ಕಲಬುರಗಿ(ಸೆ.09): ದಾರಿಹೋಕನ ಮೇಲೆ ರೌಡಿಶೀಟರ್‌ನೋರ್ವ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಹಳೆ ಜೇವರ್ಗಿ ರಸ್ತೆಯ ಪಂಚಶೀಲ ನಗರದಲ್ಲಿ ನಡೆದಿದೆ.

ಲಕ್ಷ್ಮಿ ನಗರದ ನಿವಾಸಿ ವಿಶಾಲ್‌ ಗುತ್ತೆದಾರ ಹಲ್ಲೆಗೆ ಒಳಗಾದ ವ್ಯಕ್ತಿ. ರೌಡಿಶೀಟರ್‌ ಛೋಟ್ಯಾ ಹಲ್ಲೆ ಮಾಡಿದ ವ್ಯಕ್ತಿ. ವಿಶಾಲ್‌ ಕಿರಾಣಿ ಖರೀದಿಗೆಂದು ನಡೆದುಕೊಂಡು ಹೊರಟಿದ್ದಾಗ ಏಕಾಏಕಿ ದಾಳಿ ನಡೆಸಿದ ಛೋಟ್ಯಾ, ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ.

ಗ್ಯಾಂಗ್‌ರೇಪ್‌ ಮತ್ತು ಕೊಲೆ ಆರೋಪಿಗಳು ಠಾಣೆಯಿಂದ ಎಸ್ಕೇಪ್!

ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಂಚಶೀಲ ನಗರದ ಛೋಟ್ಯಾ ರೌಡಿಶೀಟರ್‌ ಪಟ್ಟಿಯಲ್ಲಿದ್ದಾನೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆತ, ಈ ಹಿಂದೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಿದ್ದ. ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೌಡಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.