾಡಿ ಶಿಕ್ಷೆಯಾಗಿ ಪರಿವರ್ತಿಸಿತು.

ಶಾಲಾ ಬಾಲಕಿಯ ಮೈ ಮುಟ್ಟಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು

ಮೂಲಗಳ ಪ್ರಕಾರ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 26 ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಐತಿಹಾಸಿಕವಾಗಿ, ಕರ್ನಾಟಕದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಹಿಂಡಲಗಾದಲ್ಲಿ ಇರಿಸಲಾಗುತ್ತದೆ. ಮರಣದಂಡನೆ ಶಿಕ್ಷೆ ಇಲ್ಲದ ಕಾರಣ ರೆಡ್ಡಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಪೊಲೀಸ್ ಪೇದೆಯಾಗಿದ್ದ ರೆಡ್ಡಿ 18 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಒಂಬತ್ತು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಫೆಬ್ರವರಿ 28, 1998 ರಂದು ಪೀಣ್ಯದ 37 ವರ್ಷದ ವಿಧವೆ ಜಯಶ್ರೀ ಮರಡಿ ಸುಬ್ಬಯ್ಯ ಅವರನ್ನು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಸ್ಥಾಪಿಸಿದ ತ್ವರಿತ ನ್ಯಾಯಾಲಯವು ಅಕ್ಟೋಬರ್ 26, 2006 ರಂದು, ಮರಣದಂಡನೆ ವಿಧಿಸಿತು.

ಪರಪುರುಷನ ಜೊತೆ ಅನೈತಿಕ ಸಂಬಂಧ, ಪ್ರಿಯಕರನಿಂದಲೇ ಹೆಣವಾದ್ಲು ಪ್ರಿಯತಮೆ!

ಸಂತ್ರಸ್ತೆಯ ಏಳು ವರ್ಷದ ಮಗ ಅಪರಾಧಕ್ಕೆ ಏಕೈಕ ಸಾಕ್ಷಿಯಾಗಿದ್ದನು. ರೆಡ್ಡಿ ಯಾವುದೋ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ ನಂತರ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಾಕು ತೋರಿಸಿ ಬೆದರಿಸಿ ಬಟ್ಟೆ ತೆಗೆಯಲು ಹೇಳಿ ಕಟ್ಟಿಹಾಕಿ, ಉಸಿರುಗಟ್ಟಿಸಿ ಅತ್ಯಾಚಾರ ಎಸಗುತ್ತಿದ್ದ.