Asianet Suvarna News Asianet Suvarna News

ಹಾಲು ಹಂಚುವ ವಿಷಯಕ್ಕೆ ದ್ವೇಷ: ಮಾರಕಾಸ್ತ್ರದಿಂದ ಕೊಚ್ಚಿ ರೌಡಿ ಕೊಲೆ

ಕೋಲಾರ ಗಡಿಯಲ್ಲಿ ಐವರನ್ನು ವಶಕ್ಕೆ ಪಡೆದ ಪೊಲೀಸರು, ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 

Rowdy Killed in Bengaluru grg
Author
First Published Sep 14, 2022, 7:17 AM IST

ಬೆಂಗಳೂರು(ಸೆ.14):  ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಅಮಾನುಷ ಘಟನೆ ಶೇಷಾದ್ರಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿವಿ ಗಿರಿ ಬಡಾವಣೆಯ ನಿವಾಸಿ ಗಣೇಶ್‌(32) ಕೊಲೆಯಾದವರು. ಈ ಘಟನೆ ಸಂಬಂಧ ಶರತ್‌, ಅಜಿತ್‌ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದಲ್ಲಿ ಗುಜರಿ ಅಂಗಡಿ ಇರಿಸಿಕೊಂಡಿರುವ ಗಣೇಶ್‌, ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಮಗನನ್ನು ಶಾಲೆಗೆ ಬಿಟ್ಟು ಮನೆಗೆ ವಾಪಸಾಗುವಾಗ ಮಾರ್ಗ ಮಧ್ಯೆ ನಟರಾಜ ಥಿಯೇಟರ್‌ ಬಳಿ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದ್ವಿಚಕ್ರ ವಾಹನ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಗಣೇಶ್‌ ಮೇಲೆ ಮನಸೋ ಇಚ್ಛೆ ಹಲ್ಲೆಗೈದು ಪರಾರಿಯಾಗಿದ್ದರು.

ಮೋಜು ಮಸ್ತಿಗಾಗಿ ಸಾಲ: ಸಾಲ ತೀರಿಸಲು ಮಹಿಳೆ ಹತ್ಯೆ: ಬಾಲಪರಾಧಿ ಸೇರಿ ಮೂವರ ಬಂಧನ

ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದ ಗಣೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿ ಗಣೇಶ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ನಂತರ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು. ಅಲ್ಲಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳ ಬೆನ್ನಟ್ಟಿದ ಪೊಲೀಸರು, ಕೋಲಾರ ಗಡಿಯಲ್ಲಿ ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಧಾನ ನಿರಾಕರಿಸಿದ್ದಕ್ಕೆ ಕೊಲೆ:

ಕೊಲೆಯಾದ ಗಣೇಶ್‌ ಮತ್ತು ಆರೋಪಿ ಶರತ್‌ ಗುಂಪುಗಳ ನಡುವೆ 2020ರ ಕೊರೋನಾ ಸಂದರ್ಭದಲ್ಲಿ ಉಚಿತ ಹಾಲು ಹಂಚುವ ವಿಚಾರವಾಗಿ ಗಲಾಟೆಯಾಗಿತ್ತು. ಈ ವೇಳೆ ಎರಡೂ ಗುಂಪುಗಳ ನಡುವೆ ಹೊಡೆದಾಟ ನಡೆದು ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪರಸ್ಪರ ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಶರತ್‌ ರಾಜೀ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಗಣೇಶ್‌ಗೆ ಹೇಳಿದ್ದ. ಆದರೆ, ಗಣೇಶ್‌ ರಾಜೀ ಸಂಧಾನಕ್ಕೆ ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶರತ್‌, ಅಜಿತ್‌ ಹಾಗೂ ಸಹಚರರು ಗಣೇಶ್‌ನನ್ನು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios