ವಿದೇಶಿ ಡ್ರಗ್ಸ್‌ ಪೆಡ್ಲರ್‌ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ದೇಶದಲ್ಲಿ ಇದೇ ಮೊದಲು: ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ 

ಬೆಂಗಳೂರು(ಜ.13): ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದೇಶದಲ್ಲೇ ಪ್ರಥಮ ಬಾರಿಗೆ ವಿದೇಶಿ ಡ್ರಗ್ಸ್‌ ಪೆಡ್ಲರ್‌ವೊಬ್ಬನ ಬ್ಯಾಂಕ್‌ ಖಾತೆಗಳಲ್ಲಿದ್ದ ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ನಾರ್ಕೊಟಿಕ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರೋಪಿಕ್‌ ಸಬ್‌ಸ್ಟಾನ್ಸಸ್‌ ಆ್ಯಕ್ಟ್‌ (ಎನ್‌ಡಿಪಿಎಸ್‌) ಕಾಯ್ದೆಯಲ್ಲಿ ಕಲ್ಪಿಸಿರುವ ಅಧಿಕಾರ ಚಲಾಯಿಸಿ ಹಣ ಜಪ್ತಿ ಮಾಡಲಾಗಿದೆ. ಕಳೆದ ನವೆಂಬರ್‌ನಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ನೈಜಿರಿಯಾ ಮೂಲದ ಡ್ರಗ್ಸ್‌ ಪೆಡ್ಲರ್‌ ಪೀಟರ್‌ ಇಕೇಡಿ ಬಿಲಾನ್ವೋ(38)ನನ್ನು ಬಂಧಿಸಿದ್ದರು. 

ಬೆಂಗಳೂರು: ಡ್ರಗ್ಸ್‌ ಸಾಗಣೆ ಎಂದು ಬೆದರಿಸಿ ಹಣ ಸುಲಿಗೆ, 14 ಜನರ ಬಂಧನ

ಪ್ರಕರಣದ ವಿಚಾರಣೆ ನಡೆಸಿದ ಸಿಸಿಬಿ ಎನ್‌ಡಿಪಿಎಸ್‌ ಕಾಯ್ದೆ ಅಧಿಕಾರ ಚಲಾಯಿಸಿ ನಗದು ಹಣ ಹಾಗೂ ಏಳು ಬ್ಯಾಂಕ್‌ ಖಾತೆಗಳಲ್ಲಿದ್ದ ಒಟ್ಟು ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದಕ್ಕೆ ಚೆನ್ನೈನ ಸಕ್ಷಮ ಪ್ರಾಧಿಕಾರ ಮತ್ತು ಆಡಳಿತಾಧಿಕಾರಿ ಅನುಮೋದಿಸಿದ್ದಾರೆ. ವಿದೇಶಿ ಡ್ರಗ್ಸ್‌ ಪೆಡ್ಲರ್‌ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.