ಮಾತನಾಡದ ವಿಷಯಕ್ಕೆ ಐಷಾರಾಮಿ ಹೋಟೆಲಲ್ಲಿ ಉದ್ಯಮಿ ಮಕ್ಕಳ ಜಗಳ ನಡೆದಿದ್ದು,  ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬಿಯರ್‌ ಬಾಟಲ್‌ನಿಂದ ಹಲ್ಲೆ ಮಾಡಲಾಗಿದೆ. 

ಬೆಂಗಳೂರು (ಜೂ.11): ನಗರದ ಐಷಾರಾಮಿ ಹೋಟೆಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಉದ್ಯಮಿಗಳ ಪುತ್ರರು ಬಡಿದಾಡಿಕೊಂಡಿರುವ ಘಟನೆ ಆರ್‌.ಟಿ. ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರ ನಿವಾಸಿ ದರ್ಶನ್‌ ಗೋವಿಂದರಾಜು(30) ಎಂಬುವವರು ನೀಡಿದ ದೂರಿನ ಮೇರೆಗೆ ವೇದಾಂತ್‌ ದಗ್ಗರ್‌ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶುಕ್ರವಾರ ಸಂಜೆ ಆರ್‌.ಟಿ.ನಗರದ ಫೋರ್‌ ಸೀಜನ್‌ ಹೋಟೆಲ್‌ನಲ್ಲಿ (Four Seasons Hotel ) ಸೂರ್ಯ ಎಂಬುವವರ ಮದುವೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಷ್ಣವಿ ಬಿಲ್ಡರ್ಸ್‌ ಮಾಲಿಕ ಗೋವಿಂದರಾಜು ಪುತ್ರ ದರ್ಶನ್‌ ಹಾಗೂ ವಿಎಆರ್‌ ಬಿಲ್ಡರ್ಸ್‌ ಪುತ್ರ ಸಂಜಯ್‌ ದಗ್ಗರ್‌ ಪುತ್ರ ವೇದಾಂತ್‌ ದಗ್ಗರ್‌ ಬಂದಿದ್ದರು. ಇಬ್ಬರು ಪರಸ್ಪರ ಪರಿಚಿತರು. ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ಎದುರಾದಾಗ ವೇದಾಂತ್‌ ದಗ್ಗರ್‌, ‘ಎಲ್ಲರೂ ನನ್ನನ್ನು ಮಾತನಾಡುತ್ತಾರೆ. ನೀನೇಕೆ ನನ್ನನ್ನು ಮಾತನಾಡಿಸುವುದಿಲ್ಲ’ ಎಂದು ದರ್ಶನ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ‘ನಿನ್ನದು ಅತಿಯಾಗಿದೆ’ ಎಂದು ಬೈದು ಸ್ಥಳದಿಂದ ತೆರಳಿದ್ದ ಎಂದು ಆರೋಪಿಸಲಾಗಿದೆ.

ಮದುವೆಯಾಗಿ ವಿದೇಶಕ್ಕೆ ಹನಿಮೂನ್‌ ಹೋದ ಚೆನ್ನೈ ವೈದ್ಯ ದಂಪತಿ ಫೋಟೋಶೂಟ್

ಶನಿವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಊಟ ಮಾಡಲು ದರ್ಶನ್‌ ಹೋಗುವಾಗ, ವೇದಾಂತ್‌ ದಗ್ಗರ್‌ ಏಕಾಏಕಿ ಬಿಯರ್‌ ಬಾಟಲಿಯಿಂದ ದರ್ಶನ್‌ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಾಯಗೊಂಡು ಕುಸಿದು ಬಿದ್ದ ದರ್ಶನ್‌ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಗಲಾಟೆ ವೇಳೆ ಇಬ್ಬರು ಪಾನಮತ್ತರಾಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಗಾಯಾಳು ದರ್ಶನ್‌ ನೀಡಿದ ದೂರಿನ ಮೇರೆಗೆ ಆರ್‌.ಟಿ.ನಗರ ಠಾಣೆ ಪೊಲೀಸರು ವೇದಾಂತ್‌ ದಗ್ಗರ್‌ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿರಾಡಿ: ಟ್ಯಾಂಕರ್‌ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ