Sandalwood smuggling in Bengaluru: ಬೆಂಗಳೂರು ಸಿದ್ಧಾಪುರ ಪೊಲೀಸರು, ಈರುಳ್ಳಿ ಚೀಲಗಳ ಕೆಳಗೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಆಂಧ್ರಪ್ರದೇಶ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 750 ಕೆ.ಜಿ ತೂಕದ ಶ್ರೀಗಂಧ, ಒಂದು ಸರಕು ಸಾಗಣೆ ವಾಹನ ವಶಕ್ಕೆ. 

ಬೆಂಗಳೂರು (ಅ.27): ಸಿನಿಮಾ ಶೈಲಿಯಲ್ಲಿ ಸರಕು ಸಾಗಣೆ ವಾಹನದಲ್ಲಿ ಈರುಳ್ಳಿ ಚೀಲಗಳ ನಡುವೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಕರ್ನೂಲ್‌ ಮೂಲದ ಶೇಕ್‌ ಅಬ್ದುಲ್‌ ಕಲಾಂ (47), ರಾಮ ಭೂಪಾಲ್‌ (40), ಶೇಕ್‌ ಶಾರೂಖ್‌ (31) ಮತ್ತು ಪರಮೇಶ್‌ (30) ಬಂಧಿತರು. ಆರೋಪಿಗಳಿಂದ 750 ಕೆ.ಜಿ. ತೂಕದ 258 ಶ್ರೀಗಂಧದ ತುಂಡುಗಳು, ಲಘು ಸರಕು ಸಾಗಣೆ ವಾಹನ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಅ.16ರಂದು ಮುಂಜಾನೆ 12.30ರ ಸುಮಾರಿಗೆ ಸೋಮೇಶ್ವರನಗರ ಆರ್ಚ್‌ ಬಳಿ ಗೂಡ್ಸ್‌ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಮಾಲು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈರುಳ್ಳಿ ಚೀಲಗಳ ಮಧ್ಯೆ 258 ಶ್ರೀಗಂಧದ ತುಂಡು!

ಆರೋಪಿಗಳು ಆಂಧ್ರಪ್ರದೇಶ ಕರ್ನೂಲ್‌ನಿಂದ ಶ್ರೀಗಂಧದ ತುಂಡುಗಳನ್ನು ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು. 258 ಶ್ರೀಗಂಧದ ತುಂಡುಗಳನ್ನು 18 ಚೀಲಗಳಿಗೆ ತುಂಬಿ ಲಘು ಸರಕು ಸಾಗಣೆ ವಾಹನಕ್ಕೆ ಲೋಡ್‌ ಮಾಡಿದ್ದರು. ಯಾರಿಗೂ ಅನುಮಾನಬಾರದಂತೆ ಈ ಚೀಲಗಳ ಮೇಲೆ ಈರುಳ್ಳಿ ಚೀಲಗಳನ್ನು ಹಾಕಿಕೊಂಡು ನಗರಕ್ಕೆ ಬಂದಿದ್ದರು. ಶೇಕ್‌ ಶಾರೂಕ್‌ ಈ ಲಘು ಸರಕು ಸಾಗಣೆ ವಾಹನ ಚಾಲನೆ ಮಾಡಿಕೊಂಡು ಬಂದರೆ, ಈ ವಾಹನದ ಹಿಂದೆ ಉಳಿದ ಮೂವರು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು.

ಹೊಸೂರು ರಸ್ತೆಯ ಸೋಮೇಶ್ವರನಗರ ಆರ್ಚ್‌ ಬಳಿ ಲಘು ಸರಕು ಸಾಗಣೆ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಆ ಲಘು ಸರಕು ಸಾಗಣೆ ವಾಹನ ಹಾಗೂ ಕಾರನ್ನು ಜಪ್ತಿ ಮಾಡಿ ನಾಲ್ವರನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಠಾಣೆಗೆ ಕರೆತಂದು ಲಘು ಸರಕು ಸಾಗಣೆ ವಾಹನ ಪರಿಶೀಲಿಸಿದಾಗ ಈರುಳ್ಳಿ ಚೀಲಗಳ ನಡುವೆ ಶ್ರೀಗಂಧದ ತುಂಡುಗಳು ಇದ್ದ ಚೀಲಗಳು ಪತ್ತೆಯಾದವು.

ನಗರದ ವ್ಯಕ್ತಿಗೆ ಶ್ರೀಗಂಧ ಮಾರಾಟ ಸಂಚು

ನಾಲ್ವರು ಆರೋಪಿಗಳು ಈ ಶ್ರೀಗಂಧದ ತುಂಡುಗಳನ್ನು ನಗರದ ವ್ಯಕ್ತಿಯೊಬ್ಬನಿಗೆ ತಲುಪಿಸಲು ಬಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಕಳ್ಳ ಸಾಗಣೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.