ಸ್ಯಾಂಟ್ರೋ ರವಿ ಜತೆ 9 ಪೊಲೀಸರ ನಂಟು, ಇಲಾಖೆಗೆ ತೀವ್ರ ಮುಜುಗರ..!
ಪೊಲೀಸರಿಗೇ ಸ್ಯಾಂಟ್ರೋ ರವಿಯ ಸಹಾಯ, ಸ್ಯಾಂಟ್ರೋ ರವಿಯ ಸಹಾಯ ಪಡೆದ ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳು, ಸಿಎಂ ಹೆಸರು ಹೇಳಿ ಡಿವೈಎಸ್ಪಿಯನ್ನೇ ಜುಜುಬಿ ಎಂದ ಸ್ಯಾಂಟ್ರೋ, ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ಆಡಿಯೋ ವೈರಲ್, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ.
ಬೆಂಗಳೂರು(ಜ.15): ಆಯಕಟ್ಟಿನ ಹುದ್ದೆ ಪಡೆಯಲು ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ನೆರವು ಕೋರಿದ್ದರು ಎನ್ನಲಾದ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಈಗ ರಾಜ್ಯ ಗೃಹ ಇಲಾಖೆ ಹಿಂದೇಟು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಸ್ಯಾಂಟ್ರೋ ರವಿಯ ಸಹವಾಸದಲ್ಲಿದ್ದರು ಎಂಬ ಆರೋಪಕ್ಕೆ ಮಂಡ್ಯ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ಡಿವೈಎಸ್ಪಿಗಳು, ಶಿವಮೊಗ್ಗ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐವರು ಇನ್‌ಸ್ಪೆಕ್ಟರ್‌ಗಳು, ಮಂಡ್ಯ ಜಿಲ್ಲೆಯ ಓರ್ವ ಸಬ್ ಇನ್‌ಸ್ಪೆಕ್ಟರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಕಚೇರಿ ಓರ್ವ ಸಹಾಯಕ ಸೇರಿದಂತೆ ಎಂಟು ಮಂದಿ ತುತ್ತಾಗಿದ್ದಾರೆ.
ವರ್ಗಾವಣೆ ಸಂಬಂಧ ರವಿ ಜತೆ ನಡೆಸಿದ್ದಾರೆ ಎನ್ನಲಾದ ಡಿವೈಎಸ್ಪಿ ಮಾತುಕತೆ ವಿಡಿಯೋ ಹಾಗೂ ಇನ್‌ಸ್ಪೆಕ್ಟರ್ ವಾಟ್ಸ್‌ಆ್ಯಪ್ ಚಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಗೆ ಭಾರಿ ಮುಜುಗರ ತಂದಿವೆ. ವೇಶ್ಯಾವಾಟಿಕೆಗೆ ತನ್ನ ಪತ್ನಿಯನ್ನು ಬಲವಂತಪಡಿಸಿದ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ ರವಿ ಬಂಧನ ಬೆನ್ನಲ್ಲೇ ಆತನ ಸಾಂಗತ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಸ್ಯಾಂಟ್ರೋ ರವಿ ಪ್ರಕರಣ: ಎಚ್‌ಡಿಕೆ ಮತ್ತೊಂದು ಸ್ಫೋಟಕ ಹೇಳಿಕೆ
ನನ್ನ ಸರ್ ಅಂತ ಸಿಎಂ ಕರೀತಾರೆ: ಸ್ಯಾಂಟ್ರೋ
ಡಿವೈಎಸ್ಪಿವೊಬ್ಬರಿಗೆ ‘ನನ್ನನ್ನು ಸಿಎಂ ಅವರೇ ಸರ್ ಎಂದು ಮಾತನಾಡಿಸುತ್ತಾರೆ. ನೀವು ಖಾಲಿ ಡಿವೈಎಸ್ಪಿ. ಸರ್ ಅಂತ ಮಾತನಾಡ್ರೀ’ ಎಂದು ಸ್ಯಾಂಟ್ರೋ ರವಿ ಆವಾಜ್ ಹಾಕುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ.
ವರ್ಗಾವಣೆ ಸಲುವಾಗಿ ರವಿಗೆ ಕರೆ ಮಾಡುವ ಡಿವೈಎಸ್ಪಿ ಅವರು, ‘ನಿಮ್ಮ ಬಗ್ಗೆ ನಮ್ಮ ಸ್ನೇಹಿತ (ಇವರು ಸಹ ಡಿವೈಎಸ್ಪಿ ಎನ್ನಲಾಗಿದೆ) ಹೇಳಿದ್ರು. ನೋಡಿ ನಮಗೆ ಸಹಾಯ ಮಾಡಿ’ ಎಂದು ಕೇಳುತ್ತಾರೆ. ಆಗ ‘ನನಗೆ 1998 ಬ್ಯಾಚ್‌ನ ಎಲ್ಲ ಡಿವೈಎಸ್ಪಿ/ಇನ್‌ಸ್ಪೆಕ್ಟರ್‌ಗಳು ಸ್ನೇಹಿತರು. ನಿಮ್ಮ ಗೆಳೆಯ ಸಹ ಆತ್ಮೀಯ. ನಿಮಗೆ ಸಹಾಯ ಮಾಡುತ್ತೇನೆ ಬಿಡಿ’ ಎನ್ನುತ್ತಾನೆ. ಆಗ ‘ನನ್ನನ್ನು ಸಿಎಂ ಅವರೇ ಸರ್ ಅಂತ ಮಾತನಾಡಿಸುತ್ತಾರೆ. ನೀವು ಖಾಲಿ ಡಿವೈಎಸ್ಪಿ ಕಣ್ರೀ’ ಎಂದು ಜೋರು ದನಿಯಲ್ಲಿ ಮಾತನಾಡುತ್ತಾನೆ. ಆಗ ತಡಬಡಾಯಿಸುವ ಡಿವೈಎಸ್ಪಿ, ‘ಗೊತ್ತಾಗಲಿಲ್ಲ ಇವರೇ. ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ವಿನಯದಿಂದ ಪ್ರತಿಕ್ರಿಯಿಸುತ್ತಾರೆ. ಆಗ ಕುಮಾರಕೃಪಾ ಅತಿಥಿ ಗೃಹಕ್ಕೆ ಬರುವಂತೆ ಆತ ಆಹ್ವಾನಿಸುತ್ತಾನೆ.
‘ಮೈಸೂರು ರಸ್ತೆಯ ಠಾಣೆಗೆ 50 ರು. ಕಮಿಟ್ ಆಗಿದ್ದೀನಿ’
ಆ ಪೊಲೀಸ್ ಠಾಣೆ (ಬೆಂಗಳೂರು ಹೊರವಲಯದ ಮೈಸೂರು ರಸ್ತೆಯ)ಗೆ .50 ರುಪಾಯಿ (50 ಲಕ್ಷ)ಗೆ ಕಮಿಟ್ ಆಗಿದ್ದೀನಿ. ಈಗಾಗಲೇ ಅವ್ರು 25 ರುಪಾಯಿ (25 ಲಕ್ಷ) ಅಡ್ವಾನ್ಸ್ ಕೊಟ್ಟು ಬಿಟ್ಟಿದ್ದಾರೆ. ಅದರ ಸಲುವಾಗಿಯೇ ಮೈಸೂರಿನಲ್ಲಿ ನಮ್ಮ ಸಾಹೇಬ್ರು ಭೇಟಿಯಾಗಲು ಬಂದಿದ್ದೇನೆ ಎಂದು ಇನ್‌ಸ್ಪೆಕ್ಟರ್‌ವೊಬ್ಬರ ಜತೆ ಸ್ಯಾಂಟ್ರೋ ರವಿ ಹೇಳಿದ್ದಾನೆ.
ಈ ವರ್ಗಾವಣೆ ಡೀಲ್ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಬೆಂಗಳೂರು ಹೊರವಲಯ ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಠಾಣೆಗೆ ವರ್ಗಾವಣೆ ಕೋರಿ ಸ್ಯಾಂಟ್ರೋ ರವಿಗೆ ಇನ್‌ಸ್ಪೆಕ್ಟರ್‌ವೊಬ್ಬರು ದುಂಬಾಲು ಬಿದ್ದಿರುವುದು ಬಯಲಾಗಿದೆ. ನನಗೆ ಮೈಸೂರು ರಸ್ತೆಯ ಠಾಣೆ ಆಗುವುದಾದರೆ ಮಾಡಿಸಿಕೊಡಿ ಸರ್ ಎಂದು ರವಿಗೆ ಪಿಐ ವಿನಂತಿಸುತ್ತಾರೆ. ಇದಕ್ಕೆ ರವಿ, ಇಲ್ಲ ಆಗಲ್ಲ. ಈಗಾಗಲೇ ಆ ಠಾಣೆಗೆ 50 ರುಪಾಯಿಗೆ ಕಮಿಟ್ ಆಗಿದ್ದೀನಿ. ಆಗಲೇ ಅವ್ರು 25 ರುಪಾಯಿ ಅಡ್ವಾನ್ಸ್ ಕೊಟ್ಟು ಬಿಟ್ಟಿದ್ದಾರೆ. ನಿಮಗೆ ತುಮಕೂರು ರಸ್ತೆಯ ಟ್ರಾಫಿಕ್ ಠಾಣೆ ಪಕ್ಕಾ ಮಾಡಿಸಿಕೊಡುತ್ತೇನೆ ಎಂದಿದ್ದಾನೆ.
ಸ್ಯಾಂಟ್ರೋ ರವಿ ಬಂಧನಕ್ಕೆ ನಿಮಿಷಾಂಬ ದೇವಿ ಪವಾಡ: ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್
ಆಗ ಇನ್‌ಸ್ಪೆಕ್ಟರ್, ಇಲ್ಲ ಸರ್ ನಿಮ್ಮ ಬಗ್ಗೆ ನನ್ನ ಬ್ಯಾಚ್‌ಮೇಟ್ ಬಹಳ ಹೇಳಿದ್ದಾರೆ. ನನ್ನ ಅವಧಿ ಇಲ್ಲಿ ಮುಗಿಯುವುದರೊಳಗೆ ತುಮಕೂರು ರಸ್ತೆಯ ಠಾಣೆ ಪಕ್ಕಾ ಮಾಡಿಕೊಳ್ಳಬೇಕೆಂದು ಗೊಗರೆಯುತ್ತಾರೆ. ಆ ಠಾಣೆ ಡಿಸೆಂಬರ್‌ನಲ್ಲಿ ನೆಲಮಂಗಲ ಖಾಲಿಯಾಗುತ್ತದೆ. ಹೆದರಬೇಡಿ ನಾನು ಮಾಡಿಸಿಕೊಡುತ್ತೇನೆ. ಅದೂ ಒಳ್ಳೆಯ ಸ್ಟೇಷನ್. ನೀವು ಬೇಕಾದರೆ ಬೆಂಗಳೂರು ಗ್ರಾಮಾಂತರ ಮತ್ತೊಂದು ಸ್ಟೇಷನ್ ಚಾಯ್‌್ಸ ಮಾಡಿಕೊಳ್ಳಿ ಎಂದು ಸ್ಯಾಂಟ್ರೋ ಹೇಳುತ್ತಾನೆ.
ನನಗೆ ಆ ಇಬ್ಬರು ಒನ್ ಟು ಒನ್
ಇನ್‌ಸ್ಪೆಕ್ಟರ್‌ವೊಬ್ಬರ ಜತೆ ‘ವರ್ಗಾವಣೆ ಡೀಲ್’ ಮಾತುಕತೆ ವೇಳೆ ರಾಜ್ಯ ಪೊಲೀಸ್ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಸ್ಯಾಂಟ್ರೋ ರವಿ ಪ್ರಸ್ತಾಪಿಸಿದ್ದಾನೆ. ತನಗೆ ಆ ಇಬ್ಬರು ಹಿರಿಯ ಅಧಿಕಾರಿಗಳು ಒನ್-ಟು-ಒನ್ ಇದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
ಐಪಿಎಸ್ ಅಧಿಕಾರಿಗಳೇ ಸ್ವೀಟ್ ಬ್ರದರ್‌ಗಳು!
ಇನ್ನು ತನ್ನ ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಫೋಟೋಗಳನ್ನು ಹಾಕಿಕೊಂಡು ಆತ್ಮೀಯ ಎನ್ನುವಂತೆ ರವಿ ಬಿಂಬಿಸಿಕೊಂಡಿದ್ದರುವುದು ಬೆಳಕಿಗೆ ಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ಫೋಟೋ ಹಾಕಿ ‘ಮೈ ಸ್ವೀಟ್ ಬ್ರದರ್’ ಎಂದರೆ, ಬೆಂಗಳೂರಿನ ಆನ್ ಎಕ್ಸ್‌ಕ್ಯುಟಿವ್ ಹುದ್ದೆಯಲ್ಲಿರುವ ಹಿರಿಯ ಎಸ್ಪಿ ದರ್ಜೆ ಅಧಿಕಾರಿಯನ್ನು ‘ಮೈ ವೆಲ್‌ವಿಶರ್’ ಎಂದು ಸ್ಯಾಂಟ್ರೋ ರವಿ ಬರೆದುಕೊಂಡಿದ್ದ ಎನ್ನಲಾದ ಸ್ಟೇಟಸ್ ಫೋಟೋ ವೈರಲ್ ಆಗಿವೆ. ಅಲ್ಲದೆ ಪೊಲೀಸ್ ಅಧಿಕಾರಿಯೊಬ್ಬರು ರವಿಗೆ ಹಣ ಕಂತೆಗಳಿರುವ ಫೋಟೋ ಕಳುಹಿಸಿ ದುಡ್ಡು ರೆಡಿಯಾಗಿದೆ ಎಂದಿದ್ದಾರೆ.