ಬೆಂಗಳೂರು(ಆ.25): ಕೊರೋನಾ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಂತಹ ಪ್ರಕರಣದಲ್ಲಿ ಕುಟುಂಬವನ್ನು ಬಿಟ್ಟು ಅತ್ತ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರೆ, ಇತ್ತ ಹಾಡು ಹಗಲೇ ಸಬ್‌ಇನ್‌ಸ್ಪೆಕ್ಟರ್‌ವೊಬ್ಬರು (ಪಿಎಸ್‌ಐ) ಸಮವಸ್ತ್ರದಲ್ಲಿ ದರೋಡೆ ಮಾಡಿ ಕಂಬಿ ಹಿಂದೆ ಹೋಗಿದ್ದಾರೆ.

ಸಂಬಂಧಿಯೊಬ್ಬನ ಜತೆ ಸೇರಿ ಬರೋಬ್ಬರಿ .26.50 ಲಕ್ಷ ದರೋಡೆ ಮಾಡಿದ ಆರೋಪದ ಮೇರೆಗೆ ನಗರದ ಎಸ್‌.ಜೆ.ಪಾರ್ಕ್ ಸಬ್‌ಇನ್‌ಸ್ಪೆಕ್ಟರ್‌ ಜೀವನ್‌ಕುಮಾರ್‌ (31) ಮತ್ತು ಜ್ಞಾನಭಾರತಿಯ ನಿವಾಸಿ, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಜ್ಞಾನ ಪ್ರಕಾಶ್‌ (44) ಎಂಬಾತನನ್ನು ಬಂಧಿಸಲಾಗಿದೆ. ಸಬ್‌ಇನ್‌ಸ್ಪೆಕ್ಟರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ದರೋಡೆ ಹಣವನ್ನು ಜಪ್ತಿ ಮಾಡಬೇಕಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಕುಮಾರ್‌ ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಏನಪ್ಪಾ ಇದು, ಪೊಲೀಸಪ್ಪನೇ ಕಳ್ಳನಾದ ಕಥೆ ಇದು!...

ತುಮಕೂರಿನ ಗುಬ್ಬಿ ನಿವಾಸಿ ಮೋಹನ್‌ ಅಡಕೆ, ತೆಂಗು ಬೆಳೆಗಾರರಾಗಿದ್ದು, ಬೆಂಗಳೂರಿನ ಚಿಕ್ಕಪೇಟೆಯ ಕಂಬಾರಪೇಟೆಯಲ್ಲಿರುವ ವ್ಯಾಪಾರಿ ಭರತ್‌ಗೆ ಅಡಕೆ, ತೆಂಗು ಮಾರಾಟ ಮಾಡಿದ್ದರು. ಭರತ್‌ನಿಂದ .26.50 ಲಕ್ಷವನ್ನು ಕಾರಿನಲ್ಲಿ ತರುವಂತೆ ಆ.19ರಂದು ಬೆಳಗ್ಗೆ 10.30ರಲ್ಲಿ ಕೆಲಸಗಾರ ಶಿವಕುಮಾರಸ್ವಾಮಿಗೆ ಮೋಹನ್‌ ಸೂಚಿಸಿದ್ದರು. ಮತ್ತೊಬ್ಬ ಕೆಲಸಗಾರ ದರ್ಶನ್‌ನನ್ನು ಶಿವಸ್ವಾಮಿ ಜತೆ ಮಾಡಿ ಬೆಂಗಳೂರಿಗೆ ಕಳುಹಿಸಿದ್ದರು.

"

ಮಧ್ಯಾಹ್ನ 1ರ ಸುಮಾರಿಗೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಬಳಿ ಬಂದು ಶಿವಕುಮಾರಸ್ವಾಮಿ, ಭರತ್‌ಗೆ ಕರೆ ಮಾಡಿದ್ದರು. ಬಳಿಕ ಚಿಕ್ಕಪೇಟೆಯಲ್ಲಿರುವ ಮರುಧರ್‌ ಟ್ರೇಡಸ್‌್ರ್ಸ ಅಂಗಡಿ ಬಳಿ ಬಂದು ಭರತ್‌ನಿಂದ ಶಿವಕುಮಾರಸ್ವಾಮಿ ಅವರು ಹಣ ಪಡೆದಿದ್ದರು. ಹಣ ಪಡೆದ ಬಳಿಕ ಶಿವಕುಮಾರಸ್ವಾಮಿ ಮಾಲಿಕ ಮೋಹನ್‌ಗೆ ಹಣ ಪಡೆದಿರುವ ವಿಷಯ ತಿಳಿಸಿದ್ದರು. ಈ ವೇಳೆ ಮೋಹನ್‌ ಅವರು ಇನ್ನೂ .2 ಲಕ್ಷ ಬಾಕಿ ಬರಬೇಕಿದ್ದು, ಆ ಹಣವನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಹೀಗಾಗಿ ಶಿವಕುಮಾರಸ್ವಾಮಿ ಹಾಗೂ ಇನ್ನೊಬ್ಬ ಕೆಲಸಗಾರ ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಬಳಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದರು.

ಬೆಂಗಳೂರಿನಲ್ಲಿ ಚಾಲಾಕಿ ಚಪ್ಪಲಿ ಕಳ್ಳರ ಜಾಲ.. ಯಾವ ಯಾವ ಏರಿಯಾದಲ್ಲಿದ್ದಾರೆ?...

ಈ ವೇಳೆ ವೇಳೆ ಸ್ವಿಫ್ಟ್‌ ಕಾರಿನಲ್ಲಿ ಬಂದ ಆರೋಪಿಗಳಾದ ಜ್ಞಾನಪ್ರಕಾಶ್‌, ಜೀವನ್‌ ಕುಮಾರ್‌ ಹಾಗೂ ಇವರ ಸಹಚರ ಕಿಶೋರ್‌ ಏಕಾಏಕಿ ಶಿವಕುಮಾರಸ್ವಾಮಿ ಮತ್ತು ದರ್ಶನ್‌ ಕುತ್ತಿಗೆ, ಪ್ಯಾಂಟಿನ ಸೊಂಟದ ಕಾಲರ್‌ ಹಿಡಿದು ಹಲ್ಲೆ ನಡೆಸಿ ಮೊಬೈಲ್‌ ಕಸಿದುಕೊಂಡು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಸಿದ್ದರು. ನಾವು ಪೊಲೀಸರಾಗಿದ್ದು, ನಾವು ಹೇಳುವ ಜಾಗಕ್ಕೆ ಕಾರು ಚಲಾಯಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಬಲವಂತವಾಗಿ ಇಬ್ಬರನ್ನೂ ಇವರ ಕಾರಿನೊಳಗೆ ಕೂರಿಸಿದ ಆರೋಪಿಗಳು, ಯುನಿಟಿ ಬಿಲ್ಡಿಂಗ್‌ ಬಳಿ ಕರೆದೊಯ್ದಿದ್ದಾರೆ. ಇವರಿಂದ .26.50 ಲಕ್ಷ ಇದ್ದ ಬ್ಯಾಗನ್ನು ಕಸಿದುಕೊಂಡು ಸ್ವಿಫ್ಟ್‌ ಕಾರಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ ಆರೋಪಿಗಳ ಸಹಚರರಿಗೆ ಹಸ್ತಾಂತರಿಸಿದ್ದರು. ನಂತರ ಇಬ್ಬರನ್ನೂ ಲಾಲ್‌ಬಾಗ್‌ ರಸ್ತೆಯ ಹೋಟೆಲ್‌ವೊಂದರ ಬಳಿ ಕರೆದುಕೊಂಡು ಹೋಗಿ ಮೊಬೈಲ್‌ ನೀಡಿ ಹೋಗುವಂತೆ ಎಚ್ಚರಿಸಿದ್ದರು. ಶಿವಕುಮಾರಸ್ವಾಮಿ ಸಿಟಿ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು.

ಸಿಸಿ ಕ್ಯಾಮರಾ ನೀಡಿದ ಸುಳಿವು:

ಕೂಡಲೇ ಎಚ್ಚೆತ್ತ ಡಿಸಿಪಿ ಸಂಜೀವ್‌ ಕುಮಾರ್‌ ಪಾಟೀಲ್‌ ಅವರು ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದರು. ಪೊಲೀಸ್‌ ತಂಡ, ಆರೋಪಿಗಳು ಶಿವಕುಮಾರಸ್ವಾಮಿಯನ್ನು ಕಾರಿನಲ್ಲಿ ಕರೆದೊಯ್ದ ರಸ್ತೆ ಬದಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿತ್ತು. ಈ ವೇಳೆ ಆರೋಪಿಗಳ ಮುಖಚಹರೆ, ಕಾರಿನ ನಂಬರ್‌ ಹಾಗೂ ಕರ್ತವ್ಯ ನಿತರ ಸಬ್‌ಇನ್‌ಸ್ಪೆಕ್ಟರ್‌ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದ ದೃಶ್ಯ ಸೆರೆ ಸಿಕ್ಕಿದೆ. ಈ ಆಧಾರದ ಮೇಲೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟರು ಎಂದು ತನಿಖಾಧಿಕಾರಿಗಳು ವಿವರಿಸಿದರು.

ಮೋಹನ್‌ ಜತೆಗಿದ್ದ ವ್ಯಕ್ತಿಯಿಂದ ಮಾಹಿತಿ!

ಮೋಹನ್‌ ಮನೆಯ ಕೆಲಸಗಾರರು ಹಣ ತೆಗೆದುಕೊಂಡು ಬರಲು ಹೋಗುತ್ತಿರುವ ವಿಚಾರವನ್ನು ಗುಬ್ಬಿಯ ವ್ಯಕ್ತಿಯೊಬ್ಬ ತುಮಕೂರು ಮೂಲದ ಕಿಶೋರ್‌ಗೆ ತಿಳಿಸಿದ್ದ. ಕಿಶೋರ್‌ ಜ್ಞಾನಪ್ರಕಾಶ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದ. ಜ್ಞಾನಪ್ರಕಾಶ್‌ ಇತರ ಆರೋಪಿಗಳ ಜತೆ ಸಂಚು ರೂಪಿಸಿ ಕೃತ್ಯ ಎಸಗಿದ್ದಾನೆ. ಕಿಶೋರ್‌ ಹಾಗೂ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದರೋಡೆ ಮಾಡಿದ ಬಳಿಕ ಆರೋಪಿಗಳೆಲ್ಲರೂ ಹಣವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಕೂಡ ಹೆಚ್ಚಿನ ಪಾಲು ಪಡೆದಿದ್ದಾರೆ. ಕರೆ ಮಾಡಿದಾಗಲೇ ದರೋಡೆ ಎಂಬುದು ಗೊತ್ತಿದ್ದೇ ಸಬ್‌ಇನ್‌ಸ್ಪೆಕ್ಟರ್‌ ಕೃತ್ಯ ಎಸಗುವ ಮೂಲಕ ಇಡೀ ಇಲಾಖೆಗೆ ಕಪ್ಪು ಚುಕ್ಕೆ ತಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾನು ಕೆಲಸ ಮಾಡುವ ಬ್ಯಾಂಕನ್ನೇ ದೋಚಿದ ಸೆಕ್ಯೂರಿಟಿ ಗಾರ್ಡ್, ಅಬ್ಬಬ್ಬಾ ಮಾಸ್ಟರ್ ಪ್ಲಾನ್!

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಬರೆಯಬೇಕಿದ್ದ ಪಿಎಸ್‌ಐ!

ಮೂಲತಃ ಹಾಸನ ಜಿಲ್ಲೆಯ ಜೀವನ್‌ಕುಮಾರ್‌ ಕಾನ್‌ಸ್ಟೇಬಲ್‌ ಆಗಿದ್ದರು. ಬಳಿಕ ಪಿಎಸ್‌ಐ ಪರೀಕ್ಷೆ ಬರೆದು ಸಬ್‌ಇನ್‌ಸ್ಪೆಕ್ಟರ್‌ ಆಗಿ 2017ರಲ್ಲಿ ನೇಮಕಗೊಂಡಿದ್ದರು. ಜೀವನ್‌ ಕುಮಾರ್‌ ಉನ್ನತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸೋಮವಾರ ನಡೆದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಈ ನಡುವೆ ಆರೋಪಿಯಾಗಿ ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ. 2017ರ ಬ್ಯಾಚ್‌ನ ಸಬ್‌ಇನ್‌ಸ್ಪೆಕ್ಟರ್‌ ಆಗಿರುವ ಜೀವನ್‌ ಕುಮಾರ್‌ ಪ್ರೊಬೆಷನರಿ ಅವಧಿ ಇನ್ನು ಕೂಡ ಮುಗಿದಿಲ್ಲ. ದರೋಡೆ ಕೃತ್ಯ ಎಸಗಿದ ಸಬ್‌ಇನ್‌ಸ್ಪೆಕ್ಟರ್‌ಗೆ ಪಶ್ಚಾತ್ತಾಪ ಇಲ್ಲ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸರ್ಕಾರಿ ಬಸ್‌ ಡ್ರೈವರ್‌ ಆಗಿದ್ದ!

ಜ್ಞಾನಪ್ರಕಾಶ್‌ 2006ರಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾಹಕನಾಗಿ ಕೆಲಸಕ್ಕೆ ಸೇರಿದ್ದು, ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕೆಎಸ್‌ಆರ್‌ಟಿಸಿಯಿಂದ ಆರ್ಥಿಕ ಇಲಾಖೆಯ ಕಾರು ಚಾಲಕನಾಗಿ ನಿಯೋಜನೆಗೊಂಡಿದ್ದ. 2017ರಲ್ಲಿ ಆರೋಪಿ ಸ್ವಯಂ ನಿವೃತ್ತಿ ಪಡೆದುಕೊಂಡು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯನ್ನು ಹುಟ್ಟು ಹಾಕಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು. ತಾನು ಈ ಹಿಂದೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಲಿಂಬಾವಳಿ, ಟಿ.ಬಿ.ಜಯಚಂದ್ರ, ದಿ.ವಿ.ಎಸ್‌.ಆಚಾರ್ಯ ಹಾಗೂ ಹಿರಿಯ ಐಎಎಸ್‌ ಅಧಿಕಾರಿಗಳ ಕಾರು ಚಾಲಕನಾಗಿದ್ದೆ ಎಂದು ಹೇಳಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಪೊಲೀಸಪ್ಪನೇ ಇದ್ದ ಕಾರಣ ಸುಮ್ಮನಿದ್ರು!

ಹಣ ದರೋಡೆ ಮಾಡಿ ಶಿವಕುಮಾರಸ್ವಾಮಿ ಮತ್ತು ದರ್ಶನ್‌ನನ್ನು ಬೆದರಿಸಿದ್ದರು. ಆರೋಪಿಗಳ ಸೂಚನೆಯಂತೆ ಶಿವಕುಮಾರಸ್ವಾಮಿ ಕಾರು ಚಾಲನೆ ಮಾಡುತ್ತಿದ್ದರು. ಸಮವಸ್ತ್ರ ತೊಟ್ಟಿದ್ದ ಸಬ್‌ಇನ್‌ಸ್ಪೆಕ್ಟರ್‌ ದ್ವಿಚಕ್ರ ವಾಹನದಲ್ಲಿ ಮುಂದೆ ಹೋಗುತ್ತಾ ಯುಟಿಲಿಟಿ ಕಟ್ಟಡಕ್ಕೆ ದಾರಿ ತೋರಿಸುತ್ತಾ ಹೋಗುತ್ತಿದ್ದ. ಮುಂದೆ ಸಬ್‌ಇನ್‌ಸ್ಪೆಕ್ಟರ್‌ ಹೋಗುತ್ತಿದ್ದ ಕಾರಣಕ್ಕೆ ಹಣ ಕಳೆದುಕೊಂಡುವರು ಯಾರ ಸಹಾಯಕ್ಕೂ ಕಿರುಚಾದೇ ಸುಮ್ಮನೆ ಕಾರಿನಲ್ಲಿ ಕುಳಿತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.

ಖತರ್ನಾಕ್ ಎಟಿಎಂ ಕಳ್ಳರು.. ಅಬ್ಬಬ್ಬಾ ಇವರ ವಾಕಿಂಗ್ ಸ್ಟೈಲ್ ನೋಡಿ !

ಹೆಂಡತಿಯ ತಂದೆಯ ತಮ್ಮನೊಂದಿಗೆ ಕೃತ್ಯ!

ಜ್ಞಾನ ಪ್ರಕಾಶ್‌ನ ಅಣ್ಣನ ಮಗಳನ್ನು ಸಬ್‌ಇನ್‌ಸ್ಪೆಕ್ಟರ್‌ ಜೀವನ್‌ ಕುಮಾರ್‌ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಜ್ಞಾನಪ್ರಕಾಶ್‌, ಎಸ್‌ಐ ಸಹಾಯ ಕೋರಿದ್ದ. ಜ್ಞಾನ ಪ್ರಕಾಶ್‌ ಬೆಂಗಳೂರಿನ 8 ಕಡೆ ಹಾಗೂ ರಾಜ್ಯದ 6 ಜಿಲ್ಲೆಗಳಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ಕಚೇರಿ ಹೊಂದಿದ್ದ. ಪ್ರೆಸ್‌ ರಿಪೋರ್ಟರ್‌ ಎಂದು ಹೇಳಿಯೂ ತಿರುಗಾಡುತ್ತಿದ್ದ.

ದರೋಡೆ ಕೃತ್ಯದಲ್ಲಿ ಎಸ್‌.ಜೆ.ಪಾರ್ಕ್ ಸಬ್‌ಇನ್‌ಸ್ಪೆಕ್ಟರ್‌ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಪಿಎಸ್‌ಐ ಜೀವನ್‌ಕುಮಾರ್‌ ಮನೆ ಕೂಡ ಪರಿಶೀಲನೆ ನಡೆಸಲಾಗಿದ್ದು, ಆರೋಪಿಯನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸಲಾಗುವುದು.

-ಸಂಜೀವ್‌ಕುಮಾರ್‌ ಪಾಟೀಲ್‌, ಪಶ್ಚಿಮ ವಿಭಾಗದ ಡಿಸಿಪಿ.