ಮಹಿಳಾ ತಹಶೀಲ್ದಾರ್ ವೊಬ್ಬರ ವೈಯಕ್ತಿಯ ಜೀವನಕ್ಕೆ ಕೈ ಹಾಕಿ ಜೈಲು ಪಾಲಾದ ಆರ್‌ಟಿಐ ಕಾರ್ಯಕರ್ತ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಅ.02): ಸರ್ಕಾರಿ ಮಾಹಿತಿ ಪಡೆಯಲು, ಏನಾದರೂ ಯೋಜನೆ, ಕಾಮಗಾರಿಯ ಮೊತ್ತ ಅಥವಾ ಅನುದಾನಗಳ ಬಗ್ಗೆ ಮಾಹಿತಿ ಪಡೆದುಕೊಳಲು ಅವರಿವರನ್ನು ಕೇಳಿಕೊಳ್ಳುವ ಬದಲು ಆರ್‌ಟಿಐ ಮೂಲಕ ಅರ್ಜಿ ಹಾಕಿದರೆ ಸಾಕು ಮಾಹಿತಿ ಸಿಗುತ್ತೆ. ಹೀಗಾಗಿ ಹಲವಾರು ಕಡೆ ಆರ್‌ಟಿಐ ಕಾರ್ಯಕರ್ತರ ಭಯದಿಂದ ಕೆಲ ಅಧಿಕಾರಿಗಳು ಸ್ವಲ್ಪಮಟ್ಟಿಗಾದರು ಕೆಲಸ ಮಾಡ್ತಿದ್ದಾರೆ. ಆದ್ರೆ ಇಲ್ಲೊಬ್ಬ ಕಿಲಾಡಿ ಇವೆಲ್ಲಾ ಮಾಹಿತಿ ಪಡೆಯುವ ಹೊರತಾಗಿ ನೇರವಾಗಿ ಮಹಿಳಾ ತಹಶೀಲ್ದಾರ್ ವೊಬ್ಬರ ವೈಯಕ್ತಿಯ ಜೀವನಕ್ಕೆ ಕೈ ಹಾಕಿ ಇದೀಗ ಜೈಲು ಪಾಲಾಗಿದ್ದಾನೆ.
ಹೌದು, ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮಂಡಿಕಲ್ ಗ್ರಾಮದ ನಾಗರಾಜ್ ಎಂಬುವ ಆರ್‌ಟಿಐ ಕಾರ್ಯಕರ್ತ ಈ ರೀತಿಯ ಕೆಲಸ ಮಾಡಿದ್ದು, ಮಹಿಳಾ ತಹಸೀಲ್ದಾರ್ ವೊಬ್ಬರ ವೈಯಕ್ತಿಕ ವಿಚಾರಗಳ ಕುರಿತು ಆರ್‌ಟಿಐನಲ್ಲಿ ಮಾಹಿತಿ ಕೇಳಿ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.
ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು ಹತ್ಯೆಗೆ ಫ್ರೀಡಂ ಕಮ್ಯೂನಿಟಿ ಹಾಲಲ್ಲಿ ಸ್ಕೆಚ್? ಟ್ರಸ್ಟಿ ಅರೆಸ್ಟ್
ಇನ್ನು ತಹಶಿಲ್ದಾರ್ ಆಗಿರುವ ಮಹಿಳೆಯ ವೈಯಕ್ತಿಕ ವಿಚಾರಗಳನ್ನು ಕೇಳುವ ಭರದಲ್ಲಿ ತಹಶಿಲ್ದಾರ್ ಅವರಿಗೆ ಇದುವರೆಗೂ ಎಷ್ಟು ಬಾರಿ ಮದುವೆಯಾಗಿದೆ, ಯಾರ ಜೊತೆ ವಿಚ್ಛೇದನೆ ಆಗಿದೆ, ಇದೀಗ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ, ಎಲ್ಲಿ ಮದುವೆಯಾಗಿದೆ, ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರಗಳನ್ನು ಆರ್‌ಟಿಐ ಕಾರ್ಯಕರ್ತ ಮಂಡಿಕಲ್ ನಾಗರಾಜ್ ಕೇಳಿರುವ ಅರ್ಜಿಯ ಪತ್ರ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ನಾಗರಾಜ್ ಹಾಕಿರುವ ಅರ್ಜಿಯಲ್ಲಿ ಗಂಡಂದಿರು ಬಿಡಲು ಕಾರಣ ಏನು?, ಯಾವ ಇಲಾಖೆಯಲ್ಲಿ ಇವರೆಲ್ಲಾ ಕೆಲಸ ಮಾಡುತ್ತಿದ್ದಾರೆ. ಗಂಡಂದಿರಿಗೆ ಸಹ ವಿಚ್ಛೇದನ ಆಗಿದೆಯಾ. ಆಗಿದ್ದರೆ ಯಾವ ಕಾರಣಕ್ಕೆ ಎನ್ನುವ ಮಾಹಿತಿಯನ್ನು ಸಹ ಕೇಳಲಾಗಿದೆ. ಇನ್ನು ಈ ಕುರಿತು ಮನನೊಂದು ಆರ್‌ಟಿಐ ಕಾರ್ಯಕರ್ತನ ವಿರುದ್ಧ ಮಹಿಳಾ ತಹಶಿಲ್ದಾರ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
