ರೆಸ್ಟೋರೆಂಟ್ ಮಾಲೀಕನ ಕಾರು ಅಡ್ಡಗಟ್ಟಿ ದರೋಡೆ: 3 ಲಕ್ಷ ಕಿತ್ಕೊಂಡು 50 ಲಕ್ಷಕ್ಕೆ ಡಿಮ್ಯಾಂಡ್
Ramanagara News: ತಮ್ಮ ಕೆಲಸ ಮುಗಿಸಿ, ಅಳಿಯನ ಜೊತೆ ಮನೆಗೆ ತೆರಳುತ್ತಿದ್ದ ಬಾರ್ ಮಾಲೀಕನ ಕಾರನ್ನ ಅಡ್ಡಗಟ್ಟಿ ಆತನ ಬಳಿ ಇದ್ದ ಹಣವನ್ನ ಕಿತ್ತುಕೊಂಡಿದ್ದಲ್ಲದೇ, ಐವತ್ತು ಲಕ್ಷ ಕೊಡದಿದ್ದರೆ ಮುಗಿಸುವ ಬೆದರಿಕೆ ಕೂಡ ಹಾಕಿದ್ದಾರೆ.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಸೆ. 09): ಆತ ಬಾರ್ ಅಂಡ್ ರೆಸ್ಟೋರೆಂಟ್‌ನ ಮಾಲೀಕ. ಪ್ರತಿನಿತ್ಯ ವ್ಯಾಪಾರ ಮುಗಿಸಿ ರಾತ್ರಿ ವೇಳೆ ಕಾರಿನಲ್ಲಿ ತನ್ನ ಅಳಿಯನ ಜೊತೆ ಬೆಂಗಳೂರಿನ ಮನೆಗೆ ತೆರಳುತ್ತಿದ್ದ. ಅದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ, ಅದೊಂದು ಖತಾರ್ನಕ್ ತಂಡ ಕಾರನ್ನ ಅಡ್ಡಗಟ್ಟಿ ದರೋಡೆ ನಡೆಸಿದೆ. ಅಷ್ಟೇ ಅಲ್ಲ, ಮಾಲೀಕ ಹಾಗೂ ಆತನ ಅಳಿಯನನ್ನ ಕಾರಿನಲ್ಲಿಇಡೀ ರಾತ್ರಿ ಸುತ್ತಾಡಿಸಿ, ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಐವತ್ತು ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದೆ. ಹೌದು ತನ್ನ ಕೆಲಸ ಮುಗಿಸಿ, ಅಳಿಯನ ಜೊತೆ ಮನೆಗೆ ತೆರಳುತ್ತಿದ್ದ ಬಾರ್ ಮಾಲೀಕನ ಕಾರನ್ನ ಅಡ್ಡಗಟ್ಟಿ ಆತನ ಬಳಿ ಇದ್ದ ಹಣವನ್ನ ಕಿತ್ತುಕೊಂಡಿದ್ದಲ್ಲದೇ, ಐವತ್ತು ಲಕ್ಷ ಕೊಡದಿದ್ದರೆ ಮುಗಿಸುವ ಬೆದರಿಕೆ ಕೂಡ ಹಾಕಿದ್ದಾರೆ.
ಅಂದಹಾಗೆ ಬೆಂಗಳೂರು ದಕ್ಷಿಣ ತಾಲೂಕಿನ ರಾವುಗೊಡ್ಲು ಗ್ರಾಮದ ಬಳಿಯ ಬೆಂಗಳೂರು- ಕನಕಪುರ ರಸ್ತೆಯಲ್ಲಿ ಗುರುಮಲ್ಲೇಗೌಡ ಎಂಬುವವರು, ಸೂರ್ಯಸಾಗರ್ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಪ್ರತಿನಿತ್ಯ ಕೆಲಸ ಮುಗಿಸಿ ತಮ್ಮ ಅಳಿಯ ಕೃಷ್ಣಮೂರ್ತಿ ಜೊತೆ ಬೆಂಗಳೂರಿನ ತ್ಯಾಗರಾಜನಗರದಲ್ಲಿರೋ ಮನೆಗೆ ತೆರಳುತ್ತಿದ್ದರು.
ಐವತ್ತು ಲಕ್ಷ ಕೊಡದಿದ್ದರೇ ಕೊಲೆ ಬೆದರಿಕೆ: ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಅದೊಂದು ದುಷ್ಕರ್ಮಿಗಳ ತಂಡ, ಮೊನ್ನೆ ರಾತ್ರಿ 12 ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆಂಗಳೂರು ದಕ್ಷಿಣ ತಾಲೂಕಿನ ಸಾಲುಹುಣಿಸೆ ಬಳಿ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ ಮುಂದಿನಿಂದ ಅಡ್ಡಗಟ್ಟಿ ಮತ್ತೊಂದು ಕಾರಿನಲ್ಲಿ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ಐದು ಜನ ಕಾರಿನ ಬಳಿ ಬಂದು ಚಾಕುವಿನಿಂದ ಬೆದರಿಸಿ ನಂತರ ಗುರುಮಲ್ಲೇಗೌಡ ಕಾರಿನಲ್ಲಿಯೇ ಹತ್ತಿಕೊಂಡು ಬೆದರಿಸಿ, ಚಿನ್ನದ ಸರ ಹಾಗೂ ನಾಲ್ಕು ಲಕ್ಷ ಹಣವನ್ನ ಕಿತ್ತುಕೊಂಡಿದ್ದಾರೆ.
ವೈದ್ಯನ ಮೇಲೆ ಸಿಎಂ ಪುತ್ರಿಯಿಂದ ಹಲ್ಲೆ: ಕ್ಷಮೆಯಾಚಿಸಿದ ಸಿಎಂ: ವೈದ್ಯರಿಂದ ಪ್ರತಿಭಟನೆ
ಇನ್ನು ಗುರುಮಲ್ಲೇಗೌಡರ ಕಾರಿನಲ್ಲಿಯೇ ಅಳಿಯ ಹಾಗೂ ಗುರುಮಲ್ಲೇಗೌಡರಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಮುಖಕ್ಕೆ ಮಾಸ್ಕ್ ಹಾಕಿಸಿ,ಇಡೀ ರಾತ್ರಿ ಹಲವು ಕಡೆ ಸುತ್ತಿದ್ದಾರೆ. ನಿನ್ನ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಐವತ್ತು ಲಕ್ಷ ಕೊಡದಿದ್ದರೇ ನಿನ್ನನ್ನ ಕೊಲೆ ಮಾಡುವುದಾಗಿ ಕೂಡ ಬೆದರಿಸಿದ್ದಾರೆ.
ಕಗ್ಗಲಿಪುರ ಠಾಣೆಯಲ್ಲಿ ದೂರು: ಆನಂತರ ಬೆಳಗಿವ ನಾಲ್ಕು ಗಂಟೆ ಸುಮಾರಿಗೆ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿ ಇಳಿಸಿ ಪರಾರಿಯಾಗಿದ್ದಾರೆ. ಇನ್ನು ಎರಡು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಸಾಕಷ್ಟು ಮಾಹಿತಿ ಪಡೆದು, ಈತನ ವ್ಯಾಪಾರ, ರಾತ್ರಿ ಕೆಲಸ ಮುಗಿಸಿ ಹೋಗುವುದು ಎಲ್ಲವನ್ನ ತಿಳಿದುಕೊಂಡು ರಾತ್ರಿ ವೇಳೆ ಬೆದರಿಸಿದ್ದಾರೆ.
ಈ ಬಗ್ಗೆ ಕಗ್ಗಲಿಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ತಲಾಶ್ ಮುಂದುವರೆಸಿದ್ದಾರೆ. ಬಾರ್ ಮಾಲೀಕನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ. ಈ ಬಗ್ಗೆ ಕಗ್ಗಲಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.