ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ನಂತರ ಕಡ್ಡಾಯ ರಜೆಯಲ್ಲಿದ್ದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಿಸಲಾಗಿದೆ. ರನ್ಯಾ ರಾವ್ ಅವರನ್ನು 14.2 ಕೆಜಿ ಚಿನ್ನದೊಂದಿಗೆ ಬಂಧಿಸಲಾಗಿತ್ತು.
ಬೆಂಗಳೂರು: ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ. ರಾಮಚಂದ್ರ ರಾವ್ ಅವರ ಕಡ್ಡಾಯ ರಜೆ ಆದೇಶವನ್ನು ರಾಜ್ಯ ಸರ್ಕಾರ ಸೋಮವಾರ ರದ್ದುಗೊಳಿಸಿದೆ. ಇದೀಗ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಿಸಲಾಗಿದೆ. 1993ರ ಬ್ಯಾಚ್‌ನ ಈ ಅಧಿಕಾರಿಯನ್ನು ಮಾರ್ಚ್ 15ರಂದು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು. ರಾವ್ ಅವರ ಪುತ್ರಿ ಹಾಗೂ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಕೆಲವೇ ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ರಜೆಗೆ ಕಳುಹಿಸುವ ಸಂದರ್ಭದಲ್ಲಿ ಸರ್ಕಾರ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿರಲಿಲ್ಲ.
ಪ್ರಕರಣದ ಪ್ರಕಾರ, ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನದೊಂದಿಗೆ ಬಂಧಿಸಿತ್ತು. ನಂತರ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಅವರ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಚಾರಣೆ ಎದುರಿಸಿದ್ದ ರನ್ಯಾ ರಾವ್:
ಮಾರ್ಚ್ ತಿಂಗಳಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಪ್ರಕರಣ ಬೆಳಕಿಗೆ ಬಂದಾಗ ಅವರ ಮಲ ತಂದೆ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ. ರಾಮಚಂದ್ರ ರಾವ್ ಅವರ ವಿಚಾರಣೆ ಕೂಡ ನಡೆದಿತ್ತು. ರಾಜ್ಯ ಸರ್ಕಾರವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ನೇತೃತ್ವದಲ್ಲಿ ವಿಶೇಷ ವಿಚಾರಣಾ ಸಮಿತಿಯನ್ನು ರಚಿಸಿ, ಡಿಜಿಪಿ ರಾವ್ ವಿರುದ್ಧ ಪೊಲೀಸ್ ಶಿಷ್ಟಾಚಾರ ಸೇವೆಗಳ ದುರುಪಯೋಗ ಮತ್ತು ಈ ಪ್ರಕರಣದಲ್ಲಿ ಸಂಭಾವ್ಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ವೇಳೆ, ರನ್ಯಾ ರಾವ್ ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಮತ್ತು ವಿಮಾನ ನಿಲ್ದಾಣದಲ್ಲಿ ಚೆಕ್ಔಟ್ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿ, ತಮಗೆ ನೀಡಲಾಗಿದ್ದ ಪೊಲೀಸ್ ಬೆಂಗಾವಲು ಪಡೆಯನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಮಾರ್ಚ್‌ನಲ್ಲಿ ದುಬೈನಿಂದ ಬಂದಿಳಿದ ರನ್ಯಾ, ಸುಂಕ ಪಾವತಿಸಬೇಕಾದ ವಸ್ತುಗಳಿಲ್ಲದ ಪ್ರಯಾಣಿಕರಿಗಾಗಿ ಮೀಸಲಾದ ಗ್ರೀನ್ ಚಾನೆಲ್ ಮೂಲಕ ತಪ್ಪಿಸಲು ಯತ್ನಿಸುವಾಗ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. .
ಡಿಆರ್‌ಐ ಸಿಬ್ಬಂದಿ ಪ್ರಶ್ನಿಸಿದಾಗ, ರನ್ಯಾ ಆತಂಕದ ನಡವಳಿಕೆ ತೋರಿದರು. ಇದರಿಂದ ಅನುಮಾನಗೊಂಡ ಮಹಿಳಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಅವರ ಬಳಿ 12.56 ಕೋಟಿ ರೂ. ಮೌಲ್ಯದ 14.2 ಕಿಲೋಗ್ರಾಂ ಚಿನ್ನ ಪತ್ತೆಹಚ್ಚಿದರು. ತಕ್ಷಣವೇ ಅವರನ್ನು ಬಂಧಿಸಲಾಯಿತು. ರನ್ಯಾ ರಾವ್ ಅವರಿಗೆ ಮೇ ತಿಂಗಳಲ್ಲಿ ಜಾಮೀನು ಮಂಜೂರಾದರೂ, ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ, ಅವರು ಇನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಉಳಿದಿದ್ದಾರೆ. ಈ ಕಾಯ್ದೆಯ ಪ್ರಕಾರ, ಒಂದು ವರ್ಷದವರೆಗೆ ಅವರಿಗೆ ಜಾಮೀನು ಸಿಗುವುದಿಲ್ಲ.
