ಬೆಂಗಳೂರಿನಲ್ಲಿ ಕಳ್ಳತನಕ್ಕೆ ಯತ್ನಿಸಿದ ಆಟೋ ಚಾಲಕನೊಬ್ಬ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ನಂತರ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮತ್ತು ತನ್ನನ್ನು ಬಿಟ್ಟು ಓಡಿಹೋದ ಸ್ನೇಹಿತರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಚ್ಚರಿ ಮೂಡಿಸಿದ್ದಾನೆ. 

ಬೆಂಗಳೂರು (ಫೆ.5): ಕಳ್ಳತನಕ್ಕೆ ಹೋಗಿದ್ದಾಗ ಅಪಾರ್ಟ್‌ಮೆಂಟಿನವರು ಹೊಡೆದ್ರೂ ಅಂತಾ ಕಳ್ಳನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಬೆಂಗಳೂರಿನ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಜ್ಗರ್ ಖಾನ್ ಎಂಬ ವ್ಯಕ್ತಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ, ಆತನಿಗೆ ಕೆಲವು ಕೆಟ್ಟ ಚಟಗಳಿದ್ದವು. ಆಟೋ ಓಡಿಸಿ ಬರುತ್ತಿದ್ದ ಹಣ ತನ್ನ ಖರ್ಚಿಗೆ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಅಜ್ಗರ್ ಚಿಂತಿತನಾಗಿದ್ದ. ಇದೇ ವೇಳೆ ತನ್ನ ಸ್ನೇಹಿತರು ಕಳ್ಳತನ ಮಾಡಿ ಮಜಾ ಮಾಡುತ್ತಿರುವುದನ್ನು ಕಂಡು, ತಾನು ಕೂಡ ಅದೇ ಹಾದಿ ಹಿಡಿಯಲು ನಿರ್ಧರಿಸಿದ್ದ.

ಮೊದಲ ಪ್ರಯತ್ನದಲ್ಲೇ ಯಡವಟ್ಟು: ಧರ್ಮದೇಟು

ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಅಜ್ಗರ್ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣ ಕದಿಯಲು ಪ್ಲಾನ್ ಮಾಡಿದ್ದ. ಯೋಜನೆಯಂತೆ ಮೂವರೂ ಸೇರಿ ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿದ್ದರು. ಆದರೆ, ಈ ವೇಳೆ ಅಲ್ಲಿನ ದಂಪತಿಗಳು ಇವರನ್ನು ನೋಡಿ ಪ್ರಶ್ನಿಸಿದಾಗ ಗಾಬರಿಯಾದ ಅಜ್ಗರ್, ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಜೊತೆಗಿದ್ದವರು ಎಸ್ಕೇಪ್, ಏಕಾಂಗಿಯಾಗಿ ಸಿಕ್ಕಿಬಿದ್ದ ಅಜ್ಗರ್ ಗೂಸಾ

ಜನ ಸೇರುವುದನ್ನು ಗಮನಿಸಿದ ಅಜ್ಗರ್‌ನ ಇಬ್ಬರು ಸ್ನೇಹಿತರು, ತಮ್ಮವನನ್ನು ಅಲ್ಲೇ ಬಿಟ್ಟು ಅಜ್ಗರ್‌ನ ಆಟೋವನ್ನೇ ಹತ್ತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ಜನರಿಗೆ ಸಿಕ್ಕಿಬಿದ್ದ ಅಜ್ಗರ್‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳ್ಳತನಕ್ಕೆ ಬಂದಿದ್ದೀಯಾ ಎಂದು ಆಕ್ರೋಶಗೊಂಡ ಸಾರ್ವಜನಿಕರು ಮರದ ಪೀಸ್‌ಗಳಿಂದ ಆತನ ತಲೆಗೆ ಹೊಡೆದು ಬೆಂಡೆತ್ತಿದ್ದಾರೆ ಮಾಡಿದ್ದಾರೆ.

ಹೊಡೆದ್ರು ಅಂತಾ ಠಾಣೆ ಮೆಟ್ಟಿಲೇರಿದ 'ಐನಾತಿ' ಕಳ್ಳ!

ಸಾರ್ವಜನಿಕರ ಏಟಿನಿಂದ ಹೇಗೋ ತಪ್ಪಿಸಿಕೊಂಡು ಓಡಿದ ಅಜ್ಗರ್, ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾನೆ. ಅಲ್ಲಿಗೆ ಸುಮ್ಮನಾಗದ ಈತ, ತಾನು ಕಳ್ಳತನ ಮಾಡಲು ಹೋದಾಗ ಸಾರ್ವಜನಿಕರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ! ತನ್ನನ್ನೇ ಬಿಟ್ಟು ಓಡಿಹೋದ ಗೆಳೆಯರ ವಿರುದ್ಧ ಮತ್ತು ಹಲ್ಲೆ ಮಾಡಿದವರ ವಿರುದ್ಧ ನ್ಯಾಯ ಬೇಕೆಂದು ಈತ ಪೊಲೀಸರ ಮುಂದೆ ನಿಂತಿದ್ದಾನೆ.

ಪೊಲೀಸರಿಂದ ಎಫ್‌ಐಆರ್ ದಾಖಲು

ಕಳ್ಳನೇ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಳ್ಳತನಕ್ಕೆ ಹೋಗಿ ಒದೆ ತಿಂದಿದ್ದಲ್ಲದೆ, ತಾನೇ ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಈ 'ವಿಚಿತ್ರ ಕಳ್ಳ'ನ ಕಥೆ ಕೇಳಿ ಪೊಲೀಸರೇ ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.