ಬೆಂಗಳೂರು(ಫೆ.27): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ನಾದಿನಿ ಕೊಲೆ ಮಾಡಿದ್ದ ಅಪರಾಧಿ ವೀಣಾವಾದಕ ಬಿ.ಎಂ.ಚಂದ್ರಶೇಖರ್‌ ಅಲಿಯಾಸ್‌ ಚಂದ್ರು ಎಂಬುವರಿಗೆ ನಗರದ 69ನೇ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್‌.ಗುರುರಾಜ್‌ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ .25 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಾವಧಿ ಶಿಕ್ಷೆ

ವೀಣಾವಾದಕ ಚಂದ್ರಶೇಖರ್‌ ಹಾಗೂ ಶಾಲಾ ಶಿಕ್ಷಕಿಯಾಗಿದ್ದ ಪ್ರೀತಿ ಆಚಾರ್ಯ 2010 ರಲ್ಲಿ ವಿವಾಹವಾಗಿದ್ದರು. ಗಿರಿನಗರದಲ್ಲಿ ವಾಸವಾಗಿದ್ದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ ಮನೆ ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ ಹಾಗೂ ಕುಡಿತಕ್ಕೆ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂಬ ಆರೋಪವೂ ಇತ್ತು. ಇದೇ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ಪ್ರೀತಿ ಆಚಾರ್ಯ ಅವರು ಚಂದ್ರಶೇಖರ್‌ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ ಮಾಡಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಬಳಿಕ ದಂಪತಿ ದೂರವಾದರೂ, ಸಂಬಂಧಿಕರು ರಾಜಿ ಪಂಚಾಯ್ತಿ ಮಾಡಿ ಒಟ್ಟಿಗೆ ಸಂಸಾರ ಆರಂಭಿಸುವಂತೆ ಮಾಡಿದ್ದರು.

ಘಟನೆಯಿಂದ ಕುಪಿತಗೊಂಡಿದ್ದ ಚಂದ್ರಶೇಖರ್‌, 2013ರ ಏಪ್ರಿಲ್‌ 18ರಂದು ಪತ್ನಿ ಪ್ರೀತಿ ಅವರನ್ನು ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಘಟನೆಗೆ ಸಾಕ್ಷಿಯಾಗಬಹುದೆಂದು ಮನೆಯಲ್ಲಿಯೇ ಇದ್ದ ನಾದಿನಿ ವೇದಾ ಅವರನ್ನೂ ಕೊಲೆ ಮಾಡಿದ್ದ. ಈ ಸಂಬಂಧ ಗಿರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಎಚ್‌.ಆರ್‌.ಸತ್ಯವತಿ ವಾದ ಮಂಡಿಸಿದ್ದರು.