ಮತ್ತೆ ಕರ್ನಾಟಕದಲ್ಲಿ ಸ್ಯಾಟಲೈಟ್ ಫೋನ್ ಸದ್ದು: ಮೇ 23ರಿಂದ 29ರ ನಡುವೆ ಕರೆ ದಾಖಲು
ಸುಮಾರು ಆರು ತಿಂಗಳ ಬಳಿಕ ಕರಾವಳಿಯ ಮೂರು ಕಡೆಗಳಲ್ಲಿ ಹಾಗೂ ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್‌ಗಳ ಸಿಗ್ನಲ್ ಪತ್ತೆಯಾಗಿದೆ.
ಮಂಗಳೂರು (ಜೂ.06): ಸುಮಾರು ಆರು ತಿಂಗಳ ಬಳಿಕ ಕರಾವಳಿಯ ಮೂರು ಕಡೆಗಳಲ್ಲಿ ಹಾಗೂ ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್‌ಗಳ ಸಿಗ್ನಲ್ ಪತ್ತೆಯಾಗಿದೆ. ಮೇ 23ರಿಂದ 29ರ ವರೆಗೆ ಮಂಗಳೂರಿನ ಎರಡು ಕಡೆ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಂಡಿದೆ. ಕಳೆದ 10 ದಿನಗಳ ಅವಧಿಯಲ್ಲಿ ನಾಲ್ಕು ಕಡೆಗಳಿಂದ ಸ್ಯಾಟಲೈಟ್ ಫೋನ್ ಸಿಗ್ನಲ್ ಸಂಪರ್ಕಿಸಿರುವುದು ಪತ್ತೆಯಾಗಿದೆ.
ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ವ್ಯಕ್ತಿಗಳು ಯಾರು ಎಂಬುದು ನಿಗೂಢವಾಗಿದೆ. ನಿಷೇಧಿತ ಸ್ಯಾಟಲೈಟ್ ಫೋನ್‌ಗಳ ಸಿಗ್ನಲ್ ಕರಾವಳಿ ಮತ್ತು ಮಲೆನಾಡಿನಲ್ಲಿ ಪತ್ತೆಯಾಗುತ್ತಿರುವುದು ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿ. ಆದರೂ ಈ ಕರೆಯ ಮೂಲ, ಯಾಕಾಗಿ ಕರೆ ಮಾಡುತ್ತಾರೆ, ಯಾರು ಕರೆ ಮಾಡುತ್ತಾರೆ ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ, ಮಂಗಳೂರು ನಗರ ಹೊರಭಾಗದ ನಾಟೆಕಲ್, ಕುಳಾಯಿ ಹಾಗೂ ಚಿಕ್ಕಮಗಳೂರಿನ ಕಡೂರು-ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿದೆ.
ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸೌಂಡ್: ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ ಗೃಹ ಸಚಿವ
ಈ ಹಿನ್ನೆಲೆಯಲ್ಲಿ ಈಗ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಿಗ್ನಲ್ ಪತ್ತೆಯಾದ ಪ್ರದೇಶಗಳಿಗೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಭಾರತದಲ್ಲಿ ತುರಾಯ ಸ್ಯಾಟಲೈಟ್ ಫೋನ್ ನಿಷೇಧವಿದೆ. ಈ ಫೋನ್ ಬಳಸಿ ಬೇರೊಂದು ಸ್ಥಳವನ್ನು ತೋರಿಸಿ ಕರೆ ಮಾಡುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಮೂಲಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಐಎಸ್‌ಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ಯಾವುದೆಲ್ಲ ಸ್ಥಳದಿಂದ ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಇಲ್ಲಿಂದ ಕರೆ ಮಾಡಲಾಗಿದೆಯೇ ಅಥವಾ ಇಲ್ಲಿನ ಲೊಕೇಷನ್ ಬಳಸಿ ಬೇರೆ ಕಡೆಗಳಿಂದ ಕರೆ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಮಾಡುವುದು ಇಲಾಖೆಗೂ ಸವಾಲಿನ ಕೆಲಸವಾಗಿದೆ.
ಆಫ್ಘನ್ ಉಗ್ರರಿಗೆ ಸಿಕ್ಕ ಉಪಗೃಹ ಫೋನ್‌ಗಳು ಕಾಶ್ಮೀರದಲ್ಲಿ ಪ್ರತ್ಯಕ್ಷ: ಅಮೆರಿಕದ ಪಡೆಗಳು ಅಫ್ಘಾನಿಸ್ತಾನವನ್ನು ಬಿಟ್ಟು ಹೊರಟ ಬಳಿಕ ಅಲ್ಲಿ ಉಳಿದ ಶಸ್ತ್ರಾಸ್ತ್ರಗಳು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನ ಪರ ಉಗ್ರರ ಪಾಲಾಗಬಹುದು ಎಂಬ ಆತಂಕ ನಿಜವಾಗಿದೆ. ಅಷ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಬಳಕೆ ಮಾಡುತ್ತಿದ್ದ ಉಪಗ್ರಹ ಫೋನುಗಳು ಕಳೆದ ವಾರ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಸಕ್ರಿಯವಾಗಿದ್ದವು ಎಂದು ಗುಪ್ತಚರ ಇಲಾಖೆ ಆತಂಕಕಾರಿ ಮಾಹಿತಿ ಹೊರಗೆಡವಿದೆ.
ಕರಾವಳಿ, ಮಲೆನಾಡಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು!
ಅಮೆರಿಕದ ಇರಿಡಿಯಂ ಕಂಪನಿಯ 8 ಉಪಗ್ರಹ ಫೋನುಗಳು ಫೆ.13ರಿಂದ ಜಮ್ಮು-ಕಾಶ್ಮೀರದ ಬದ್ಗಾಂ, ಬಂಡೀಪೋರ, ಕುಪ್ವಾರಾ, ಪುಲ್ವಾಮಾ ಮತ್ತು ಬಾರಾಮುಲ್ಲಾ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ಫೆ.14ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲೂ ಸಕ್ರಿಯವಾಗಿದ್ದವು. ಪುಲ್ವಾಮಾ ದಾಳಿಗೆ 3 ವರ್ಷ ತುಂಬುವ ಮುನ್ನಾ ದಿನವೇ ಈ ಎಲ್ಲಾ ಫೋನ್‌ಗಳು ಸಕ್ರಿಯವಾಗಿದ್ದು ವಿಶೇಷ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಷ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ವಿವಿಧ ಉಗ್ರ ಸಂಘಟನೆಗಳು ಅಥವಾ ಅಲ್ಲಿ ಸಕ್ರಿಯವಾಗಿರುವ ಪಾಕ್ ಮೂಲದ ಸಂಘಟನೆಗಳು ಈ ಉಪಗ್ರಹ ಫೋನ್‌ಗಳನ್ನು ಕಾಶ್ಮೀರಕ್ಕೆ ರವಾನಿಸಿರಬಹುದು ಎಂದು ಗುಪ್ತಚರ ಸಂಘಟನೆಗಳು ಹೇಳಿವೆ.