Rowdy Arrested: ಬೆಂಗಳೂರು ಪೊಲೀಸರಿಗೇ ಸವಾಲು ಹಾಕಿದ್ದವನಿಗೆ ಗುಂಡೇಟಿನ ಉತ್ತರ!
*ತನ್ನನ್ನು ಬಂಧಿಸದ ಸಿಸಿಬಿ, ದಕ್ಷಿಣ ವಿಭಾಗದ ಪೊಲೀಸರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದ
*ಬಂಧಿಸುವಾಗ ತಪ್ಪಿಸಿಕೊಳ್ಳಲು ಯತ್ನ: ಬಂದೂಕಿನ ಮೂಲಕ ಸೋಮವಾರ ತಿರುಗೇಟು
ಬೆಂಗಳೂರು (ಜ. 18): ತನ್ನ ಹುಟ್ಟು ಹಬ್ಬದ ದಿನ ಇನ್‌ಸ್ಟಾಗ್ರಾಂನಲ್ಲಿ (Instagram) ಲೈವ್ ಮಾಡಿ ತನ್ನನ್ನು ಬಂಧಿಸಲಾಗದ ಸಿಸಿಬಿ ಹಾಗೂ ದಕ್ಷಿಣ ವಿಭಾಗದ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಸವಾಲೆಸೆದಿದ್ದ ಕುಖ್ಯಾತ ರೌಡಿಯೊಬ್ಬನಿಗೆ ಹನುಮಂತ ನಗರ ಠಾಣೆ ಪೊಲೀಸರು (Hanumanth Nagar police) ಬಂದೂಕಿನ ಮೂಲಕ ಸೋಮವಾರ ತಿರುಗೇಟು ನೀಡಿದ್ದಾರೆ. ಹನುಮಂತ ನಗರದ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್‌ಗೆ ಗುಂಡೇಟು ಬಿದ್ದಿದೆ. ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಕೋಣನಕುಂಟೆಯ ನಾರಾಯಣ ನಗರದ ಸಮೀಪ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಆ ವೇಳೆ ತನಿಖಾ ತಂಡದ ವಿರುದ್ಧ ತಿರುಗಿ ಬಿದ್ದು ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಹಂತದಲ್ಲಿ ಆರೋಪಿ ಬಲಗಾಲಿಗೆ ಸಬ್ ಇನ್‌ಸ್ಪೆಕ್ಟರ್ ಬಸವರಾಜು ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ನಿಂಗಪ್ಪ ಅವರಿಗೂ ಪೆಟ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Robbery Case: ಅಂಗಡಿ, ಫೈನಾನ್ಸ್ ನೌಕರರ ಸುಲಿಗೆ ಮಾಡುತ್ತಿದ್ದ ಚೋಟಾ ಟೈಗರ್ ಬಂಧನ
ಬೇಕರಿ ರಘು ಕೊಲೆ ಮಾಡುವುದಾಗಿ ಶಪಥ: ರಾಹುಲ್ ಅಲಿಯಾಸ್ ಸ್ಟಾರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಕೆಂಪೇಗೌಡ ನಗರ, ಹನುಮಂತ ನಗರ, ಸುಬ್ರಹ್ಮಣ್ಯಪುರ, ಚಾಮರಾಜಪೇಟೆ, ಬ್ಯಾಟರಾಯನಪುರ ಹಾಗೂ ಸಿದ್ದಾಪುರ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಮಾದಕ ವಸ್ತು ಮಾರಾಟ ದಂಧೆ ಸೇರಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಶಿವಾಜಿ ನಗರದ ರೌಡಿ ಕುಳ್ಳ ರಿಜ್ವಾನ್ ಸಹಚರನಾಗಿದ್ದ ಆತ, ದಕ್ಷಿಣ ವಿಭಾಗದ ಕಡೆ ವಿಪರೀತ ಹಾವಳಿ ಶುರು ಮಾಡಿದ್ದ. ಹನುಮಂತ ನಗರ ಠಾಣೆಯಲ್ಲಿ ಸ್ಟಾರ್ ಮೇಲೆ ರೌಡಿಪಟ್ಟಿತೆರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Rowdy Shot in Bengaluru: ಎಸ್‌ಐಗೆ ಚಾಕು ಇರಿದಿದ್ದ ರೌಡಿಗೆ ಗುಂಡೇಟಿನ ಪಾಟ!
ಬನಶಂಕರಿಯ ಕುಖ್ಯಾತ ಪಾತಕಿ ರಘು ಅಲಿಯಾಸ್ ಬೇಕರಿ ರಘು ವಿರೋಧಿಯಾಗಿದ್ದ ಸ್ಟಾರ್, ಸ್ಥಳೀಯವಾಗಿ ಹವಾ ಸೃಷ್ಟಿಸಲು ರಘು ಕೊಲೆಗೆ ಸಂಚು ರೂಪಿಸಿದ್ದ. ಅಂತೆಯೇ ಸ್ಟಾರ್‌ನಿಂದ ಮೂರು ಬಾರಿ ಬೇಕರಿ ರಘು ಕೊಲೆ ಯತ್ನ ವಿಫಲವಾಗಿತ್ತು. ಈ ಚಟುವಟಿಕೆ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ಸಿಸಿಬಿಯ ಸಂಘಟಿತ ಅಪರಾಧ ದಳವು (ರೌಡಿ ನಿಗ್ರಹ) ಹುಡುಕಾಟ ನಡೆಸಿತ್ತು. ಇತ್ತ ಹಳೇ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಗೈರಾಗಿದ್ದ ಸ್ಟಾರ್ ರಾಹುಲ್ ವಿರುದ್ಧ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಹೀಗಾಗಿ ಆತನಿಗೆ ದಕ್ಷಿಣ ವಿಭಾಗದ ಪೊಲೀಸರು ಸಹ ತಲಾಶ್ ಮಾಡುತ್ತಿದ್ದರು. ಆದರೆ ಯಾರ ಕೈಗೂ ಸಿಗದೆ ಸ್ಟಾರ್ ಮೆರೆಯುತ್ತಿದ್ದ ಎಂದು ತಿಳಿದು ಬಂದಿದೆ.
ಲೈವ್ ಮಾಡಿ ‘ಸ್ಟಾರ್’ಕಳೆದುಕೊಂಡ ರೌಡಿ: ತನ್ನ ಬೆನ್ನಹತ್ತಿದ್ದ ಪೊಲೀಸರ ಬಗ್ಗೆ ಸಿಟ್ಟಿಗೆದ್ದಿದ್ದ ಸ್ಟಾರ್ ರಾಹುಲ್, ಕೆಲ ದಿನಗಳ ಹಿಂದೆ ತನ್ನ ಸಹಚರರ ಜತೆ ಹುಟ್ಟುಹಬ್ಬದ ಆಚರಣೆ ವೇಳೆ ಕುಡಿದ ಮತ್ತಿನಲ್ಲಿ ಇನ್‌ಸ್ಟಾಗ್ರಾಂ ಲೈವ್ ಮಾಡಿದ್ದ. ಆಗ ಸಿಸಿಬಿ ಹಾಗೂ ದಕ್ಷಿಣ ವಿಭಾಗದ ಪೊಲೀಸರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತಾನು ಬೇಕರಿ ರಘು ಕೊಲೆ ಮಾಡಿಯೇ ಬಂದು ಶರಣಾಗುವುದಾಗಿ ಸವಾಲೆಸೆದಿದ್ದ. ಈ ವಿಡಿಯೋ ನೋಡಿದ್ದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರು, ಸ್ಟಾರ್‌ನನ್ನು 24 ತಾಸಿನೊಳಗೆ ಬಂಧಿಸುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಹನುಮಂತರ ನಗರದ ಪಿಎಸ್‌ಐ ಬಸವರಾಜು ನೇತೃತ್ವದ ತಂಡಕ್ಕೆ, ಕೋಣನಕುಂಟೆ ಸಮೀಪದ ನಾರಾಯಣ ನಗರದಲ್ಲಿ ಸ್ಟಾರ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಆಗ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಆರೋಪಿ ಮುಂದಾಗಿದ್ದಾನೆ. ಇದರಿಂದ ಎಚ್ಚೆತ್ತ ಪಿಎಸ್‌ಐ, ಆರೋಪಿ ಬಲಗಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.