ಬೆಂಗಳೂರು ಠಾಣೆಯಲ್ಲಿ ವ್ಯಕ್ತಿಗೆ ಥರ್ಡ್‌ ಡಿಗ್ರಿ ಟಾರ್ಚರ್‌, ಖಾಸಗಿ ಅಂಗಕ್ಕೆ ವಿದ್ಯುತ್‌ ಶಾಕ್‌ ನೀಡಿದ ಆರೋಪ

Bengaluru police accused of third degree torture: ಬೆಂಗಳೂರು ಪೊಲೀಸರ ಮೇಲೆ ಮೂರನೇ ದರ್ಜೆ ಟಾರ್ಚರ್‌ ನೀಡಿದ ದೂರು ದಾಖಲಾಗಿದ್ದು, ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಮನಸೋ ಇಚ್ಛೆ ಹೊಡೆದು ಖಾಸಗಿ ಭಾಗಗಳಿಗೆ ಕರೆಂಟ್‌ ಶಾಕ್‌ ನೀಡಿದ್ದಾರೆಂದು ಆರೋಪಿಸಲಾಗಿದೆ. 

ramamurthy nagar police accused of third degree torture to an accused

ಬೆಂಗಳೂರು: ಇಲ್ಲಿನ ರಾಮಮೂರ್ತಿನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಕೊಲೆ ಯತ್ನ ಪ್ರರಣವೊಂದರ ಸಂಬಂಧ ವ್ಯಕ್ತಿಯೊಬ್ಬನನ್ನು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡು ದೈಹಿಕವಾಗಿ ಮೂರನೇ ದರ್ಜೆ ಟ್ರೀಟ್‌ಮೆಂಟ್‌ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಜೇಶ್‌ ಎಂಬ ವಿಜಿನಾಪುರ ಏರಿಯಾದ ನಿವಾಸಿ ಫೋನಿನಲ್ಲಿ ಮಾತನಾಡುತ್ತಿದ್ದ ಇದ್ದ ವೇಳೆ ಪೊಲೀಸರು ಬಲವಂತದಿಂದ ವಶಕ್ಕೆ ಪಡೆದಿದ್ದಾರೆ. ಸೆಪ್ಟೆಂಬರ್‌ 4ರಿಂದ 15ರ ವರೆಗೆ ರಾಜೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಅನಧಿಕೃತವಾಗಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬೆಂಗಳೂರು ಮಿರರ್‌ ಪತ್ರಿಕೆಗೆ ಮಾತನಾಡಿರುವ ರಾಜೇಶ್‌, "ನಾನು ಫೋನಿನಲ್ಲಿ ಮಾತನಾಡುತ್ತಿದ್ದೆ. ನನ್ನನ್ನು ಬಲವಂತದಿಂದ ಪೊಲೀಸ್‌ ಠಾಣೆಗೆ ಕರೆತಂದರು.ನಂತರ ನಾನು ಮಾಡದೇ ಇರುವ ಅಪರಾಧವನ್ನು ಒಪ್ಪಿಕೊಳ್ಳುವಂತೆ ನನಗೆ ಥಳಿಸಿದರು. ಕೇವಲ ಲಾಠಿಯಿಂದಷ್ಟೇ ಅಲ್ಲ, ಹಾಕಿ ಸ್ಟಿಕ್‌ಗಳಲ್ಲಿ ಕೂಡ ನನಗೆ ಹೊಡೆದರು. ನನ್ನ ಕೈ ಮತ್ತು ಕಾಲು ಮುರಿದುಹೋಗಿತ್ತು. ನಂತರ ನನ್ನ ಖಾಸಗಿ ಅಂಗಕ್ಕೆ ವಿದ್ಯುತ್‌ ಶಾಕ್‌ ನೀಡಿದರು," ಎಂದು ಹೇಳಿದ್ದಾರೆ. 

ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿರುವ ರಾಜೇಶ್‌, ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಒಟ್ಟೂ ಎಂಟು ಪೊಲೀಸರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ರಾಜೇಶ್‌ ಅವರ ಬೈಕನ್ನು ಕೂಡ ಪೊಲೀಸರ ವಶದಲ್ಲಿದ್ದು, ಅದನ್ನು ಕೊಡಬೇಕಾಗಿಯೂ ದೂರಿನಲ್ಲಿ ಮನವಿ ಮಾಡಿದ್ದಾರೆ. ಜತೆಗೆ ಪೊಲೀಸರಿಂದ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು ಎಂದೂ ಮನವಿ ಮಾಡಿದ್ದಾರೆ. ರಾಜೇಶ್‌ ಕೈ ಮತ್ತು ಕಾಲು ಮುರಿದಾಗ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದ ಪೊಲೀಸರು, ಬೈಕ್‌ ಅಪಘಾತದಲ್ಲಿ ಪೆಟ್ಟಾಗಿದೆ ಎಂದು ಹೇಳು ಎಂದು ಬೆದರಿಸಿದ್ದರು ಎಂದು ರಾಜೇಶ್‌ ಆರೋಪಿಸಿದ್ದಾರೆ. 

ಇದನ್ನೂ ಓದಿ: ಹೋಮ್‌ವರ್ಕ್‌ ಮಾಡದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಬಡಿದು ಸಾಯಿಸಿದ ಶಿಕ್ಷಕ!

"ಆಸ್ಪತ್ರೆಯಿಂದ ಠಾಣೆಗೆ ವಾಪಸ್‌ ಕರೆದುಕೊಂಡ ಬಂದ ನಂತರ ನನಗೆ ಮತ್ತೆ ಹೊಡೆದರು. ಆರೋಪ ಒಪ್ಪಿಕೊಳ್ಳುವಂತೆ ಹೇಳಿದರು," ಎಂದು ರಾಜೇಶ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರದ ಪ್ರತಿಗಳನ್ನು ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತಿತರ ಹಿರಿಯ ಅಧಿಕಾರಿಗಳಿಗೂ ಕಳಿಸಿದ್ದಾರೆ. 
ರಾಜೇಶ್‌ ಸೆಪ್ಟೆಂಬರ್‌ 26ರಂದು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಭೇಟಿ ನೀಡಿದ್ದಾರೆ. ಈ ವೇಳೆ ಆತನ ಖಾಸಗಿ ಅಂಗದ ಮೇಲೆ ವಿದ್ಯುತ್‌ ಶಾಕ್‌ ನೀಡಿದ ಗುರುತು ಮತ್ತು ಬಲ - ಎಡ ತೊಡೆಗಳ ಮೇಲೆ ಹಲ್ಲೆಯ ಗುರುತು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಬೆಂಗಳೂರು ಮಿರರ್‌ಗೆ ಪ್ರತಿಕ್ರಿಯಿಸಿರುವ ರಾಮಮೂರ್ತಿ ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌  ಮೆಲ್ವಿನ್‌ ಫ್ರಾನ್ಸಿಸ್‌, ರಾಜೇಶ್‌ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ವಿಚಾರಣೆಗೆಂದು ಆತನನ್ನು ಪೊಲೀಸ್‌ ಠಾಣೆಗೆ ಕರೆಯಲಾಗಿತ್ತು ಎಂದಿದ್ದಾರೆ. "ಕಾನೂನು ಬಾಹಿರವಾಗಿ ರಾಜೇಶ್‌ನನ್ನು ವಶಕ್ಕೆ ಪಡೆದಿಲ್ಲ. ನೊಟೀಸ್‌ ಜಾರಿಗೊಳಿಸಿಯೇ ಆತನನ್ನು ವಿಚಾರಣೆಗೆ ಕರೆಯಲಾಗಿತ್ತು. ದೈಹಿಕ ಹಿಂಸೆ ನೀಡಿಲ್ಲ. ಹಲವು ಕೃತ್ಯಗಳಲ್ಲಿ ರಾಜೇಶ್‌ ಭಾಗಿಯಾಗಿರುವ ಮಾಹಿತಿಯಿದೆ," ಎಂದಿದ್ದಾರೆ. 

ಆತನ ಕೈ ಮತ್ತು ಕಾಲು ಮುರಿದಿರುವ ಬಗ್ಗೆ ಪ್ರಶ್ನಿಸಿದಾಗ, "ಆತ ಒಬ್ಬ ಮಾದಕ ವ್ಯಸನಿ. ಎಲ್ಲಿ ಹೇಗೆ ಮುರಿದುಕೊಂಡಿದ್ದಾನೆ ಎಂಬುದನ್ನು ಆತನೇ ಹೇಳಬೇಕು. ನಮಗೂ ಅದಕ್ಕೂ ಸಂಬಂಧವಿಲ್ಲ," ಎಂದು ಮೆಲ್ವಿನ್‌ ಫ್ರಾನ್ಸಿಸ್‌ ಹೇಳುತ್ತಾರೆ. ಹನ್ನೆರಡು ದಿನಗಳ ವಿಚಾರಣೆಯ ನಂತರ ಆತನನ್ನು ಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಬಿಎಂಗೆ ಉತ್ತರಿಸಿದ ಅವರು, ವಿಚಾರಣೆ ಇನ್ನೂ ಪೂರ್ಣವಾಗಿಲ್ಲ. ಅಗತ್ಯ ಬಿದ್ದಾಗ ಮತ್ತೆ ಅವರನ್ನು ವಿಚಾರಣೆಗೆ ಕರೆಯಲಾಗುತ್ತದೆ ಎಂದಿದ್ದಾರೆ. 

ಇದನ್ನೂ ಓದಿ: Chhattisgarh Crime: ಕಪ್ಪಗಿದ್ದೀಯ ಎಂದು ಪತಿ ಟೀಕೆ; ಗಂಡನ ಮರ್ಮಾಂಗ ಕತ್ತರಿಸಿ, ಕೊಡಲಿಯಿಂದ ಕೊಂದ ಪತ್ನಿ

ಆದರೆ ಕೆಆರ್‌ ಪುರದ ಸರ್ಕಾರಿ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಇದ್ದಂತೆಯೇ ದೂರದ ವಿಕ್ಟೋರಿಯಾ ಆಸ್ಪತ್ರೆಗೆ ರಾಜೇಶ್‌ನನ್ನು ಕಲರೆದೊಯ್ದಿರುವುದು ಯಾಕೆ ಎಂಬ ಪ್ರಶ್ನೆಯಂತೂ ಕಾಣುತ್ತದೆ. ಸಾಮಾನ್ಯವಾಗಿ ಆಯಾ ಠಾಣಾ ವ್ಯಾಪ್ತಿಗೆ ಹತ್ತಿರ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಆರೋಪಿಗಳನ್ನು ಚಿಕಿತ್ಸೆಗೆ, ಅಥವಾ ಪರೀಕ್ಷೆಗೆ ಕರೆದೊಯ್ಯಲಾಗುತ್ತದೆ. ಈ ಘಟನೆಯಲ್ಲಿ ವಿಕ್ಟೋರಿಯಾಗೆ ಕರೆದುಕೊಂಡು ಹೋಗಿರುವುದೂ ಸಂಶಯಾಸ್ಪದವಾಗಿದೆ. 

Latest Videos
Follow Us:
Download App:
  • android
  • ios