ಕಾರು ಮಾಲೀಕ ಲಕ್ಷ್ಮಿ ನಾರಾಯಣನ ಧಮ್ಕಿಯಿಂದ ಭಯಗೊಂಡು ನೊಂದ ಅಪಾರ್ಟ್‌ಮೆಂಟ್ ನಿವಾಸಿಗಳು ಇದೀಗ ಆರ್.ಟಿ. ನಗರ ಪೊಲೀಸರಿಗೆ ದೂರು ನೀಡಿದ್ದಾರೆ. 

ವರದಿ : ಚೇತನ್ ಮಹಾದೇವ, ಬೆಂಗಳೂರು 

ಬೆಂಗಳೂರು (ಜೂ. 23): ಸಾಮಾನ್ಯವಾಗಿ ಯಾರಾದರು ನಮಗೆ ನಷ್ಟ ಉಂಟು ಮಾಡಿದರೆ ಅಥವಾ ಮಾನ ಹಾನಿ ಮಾಡಿದರೆ ನ್ಯಾಯಾಲಯದಲ್ಲಿ ಪರಿಹಾರ ಕೇಳಿ ಕೇಸ್ ದಾಖಲಿಸುತ್ತೇವೆ. ಹಾಗೆಯೇ ಯಾರಾದರೂ ನಮ್ಮ ವಾಹನಗಳಿಗೆ ಡ್ಯಾಮೇಜ್ ಮಾಡಿದ್ರೇ ಇನ್ಶೂರೆನ್ಸ್ ಕ್ಲೈಮ್‌ ಮಾಡಿ ಪರಿಹಾರ ಪಡೆಯತ್ತೇವೆ. ಮೋಸ ವಂಚನೆ ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ನೀಡುತ್ತೇವೆ. ಆದರೆ ಇಲ್ಲೋಬ್ಬರು ಕಾರಿನ ವೈರನ್ನು ಇಲಿ ಕಚ್ಚಿದ್ದಕ್ಕೆ (Rat Bite) ಪರಿಹಾರ ಕೇಳಿದ್ದಾರೆ. 

ಯಸ್! ಆರ್ ಟಿ ನಗರದಲ್ಲಿರುವ ಕಂಫರ್ಟ್ ಎನ್‌ಕ್ಲೇವ್ ಅಪಾರ್ಟ್‌ಮೆಂಟಿನಲ್ಲಿ ಲಕ್ಷ್ಮಿ ನಾರಾಯಣ್ ಎಂಬುವವರು ಸಂಬಂಧಿಕರು ವಾಸ ಮಾಡುತ್ತಿದ್ದಾರೆ. ಹೇಗಿದ್ರು ಸಂಬಂಧಿಕರೇ ಅಲ್ವಾ ಎಂದು ಲಕ್ಷ್ಮಿ ನಾರಾಯಣ್ ತಮ್ಮ ಇನ್ನೋವಾ ( Innova) ಕಾರನ್ನು ಇದೇ ಅಪಾರ್ಟ್‌ಮೆಂಟಿನಲ್ಲಿ ಪಾರ್ಕ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಇಲಿಯೊಂದು ಇವರ ಕಾರಿನ ವೈಯರ್‌ಗಳನ್ನೆಲ್ಲಾ ಕಚ್ಚಿ ಬಿಸಾಡಿದೆ. 

ಬೆಳಗ್ಗೆ ಲಕ್ಷ್ಮಿ ನಾರಯಣ್ ಬಂದು ನೋಡಿದಾಗ ತಮ್ಮ ಇನ್ನೋವಾ ಕಾರಿನ ಬ್ರೇಕ್ ವೈಯರ್ ಸೇರಿದಂತೆ ಇತರ ವೈಯರ್‌ಗಳನ್ನೆಲ್ಲಾ ಇಲಿ ಕಚ್ಚಿದೆ. ಇದರಿಂದ ಕೋಪಗೊಂಡ ಲಕ್ಷ್ಮಿ ನಾರಯಣ್ ಅಪಾರ್ಟ್‌ಮೆಂಟ್ ಅವರ ಬಳಿ ನನ್ನ ಕಾರಿನ ವೈಯರ್ ಇಲಿ ಹಾಳು ಮಾಡಿರೋದಕ್ಕೆ ನೀವೇ ಕಾರಣ ಎಂದು ಐದು ಲಕ್ಷ ಪರಿಹಾರ (Compensation) ಕೇಳುತ್ತಿದ್ದಾರೆ. 

ಇದನ್ನೂ ಓದಿ:ಬೆಂಗಳೂರಲ್ಲಿ ಬೀಡು ಬಿಟ್ಟಿದೆ ಮಂಕಿ ಗ್ಯಾಂಗ್: ಐಶಾರಾಮಿ ಅಪಾರ್ಟ್‌ಮೆಂಟ್‌ಗಳೇ ಟಾರ್ಗೇಟ್

"ನನಗಾಗಿರುವ ನಷ್ಟಕ್ಕೆ ನೀವು ಪರಿಹಾರ ಕೊಡಲಿಲ್ಲವೆಂದರೆ, ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೇಳಿ", ಪ್ರತಿದಿನ ತ್ಯಾಜ್ಯ ವಸ್ತುಗಳನ್ನೆಲ್ಲಾ ಅಪಾರ್ಟ್‌ಮೆಂಟ್ ಬಳಿ ತಂದು ಲಕ್ಷ್ಮಿ ನಾರಯಣ್ ಸುರಿಯುತ್ತಿದ್ದಾರಂತೆ. ಅಷ್ಟೇ ಅಲ್ಲದೆ ನನಗೆ ಐದು ಲಕ್ಷ ಪರಿಹಾರ ಕೊಡಿ ಎಂದು ಧಮ್ಕಿ ಕೂಡ ಹಾಕ್ತಿದ್ದಾರೆ ಎಂದು ಆರೋಪಿಸಲಾಗಿದೆ. 

ಕಾರು ಮಾಲೀಕ ಲಕ್ಷ್ಮಿ ನಾರಾಯಣನ ಧಮ್ಕಿಯಿಂದ ಭಯಗೊಂಡು ನೊಂದ ಅಪಾರ್ಟ್‌ಮೆಂಟ್ ನಿವಾಸಿಗಳು ಇದೀಗ ಆರ್.ಟಿ. ನಗರ ಪೊಲೀಸರಿಗೆ (R T Nagar Police) ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ಧಾರೆ.