*  ನಕಲಿ ಐಡಿ ಕಾರ್ಡ್‌ ತೋರಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆ ಮೇಲೆ ದಾಳಿ*  ಪರಿಶೀಲನೆ ನೆಪದಲ್ಲಿ 3.5 ಲಕ್ಷ ರು. ನಗದು, ಪಿಸ್ತೂಲ್‌ ದೋಚಿ ಪರಾರಿ*  ಅನುಮಾನಗೊಂಡ ಉದ್ಯಮಿಯಿಂದ ಸಂಜಯ್‌ನಗರ ಠಾಣೆಗೆ ದೂರು 

ಬೆಂಗಳೂರು(ಜ.29): ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳ ಸೋಗಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಗೆ ನುಗ್ಗಿ 3.5 ಲಕ್ಷ ರು. ನಗದು ಹಾಗೂ ಪಿಸ್ತೂಲ್‌ ದೋಚಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಸಂಜಯನಗರ ನಿವಾಸಿ ಎಂ.ಮಂಜುನಾಥ(35), ಕಾವಲ್‌ ಬೈರಸಂದ್ರದ ಮಹಮ್ಮದ್‌ ಶೋಯೆಬ್‌ ರಬ್ಬಾನಿ ಅಲಿಯಾಸ್‌ ಫಕರ್‌ ಅಲಿ(32), ಸಹಕಾರನಗರದ ಟಿ.ಸಿ.ಪ್ರಶಾಂತ್‌ಕುಮಾರ್‌(40), ಯಶವಂತಪುರದ ವೈ.ಸಿ.ದುರ್ಗೇಶ(30) ಹಾಗೂ ಆರ್‌.ಟಿ.ನಗರದ ಕೆ.ಕುಮಾರ್‌(40) ಬಂಧಿತರು(Accused). ಆರೋಪಿಗಳಿಂದ 1.7 ಲಕ್ಷ ರು. ನಗದು, 2 ಪಿಸ್ತೂಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Woman Murder: ಬಡ್ಡಿಗೆ ದುಡ್ಡು ಕೊಟ್ಟಿದ್ದಾಕೆಯ ಕೊಂದು ಒಡವೆ ಲೂಟಿ

ಏನಿದು ಪ್ರಕರಣ?

ಆರೋಪಿಗಳು ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಜಯನಗರದ ಕ್ಯಾಡ್‌ಮೆಟ್‌ ಲೇಔಟ್‌ನ ನಿವಾಸಿ ಆರ್‌.ಚೇತನ್‌ ಎಂಬುವವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ದಾಳಿ(Raid) ಮಾಡಿದ್ದರು. ಮನೆ ಪರಿಶೀಲಿಸುವ ನೆಪದಲ್ಲಿ ವಾರ್ಡ್‌ರೂಬ್‌ನ ಲಾಕರ್‌ನಲ್ಲಿದ್ದ ನಗದು ಹಾಗೂ ಒಂದು ಪಿಸ್ತೂಲ್‌ ದರೋಡೆ(Robbery) ಮಾಡಿ ಪರಾರಿಯಾಗಿದ್ದರು. ಆರಂಭದಲ್ಲಿ ಐಟಿ ಅಧಿಕಾರಿಗಳೇ ಇರಬೇಕು ಎಂದು ನಂಬಿದ್ದ ಚೇತನ್‌ಗೆ ಮಧ್ಯಾಹ್ನದ ವೇಳೆಗೆ ಅನುಮಾನ ಬಂದಿದೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಂಜಯನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಜೆ.ಬಾಲರಾಜ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಿಂಗ್‌ಪಿನ್‌ ಮಂಜುನಾಥ್‌:

ಸಂಜಯನಗರ ನಿವಾಸಿಯಾದ ಆರೋಪಿ ಮಂಜುನಾಥ್‌ ವಾರಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿದ್ದು, ರಮೇಶ್‌ ಅವರ ರಿಯಲ್‌ ಎಸ್ಟೇಟ್‌(Real Estate) ವ್ಯವಹಾರದ ಬಗ್ಗೆ ತಿಳಿದಿದ್ದ. ರಮೇಶ್‌ಗೆ ಬಾಡಿಗೆ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಬರುವುದರ ಬಗ್ಗೆ ತಿಳಿದುಕೊಂಡಿದ್ದ. ಮನೆ ಬಾಡಿಗೆಗೆ ಕೊಡಿಸುವ ಬ್ರೋಕರ್‌ ಆಗಿರುವ ಕುಮಾರ್‌ಗೆ ರಿಯಲ್‌ ಎಸ್ಟೇಟ್‌ ಉದ್ಯಮಿ ರಮೇಶ್‌ ಬಗ್ಗೆ ಮಾಹಿತಿ ನೀಡಿದ್ದ. ಅಂತೆಯೇ ರಮೇಶ್‌ ಮನೆ ಹಾಗೂ ಮನೆಯಲ್ಲಿ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದ. ಅದರಂತೆ ರಮೇಶ್‌ ಮನೆ ಬಗ್ಗೆ ಮಾಹಿತಿ ಸಂಗ್ರಹಿಸಿ, ಉಳಿದ ಮೂವರು ಆರೋಪಿಗಳೊಂದಿಗೆ ಸೇರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ರಮೇಶ್‌ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಐಡಿ ತೋರಿಸಿ ದಾಳಿ:

ಪೂರ್ವ ನಿರ್ಧರಿತ ಸಂಚಿನಂತೆ ಆರೋಪಿಗಳಾದ ಮಹಮ್ಮದ್‌ ಶೋಯೆಬ್‌ ರಬ್ಬಾನಿ ಮತ್ತು ದುರ್ಗೇಶ್‌ ಐಟಿ ಅಧಿಕಾರಿಗಳ ಸೋಗಿನಲ್ಲಿ ಜ.23ರಂದು ರಮೇಶ್‌ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ ಚೇತನ್‌, ಅವರ ಅಮ್ಮ, ತಂಗಿ, ಅಜ್ಜಿ ಇದ್ದರು. ಆಗ ತಾವು ಐಟಿ ಅಧಿಕಾರಿಗಳು ಎಂದು ನಕಲಿ ಗುರುತಿನ ಚೀಟಿ ತೋರಿಸಿದ್ದರು. ತಪಾಸಣೆ ಮಾಡಬೇಕೆಂದು ಮನೆಯನ್ನೆಲ್ಲಾ ತಡಕಾಡಿ ಕಡೆಗೆ ರೂಮ್‌ನ ವಾರ್ಡ್‌ರೂಬ್‌ನ ಲಾಕರ್‌ನಲ್ಲಿದ್ದ ನಗದು ಹಾಗೂ ಪಿಸ್ತೂಲ್‌ ತೆಗೆದುಕೊಂಡಿದ್ದರು. ವಿಚಾರಣೆಗೆ ಕರೆದಾಗ ಬರಬೇಕು ಎಂದು ಚೇತನ್‌ರನ್ನು ಹೆದರಿಸಿ ಬೆಳಗ್ಗೆ 9.45ಕ್ಕೆ ಮನೆಯಿಂದ ಪರಾರಿಯಾಗಿದ್ದರು. ಈ ವೇಳೆ ಉಳಿದ ಮೂವರು ಆರೋಪಿಗಳು ರಮೇಶ್‌ ಮನೆ ಹೊರಗೆ ನಿಂತು ಸಾರ್ವಜನಿಕರ ಚಲನವನಲಗಳ ಬಗ್ಗೆ ನಿಗಾವಹಿಸಿದ್ದರು. ರಬ್ಬಾನಿ ಮತ್ತು ದುರ್ಗೇಶ್‌ ಮನೆಯಿಂದ ಹೊರಬರುತ್ತಿದ್ದಂತೆ ಐವರು ಕಾರಿನಲ್ಲಿ ಪರಾರಿಯಾಗಿದ್ದರು.

ಆಂಧ್ರದಲ್ಲಿ ದರೋಡೆಗೆ ಸ್ಕೆಚ್‌!

ಐಟಿ ಅಧಿಕಾರಿಗಳ ಸೋಗಿನಲ್ಲಿ ರಮೇಶ್‌ ಮನೆ ದರೋಡೆ ಮಾಡಿದ ಬಳಿಕ ಆರೋಪಿಗಳು ಆಂಧ್ರಪ್ರದೇಶದ(Andhra Pradesh) ವಿಜಯವಾಡಕ್ಕೆ ತೆರಳಿದ್ದರು. ಅಲ್ಲಿಯೂ ಶ್ರೀಮಂತರ ಮನೆಗಳನ್ನು ಗುರುತಿಸಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಸ್ಕೆಚ್‌ ಹಾಕಿದ್ದರು. ಈ ನಡುವೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಮನೆಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಬಳಿಕ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ತನಿಖೆಗೆ ಇಳಿದಾಗ ಆರೋಪಿಗಳು ವಿಜಯವಾಡದಲ್ಲಿರುವ ಸುಳಿವು ಸಿಕ್ಕಿತು. ಅದರಂತೆ ಒಂದು ತಂಡ ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.

Bagalkot: ತೋಟದ ಮನೆಯಲ್ಲಿ 500 ಕೆಜಿ ಸ್ಫೋಟಕ ವಸ್ತುಗಳು ಪತ್ತೆ..!

ಈ ಹಿಂದೆ ಎರಡು ಕಡೆ ದರೋಡೆ?

ಆರೋಪಿಗಳು ಗುಂಪು ಕಟ್ಟಿಕೊಂಡು ಇತ್ತೀಚೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ನಗರದ ಎರಡು ಮನೆಗಳಲ್ಲಿ ದರೋಡೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಆದರೆ, ಆ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಈ ಮಾರ್ಗ ಆರಸಿಕೊಂಡಿದ್ದರು ಎಂಬುದು ವಿಚಾರಣೆಯಿಂದ(Investigation) ತಿಳಿದು ಬಂದಿದೆ.

ಪಿಸ್ತೂಲ್‌ಗಳು ಎಫ್‌ಎಸ್‌ಎಲ್‌ಗೆ ರವಾನೆ

ಪ್ರಕರಣದ ಕಿಂಗ್‌ ಪಿನ್‌ ಮಂಜುನಾಥ್‌ ಬಳಿ ಪಿಸ್ತೂಲ್‌ ಸಿಕ್ಕಿದೆ. ಈ ಪಿಸ್ತೂಲ್‌ಗೆ ಯಾವುದೇ ಪರವಾನಗಿ ಇಲ್ಲ. ಇದು ಏರ್‌ಗನ್‌ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿದ್ದಾನೆ. ಈ ಬಗ್ಗೆ ದೃಢಪಡಿಸಿಕೊಳ್ಳಲು ಪಿಸ್ತೂಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ರಮೇಶ್‌ ಮನೆಯಿಂದ ಕಳುವಾಗಿದ್ದ ಪಿಸ್ತೂಲ್‌ಗೆ ಪರವಾನಗಿ ಇದೆ ಎಂದು ದೂರುದಾರ ಚೇತನ್‌ ಹೇಳಿದ್ದಾರೆ. ಈ ಬಗ್ಗೆ ದಾಖಲೆ ಹಾಜರುಪಡಿಸಲು ಸೂಚಿಸಿದ್ದು, ಆ ಪಿಸ್ತೂಲ್‌ ಅನ್ನು ಎಫ್‌ಎಸ್‌ಎಲ್‌ಗೆ(FSL) ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.