ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ನೆರೆಯ ಮುಸ್ಲಿಂ ಕುಟುಂಬಕ್ಕೆ ಸಹಾಯ ಮಾಡಲು ಹೋದ ಹಿಂದೂ ಯುವಕ ವೆಂಕಟೇಶನ ಮೇಲೆ, ಆತ ಮುಸ್ಲಿಂ ಯುವತಿಯೊಂದಿಗೆ ಪ್ರೇಮ ಸಲ್ಲಾಪ ನಡೆಸುತ್ತಿದ್ದಾನೆಂದು ತಪ್ಪು ತಿಳಿದು ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ.

ಕೊಪ್ಪಳ (ಫೆ.5): ಮುಸ್ಲಿಂ ಬಾಲಕಿಯ ಜೊತೆ ಹಿಂದು ಯುವಕನನ್ನು ನೋಡಿದ ಮುಸ್ಲಿಂ ಯುವಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಅಜ್ಮೀರ್ ಮತ್ತು ಆಫಿಯಾ ದಂಪತಿಗಳ ನಡುವೆ ನಡೆದ ಗಲಾಟೆಯನ್ನು ಬಿಡಿಸಲು ಹೋಗಿದ್ದ ನೆರೆಮನೆಯ ವೆಂಕಟೇಶ ಎಂಬ ಯುವಕನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಗಂಡನೊಂದಿಗೆ ಜಗಳವಾಡಿ ಮಕ್ಕಳ ಸಮೇತ ಮನೆ ಬಿಟ್ಟು ಹೋಗಿದ್ದ ಆಫಿಯಾಳನ್ನು ಮನವೋಲಿಸಿ ಕರೆತರಲು ಅಜ್ಮೀರ್ ನೀಡಿದ ಸೂಚನೆಯಂತೆ ವೆಂಕಟೇಶ ಗಂಗಾವತಿ ಬಸ್ ನಿಲ್ದಾಣಕ್ಕೆ ತೆರಳಿದ್ದನು.

ತಪ್ಪು ತಿಳುವಳಿಕೆಯಿಂದ ಹಿಗ್ಗಾಮುಗ್ಗಾ ಥಳಿತ

ಬಸ್ ನಿಲ್ದಾಣದಲ್ಲಿ ಬುರ್ಕಾ ಧರಿಸಿದ್ದ ಆಫಿಯಾ ಮತ್ತು ಆಕೆಯ 16 ವರ್ಷದ ಮಗಳ ಜೊತೆ ಮಾತನಾಡುತ್ತಿದ್ದ ವೆಂಕಟೇಶನನ್ನು ಕಂಡ ಕೆಲವು ಮುಸ್ಲಿಂ ಯುವಕರು, ಆತ ಮುಸ್ಲಿಂ ಬಾಲಕಿಯನ್ನು ಪ್ರೀತಿಸುತ್ತಿದ್ದಾನೆ ಎಂದು ತಪ್ಪು ಭಾವಿಸಿದ್ದಾರೆ. 'ಇವರು ನಮ್ಮೂರಿನವರು, ನಾನು ಇವರನ್ನು ಮನೆಗೆ ಕರೆದೊಯ್ಯಲು ಬಂದಿದ್ದೇನೆ' ಎಂದು ವೆಂಕಟೇಶ ಎಷ್ಟೇ ಬೇಡಿಕೊಂಡರೂ ಕೇಳದ ಯುವಕರ ಗುಂಪು ಆತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ವಿಡಿಯೋ ವೈರಲ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರಿಂದ ಹಲ್ಲೆ

ಹಲ್ಲೆ ನಡೆಸಿದ ಅಮೀರ್, ಖಾಜಾಫೀರ್, ಇಂದ್ರಾವಲಿ ಹಾಗೂ ಎಸ್‌ಡಿಪಿಐ ಸಂಘಟನೆಯ ಕೆಲವು ಕಾರ್ಯಕರ್ತರು ವೆಂಕಟೇಶನ ಮೊಬೈಲ್ ಕಸಿದುಕೊಂಡು, ಆತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಬಲವಂತವಾಗಿ ಒಪ್ಪಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ವೆಂಕಟೇಶನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆ ಎದುರು ಹೈಡ್ರಾಮಾ

ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ವೆಂಕಟೇಶ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಲಗ್ಗೆ ಇಟ್ಟ ಎಸ್‌ಡಿಪಿಐ ಸದಸ್ಯರು ಮತ್ತು ಮುಸ್ಲಿಂ ಯುವಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಕೇವಲ ನಮ್ಮವರ ಮೇಲೆ ಯಾಕೆ ಕೇಸ್ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿ, ವೆಂಕಟೇಶನ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಗಲಾಟೆ ನಡೆಸಿದ್ದಾರೆ.

ಕುಟುಂಬಸ್ಥರಿಂದ ವೆಂಕಟೇಶನ ಪರ ಸಮರ್ಥನೆ

ಈ ಇಡೀ ಪ್ರಕರಣದಲ್ಲಿ ಅಜ್ಮೀರ್ ಮತ್ತು ಆಫಿಯಾ ಕುಟುಂಬಸ್ಥರು ವೆಂಕಟೇಶನ ಪರವಾಗಿ ನಿಂತಿದ್ದಾರೆ. 'ವೆಂಕಟೇಶನದ್ದು ಯಾವುದೇ ತಪ್ಪಿಲ್ಲ, ನಮ್ಮ ಸಹಾಯಕ್ಕೆ ಆತ ಬಂದಿದ್ದ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ವೆಂಕಟೇಶ ನೀಡಿದ ದೂರಿನನ್ವಯ ಹಲ್ಲೆಕೋರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.