ಕುಡುಕರ ಕಾಟಕ್ಕೆ ಜನರು ಹೈರಾಣ; ರಸ್ತೇಲಿ ಮಹಿಳೆಯರು ಓಡಾಡೋದು ಹೇಗೆ?
ಬೆಳ್ಳಂಬೆಳಗ್ಗೆ ನಶೆ ಏರಿಸಿಕೊಂಡು ರಸ್ತೆಯಲ್ಲಿ ತೂರಾಡುತ್ತಾ ಹೋಗುವ ಕುಡುಕರು. ರಸ್ತೆಯಲ್ಲಿ ಮುಂಜಾನೆ ಓಡಾಡಲು ಕಷ್ಟಪಡುತ್ತಿರುವ ಮಕ್ಕಳು, ಮಹಿಳೆಯರು, ವೃದ್ಧರು.
ಎಂ.ನರಸಿಂಹಮೂರ್ತಿ
ಬೆಂಗಳೂರು ದಕ್ಷಿಣ (ಡಿ.4) : ಬೆಳ್ಳಂಬೆಳಗ್ಗೆ ನಶೆ ಏರಿಸಿಕೊಂಡು ರಸ್ತೆಯಲ್ಲಿ ತೂರಾಡುತ್ತಾ ಹೋಗುವ ಕುಡುಕರು. ರಸ್ತೆಯಲ್ಲಿ ಮುಂಜಾನೆ ಓಡಾಡಲು ಕಷ್ಟಪಡುತ್ತಿರುವ ಮಕ್ಕಳು, ಮಹಿಳೆಯರು, ವೃದ್ಧರು.
ಇದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಣನಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯ ಜಂಬೂಸವಾರಿ ದಿಣ್ಣೆಯಲ್ಲಿ ಕಾಣುವ ದೃಶ್ಯವಾಗಿದೆ. ಇಲ್ಲಿನ ಬಾರ್, ವೈನ್ ಸ್ಟೋರ್‌ಗಳು ಬೆಳಗ್ಗೆ 6ರಿಂದಲೇ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಬಾರ್ ಮತ್ತು ವೈನ್ ಸ್ಟೋರ್‌ಗಳಿಗೆ ಯಾವುದೇ ಸಮಯವಿಲ್ಲ. ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೂ ಮದ್ಯ ಸೇವೆ ನೀಡುತ್ತಿವೆ. ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಮುಂಜಾನೆಯೇ ಬಾರ್, ವೈನ್ ಸ್ಟೋರ್‌ಗಳು ತೆರೆದಿದ್ದರೂ ಅಬಕಾರಿ ಮತ್ತು ಪೋಲಿಸ್ ಇಲಾಖೆ ಗಾಢನಿದ್ರೆಯಲ್ಲಿವೆ ಎಂಬುದು ಸಾರ್ವಜನಿಕರ ಆಕ್ಷೇಪವಾಗಿದೆ.
ಬೆಳಗ್ಗಿನಿಂದಲೇ ಕುಡುಕರ ಹಾವಳಿ ಆರಂಭವಾಗುತ್ತದೆ. ವಾಯುವಿಹಾರ, ಕೆಲಸಕ್ಕೆ ಹಾಗೂ ದೇವಾಲಯಕ್ಕೆ ಬೆಳಗ್ಗೆಯೇ ತೆರಳುವ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಮುಜುಗರ ಅನುಭವಿಸುವಂತಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಪೊಲೀಸ್ ಅಧಿಕಾರಿಗಳು ಬಾರ್ ಮತ್ತು ವೈನ್ ಸ್ಟೋರ್‌ಗಳ ಬೆಳಗಿನ ಸೇವೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಳಗ್ಗೆ 10 ಗಂಟೆಗಿಂತಲೂ ಮೊದಲು ಯಾವುದೇ ಮದ್ಯದಂಗಡಿ ತೆರೆಯುವಂತಿಲ್ಲ. ಬೆಳಗ್ಗಿನಿಂದಲೇ ಮದ್ಯ ಮಾರಾಟ ಆಗುವುದರಿಂದ ಜನರು ತಿಂಡಿಯ ಬದಲಿಗೆ ಮದ್ಯ ಸೇವಿಸಲು ಆರಂಭಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ ಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಮುಂಜಾನೆಯಿಂದಲೇ ಕುಡಿತ ಆರಂಭ
ಸರ್ಕಾರ ಕೂಡಲೇ ಕ್ರಮ ಕೈಗೊಂಡು ಬೆಳಗ್ಗೆ 6ರಿಂದಲೇ ಆರಂಭವಾಗುವ ಮದ್ಯ ಸೇವೆ ಮತ್ತು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕು. ದುಡಿದು ಕುಡಿಯುತ್ತಿದ್ದವರಿಗೆ ಕುಡಿದು ದುಡಿ ಎಂದು ಫಲಕಗಳನ್ನು ಇಟ್ಟಂತೆ ಬೆಳ್ಳಂಬೆಳಗ್ಗೆ ಮದ್ಯದಂಗಡಿ ತೆರೆದು ಬಾಬಾ ಎನ್ನುತ್ತಿರುತ್ತವೆ. ರಾತ್ರಿ ವೇಳೆ ಕುಡಿಯುತ್ತಿದ್ದವರು ಮುಂಜಾನೆಯಿಂದಲೇ ಮದ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ದೂರಿದ್ದಾರೆ.
ಬೆಳಗ್ಗೆ 10ಕ್ಕೆ ಬಾರ್ ತೆರೆಯಲು ಅವಕಾಶ
ಅಬಕಾರಿ ನಿಯಮಗಳ ಪ್ರಕಾರ ಬಾರ್ ಅಥವಾ ವೈನ್ ಸ್ಟೋರ್ ಆರಂಭವಾಗಬೇಕಾಗಿರುವ ಸಮಯ ಬೆಳಗ್ಗೆ 10 ಗಂಟೆ. ಬಾಗಿಲು ಮುಚ್ಚುವ ಸಮಯ ವೈನ್ ಸ್ಟೋರ್‌ಗಳಿಗೆ ರಾತ್ರಿ 10.30, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ರಾತ್ರಿ 11.30ರವರೆಗೂ ತೆರೆದಿರಲು ಅವಕಾಶವಿದೆ.
ಯಾದಗಿರಿ: ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಸೀಟಿಗಾಗಿ ಮಾರಾಮಾರಿ; ಪ್ರಯಾಣಿಸುತ್ತಲೇ ಬಡಿದಾಡಿಕೊಂಡ ಯುವಕರು!
ಕೆಲವು ಕಡೆ ವೈನ್ ಸೆಂಟರ್‌ಗಳು ಅವಧಿಗೂ ಮುನ್ನ ತೆರೆಯುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಅಬಕಾರಿ ಇಲಾಖೆಯವರು ಹೆಚ್ಚಿನ ಕ್ರಮವಹಿಸಿ ಪರವಾನಗಿ ರದ್ದುಪಡಿಸಬೇಕು. ಬೀಟ್ ಹೆಚ್ಚಳ ಮಾಡುವ ಮೂಲಕ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ.
-ಪಾಪಣ್ಣ, ವೃತ್ತ ನಿರೀಕ್ಷಕ, ಕೋಣನಕುಂಟೆ ಠಾಣೆ.