Asianet Suvarna News Asianet Suvarna News

ಬೆಂಗಳೂರು: 30,000ಕ್ಕೆ ವಿವಿಗಳ ನಕಲಿ ಅಂಕಪಟ್ಟಿ ಮಾರಾಟ..!

ಪರೀಕ್ಷೆ ಬರೆಯದೆ ನಕಲಿ ಅಂಕಪಟ್ಟಿ ಮಾರಾಟ ದಂಧೆ, ಸಾಫ್ಟ್‌ವೇರ್‌ ಕಂಪನಿ ಎಂದು ನೋಂದಾಯಿಸಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದವನ ಬಂಧನ. 

Selling Fake Marks Card of Universities in Bengaluru grg
Author
First Published Jan 28, 2023, 8:01 AM IST

ಬೆಂಗಳೂರು(ಜ.28):  ರಾಜಧಾನಿಯಲ್ಲಿ ಮತ್ತೊಂದು ನಕಲಿ ಅಂಕಪಟ್ಟಿ ಜಾಲವನ್ನು ಬೇಧಿಸಿದ ಸಿಸಿಬಿ, .20-30 ಸಾವಿರಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಐದು ಸಂಸ್ಥೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ನಿವಾಸಿ ವಿಕಾಸ್‌ ಭಗತ್‌ ಬಂಧಿತನಾಗಿದ್ದು, ಈ ದಾಳಿ ವೇಳೆ 6800 ಅಧಿಕ ನಕಲಿ ಅಂಕಪಟ್ಟಿಗಳು, 22 ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಹಾಗೂ 13 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ರಾಜಾಜಿನಗರ, ಹೆಬ್ಬಾಳ, ಜೆ.ಪಿ.ನಗರ ಹಾಗೂ ವಿಜಯನಗರದಲ್ಲಿ ನಕಲಿ ಅಂಕಪಟ್ಟಿ ದಂಧೆಯ ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಕೆಲ ದಿನಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ ಹಾಗೂ ಮೈಕೋ ಲೇಔಟ್‌ಗಳ ದಾಳಿ ನಡೆಸಿ ನಕಲಿ ಅಂಕಪಟ್ಟಿದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಸಿಸಿಬಿ ಬಂಧಿಸಿತ್ತು.

Bengaluru Crime: ಹಣಕ್ಕೆ ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲ ಪತ್ತೆಹಚ್ಚಿದ ಸಿಸಿಬಿ

ನಗರದ ವಿವಿಧ ಸ್ಥಳಗಳಲ್ಲಿ ಎಜುಕೇಷನ್‌ ಕನ್ಸಲ್ಟೆಂಟ್‌ ಹೆಸರಿನಲ್ಲಿ ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ರಾಜಾಜಿನಗರ ನ್ಯೂ ಕ್ವೆಸ್ಟ್‌ ಟೆಕ್ನಾಲಿಜಿಸ್‌ ಸಂಸ್ಥೆ, ಭದ್ರಪ್ಪ ಲೇಔಟ್‌ನ ಆರೂಹಿ ಇನ್‌ಸ್ಟಿಟ್ಯೂಟ್‌, ಜೆ.ಪಿ.ನಗರದ ಸಿಸ್ಟಿಂ ಕ್ವೆಸ್ಟ್‌, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್‌ ಹಾಗೂ ವಿಜಯ ನಗರದ ಬೆಕನಾ ಕರೆಸ್ಪಾಂಡೆನ್ಸ್‌ ಕಾಲೇಜುಗಳ ಮೇಲೆ ಏಕಕಾಲಕ್ಕೆ ಸಿಸಿಬಿ ತಂಡಗಳು ದಾಳಿ ನಡೆಸಿ ಪರಿಶೀಲಿಸಿವೆ ಎಂದು ನಗರ ಪೊಲೀಸ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದರು.

ವಿವಿಗಳ ಜತೆ ಶಾಮೀಲಾಗಿ ಯಾವುದೇ ಪರೀಕ್ಷೆ ಬರೆಯದೇ ಇದ್ದರೂ ಸಹ 25ರಿಂದ 30 ಸಾವಿರಕ್ಕೆ ಅಕ್ರಮ ನಕಲಿ ಅಂಕಪಟ್ಟಿಗಳ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ತಯಾರಿಸಿ ಆರೋಪಿ ನೀಡುತ್ತಿದ್ದ. ದಾಳಿ ವೇಳೆ ನ್ಯೂ ಕ್ವಿಸ್ಟ್‌ ಟೆಕ್ನಾಲಜಿಸ್‌ ಹಾಗೂ ಸಿಸ್ಟಂ ಕ್ವಿಸ್ಟ್‌ ಸಂಸ್ಥೆಯ ಮಾಲಿಕನನ್ನು ಬಂಧಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಹಲವು ವರ್ಷಗಳಿಂದ ಶಿಕ್ಷಣ ಇಲಾಖೆ ಅಥವಾ ವಿವಿಗಳಿಂದ ಯಾವುದೇ ಅನುಮೋದನೆ ಹಾಗೂ ಪರವಾನಗಿ ಪಡೆಯದೆ ಅಕ್ರಮವಾಗಿ ನಕಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ಸಂಗತಿ ಪ್ರಾಥಮಿಕ ಹಂತದ ತನಿಖೆಯಲ್ಲಿ ಬಯಲಾಗಿದೆ. ಈ ಜಾಲದಲ್ಲಿ ಭಾಗಿಯಾದವರ ಪತ್ತೆಗೆ ತನಿಖೆ ನಡೆದಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಸಾಫ್ಟ್‌ವೇರ್‌ ಹೆಸರಿನಲ್ಲಿ ನಕಲಿ ಅಂಕಪಟ್ಟಿ ದಂಧೆ

ರಾಜಸ್ಥಾನ ರಾಜ್ಯದ ಜೈಪುರ ಮೂಲದ ಆಕಾಶ್‌ ಭಗತ್‌, ತನ್ನ ಕುಟುಂಬದ ಜತೆ ಬನ್ನೇರುಘಟ್ಟರಸ್ತೆಯ ಬಿಳೇಕಹಳ್ಳಿಯಲ್ಲಿ ನೆಲೆಸಿದ್ದಾನೆ. 2004ರಲ್ಲಿ ಆರ್‌ಓಸಿಯಲ್ಲಿ ‘ಸಿಸ್ಟಂ ಕ್ವೆಸ್ಟ್‌ ಟೆಕ್ನಾಲಜಿ’ ಎಂಬ ಹೆಸರಿನ ಸರ್ಕಾರದ ನೋಂದಣಿ ಮಾಡಿಸಿ ಕಂಪನಿ ಆರಂಭಿಸಿದ್ದು, ಇದು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ಕಂಪನಿ ಎಂದು ಹೇಳಿದ್ದ. ಆದರೆ ಆ ಕಂಪನಿಯ ಹೆಸರಿನಲ್ಲಿ ರಾಜಾಜಿ ನಗರದ ಸಿಸ್ಟಂ ಕ್ವೆಸ್ಟ್‌, ಜೆಪಿ ನಗರದ ಸಿಸ್ಟಂ ಕ್ವೆಸ್ಟ್‌, ಭದ್ರತಾ ಲೇಔಟ್‌ನ ಆರೂಹಿ ಇನ್‌ಸ್ಟಿಟ್ಯೂಟ್‌, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್‌, ವಿಜಯ ನಗರದ ಬೆಕನಾ ಕರೆಸ್ಪಾಂಡೆನ್ಸ್‌ ಎಂಬ ಬ್ರಾಂಚ್‌ಗಳನ್ನು ತೆರೆದಿದ್ದ. ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ವಿವಿಗಳ ಜತೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿರುವುದಾಗಿ ತನ್ನ ಸಂಪರ್ಕಿಸುವ ವಿದ್ಯಾರ್ಥಿಗಳಿಗೆ ನಂಬಿಸಿ ನಕಲಿ ಅಂಕಪಟ್ಟಿಗಳನ್ನು ವಿಕಾಸ್‌ ಭಗತ್‌ ನೀಡುತ್ತಿದ್ದ. ಇದಕ್ಕೆ ಪೂರಾವೆಗಳು ಸಿಕ್ಕಿವೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಎಚ್ಚರ ವಹಿಸಿ: ಆಯುಕ್ತ

ನಗರದಲ್ಲಿ ಎಜುಕೇಷನ್‌ ಕನ್ಸೆಲ್ಟೆಂಟ್‌, ಕರೆಸ್ಪಾಂಡೆನ್ಸ್‌ ಕಾಲೇಜ್‌ ಹಾಗೂ ಕೋಚಿಂಗ್‌ ಸೆಂಟರ್‌ ಮುಂತಾದ ಹೆಸರುಗಳಲ್ಲಿ ಕಚೇರಿಗಳನ್ನು ತೆರೆದು ಸಾರ್ವಜನಿಕರನ್ನು ನಂಬಿಸಿ ವಂಚಿಸುವ ಜಾಲಗಳಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿವಹಿಸಬೇಕು ಎಂದು ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಮನವಿ ಮಾಡಿದ್ದಾರೆ.

ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎಬಿವಿಪಿಯಿಂದ ಮುತ್ತಿಗೆ ಎಚ್ಚರಿಕೆ

ವಿವಿಗಳಲ್ಲಿ ವಿದ್ಯಾಭ್ಯಾಸ ಮಾಡದೆ ಇದ್ದರೂ ಪರೀಕ್ಷೆ ಬರೆಯದೇ ಸಹ ಜನರಿಗೆ ಪದವಿ ನಕಲಿ ಅಂಕಪಟ್ಟಿಗಳನ್ನು ನೀಡುವ ಸಂಸ್ಥೆಗಳಿವೆ. ಈ ಜಾಲದ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

-ವಿವಿಗಳ ವಿವರ-

ವಿವಿ ಅಂಕಪಟ್ಟಿಗಳು
ಅಣ್ಣಾಮಲೈ 238
ಸಿಕ್ಕಿಂ 5497
ಗೀತಂ 728
ಬಿಐಎಸ್‌ಸಿ 6
ಜನಾರ್ದನ್‌ ರೈ ನಗರ್‌ 2
ಐಬಿವಿಇ 12
ಕುವೆಂಪು 159
ಜೈನ್‌ ವಿಹಾರ್‌ ಜೈಪುರ್‌ 27
ಸಿಂಗಾನಿಯಾ ರಾಜಸ್ಥಾನ 152
ವೆಂಕಟೇಶ್ವರ ಅರುಣಾಚಲ ಪ್ರದೇಶ 4
ಮಂಗಳೂರು 7
ಆರ್‌ಐಓಎಸ್‌ ಛತ್ತೀಸ್‌ಘಡ 5
ಬಿಎಸ್‌ಇಎಚ್‌ ಹುಬ್ಬಳ್ಳಿ 1
ಬೆಂಗಳೂರು ವಿವಿ 1
ಕೆಎಸ್‌ಎಸ್‌ಎಲ್‌ 7

Follow Us:
Download App:
  • android
  • ios