*   ಮಹಾಲಕ್ಷೀ ಲೇಔಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು*   ಈ ಕೃತ್ಯ ನಡೆದ ಬಳಿಕ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ತಾಯಿ-ಮಗ*   ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ಮುಂದುವರಿಸಿದ್ದ ಪೊಲೀಸರು 

ಬೆಂಗಳೂರು(ನ.01): ಹಲ್ಲೆ(Assault) ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ನಿರ್ಮಾಪಕ(Producer) ಸೌಂದರ್ಯ ಜಗದೀಶ್‌(Soundarya Jagadish) ಅವರ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್‌ ಭಾನುವಾರ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಅಂತ್ಯಕ್ರಿಯೆಯಲ್ಲಿ ಬಹಿರಂಗವಾಗಿ ಪಾಲ್ಗೊಂಡಿದ್ದರು.

ಭಾನುವಾರ ಮುಂಜಾನೆ 5.30ರ ಸುಮಾರಿಗೆ ಕಂಠೀರವ ಸ್ಟುಡಿಯೋ(Kanteerava Studios) ಪ್ರವೇಶಿಸಿ ಅಂತ್ಯಕ್ರಿಯೆ(Funeral) ವೇಳೆ ಸಾರ್ವಜನಿಕವಾಗಿ ಕಾಣಿಕೊಂಡರು. ಕೆಲ ದಿನ ಹಿಂದೆ ಮನೆ ಮುಂದೆ ಕಸ ಗುಡಿಸುವ ವಿಚಾರವಾಗಿ ತಮ್ಮ ಮನೆ ಎದುರಿನಲ್ಲಿ ನೆಲೆಸಿರುವ ಮಂಜುಳಾ ಪುರುಷೋತ್ತಮ್‌ ಮನೆಗೆ ನುಗ್ಗಿ ನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರ ಸ್ನೇಹಿತ್‌ ಹಾಗೂ ಪತ್ನಿ ರೇಖಾ ದಾಂಧಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ಮಂಜುಳಾ ಮನೆಗೆಲಸದಾಳು ಅನುರಾಧ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಮಹಾಲಕ್ಷೀ ಲೇಔಟ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿತ್ತು. ಈ ಕೃತ್ಯ ನಡೆದ ಬಳಿಕ ಬಂಧನ(Arrest) ಭೀತಿಯಿಂದ ತಾಯಿ-ಮಗ ತಲೆಮರೆಸಿಕೊಂಡಿದ್ದರು. ಪೊಲೀಸರು(Police) ಆರೋಪಿಗಳ(Accused) ಬಂಧನಕ್ಕೆ ಶೋಧಕಾರ್ಯ ಮುಂದುವರಿಸಿದ್ದರು.

ಈ ಬೆನ್ನಲ್ಲೇ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರು ದೂರುದಾರರೊಂದಿಗೆ ರಾಜೀಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆರೋಪಿಗಳಾದ ರೇಖಾ ಹಾಗೂ ಪುತ್ರ ಸ್ನೇಹಿತ್‌ ಕಂಠೀರವ ಸ್ಟುಡಿಯೋದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರು. ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ಬಂದೋಬಸ್ತ್‌ನಲ್ಲಿ ಮಗ್ನರಾಗಿದ್ದರು. ಆರೋಪಿಗಳು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದು, ಜಾಮೀನು(Bail) ಸಿಕ್ಕಿರುವ ಬಗ್ಗೆ ಖಚಿತವಾಗಿಲ್ಲ.

ನೆರವಿಗೆ ಬಂದ ನಟ, ನಿರ್ಮಾಪಕ.. ಪ್ರೊಡ್ಯೂಸರ್ ಪುತ್ರನ ಪುಂಡಾಟ ಕೇಸ್‌ಗೆ ಟ್ವಿಸ್ಟ್!

ಪುನೀತ್‌ ದರ್ಶನಕ್ಕಾಗಿ ಮರ, ಮನೆ ಏರಿದ ಅಭಿಮಾನಿಗಳು

ಅಂತ್ಯ ಸಂಸ್ಕಾರ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ಇದ್ದರೂ ಅಪ್ಪು ಅಭಿಮಾನಿಗಳು(Fans) ಕಂಠೀರವ ಸ್ಟುಡಿಯೋ ಹತ್ತಿರದ ರಸ್ತೆಯ ಬದಿ ಗಂಟೆಗಟ್ಟಲೇ ನಿಂತುಕೊಂಡು ಅಭಿಮಾನ ಮೆರೆದರು. ಕೆಲವರು ಸಮೀಪದ ಮರವೇರಿ, ಮನೆಯೇರಿ ಅಂತ್ಯ ಸಂಸ್ಕಾರ ದೃಶ್ಯ ಕಾಣಬಹುದೇನೋ ಎಂದು ಯತ್ನಿಸಿದ್ದುಕಂಡುಬಂತು.

ಸಮೀಪದ ಮನೆಗಳವರು ಬೈನಾಕ್ಯುಲರ್‌ ಮೂಲಕ ಕಂಠೀರವ ಸ್ಟುಡಿಯೋದಲ್ಲಿ ನಡೆಯುವ ಅಂತ್ಯಸಂಸ್ಕಾರ ವೀಕ್ಷಿಸಲು ಮುಂದಾದರೆ, ಮತ್ತೆ ಕೆಲವರು ಮನೆಗಳ ಬಾಲ್ಕನಿ ಏರಿ ಅಂತ್ಯ ಸಂಸ್ಕಾರ ನೋಡಲು ಹರಸಾಹಸಪಟ್ಟರು. ಮರಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದುದ್ದರಿಂದ ಎಲ್ಲಿ ಕೊಂಬೆ ಮುರಿದು ಬೀಳುವರೋ ಎಂಬ ಆತಂಕವೂ ಅಲ್ಲಿದ್ದವರನ್ನು ಕಾಡಿತು. ಕೆಲವರು ನಾಡ ಧ್ವಜ ಹಿಡಿದಿದ್ದರೆ, ಮತ್ತೆ ಕೆಲವು ಅಭಿಮಾನಿಗಳು ಬೈಕ್‌ಗಳಿಗೆ ಅಪ್ಪು ಫೋಟೋ ಅಂಟಿಸಿಕೊಂಡು ಅಭಿಮಾನ ಮೆರೆದರು. ಅಪ್ಪು ಫ್ಲೆಕ್ಸ್‌ಗೆ ಕೆಲವರು ಹಾಲಿನ ಅಭಿಷೇಕ ಮಾಡಿದರೆ, ಕೆಲವೆಡೆ ಉಚಿತ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.

ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಪೊಲೀಸ್‌ ಬಂದೋಬಸ್ತ್‌(Security) ಮಾಡಿದ್ದರಿಂದ ಯಾರೂ ರಸ್ತೆ ದಾಟಿ ಸ್ಟುಡಿಯೋ ಕಡೆ ಹೋಗುವುದು ಅಸಾಧ್ಯವಾಗಿತ್ತು. ಆದರೂ ಕೆಲವರು ಬ್ಯಾರಿಕೇಡ್‌ ಹಾರಿ ಸ್ಟುಡಿಯೋ ಕಡೆ ಹೋಗಲು ಯತ್ನಿಸಿದಾಗ, ಪೊಲೀಸರು ಎಚ್ಚರಿಕೆ ನೀಡಿ ಹಿಂದಕ್ಕೆ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರೂ ಗಂಟೆಗಟ್ಟಲೇ ರಸ್ತೆ ಪಕ್ಕ ಹಾಕಿದ್ದ ಬ್ಯಾರಿಕೇಡ್‌ಗಳ ಬಳಿಯೇ ಕಾಯುತ್ತಾ ನಿಂತಿದ್ದರು.

ಮರಿಯಪ್ಪನಪಾಳ್ಯದ ಕಲಾವಿದನೊಬ್ಬ ಪುನೀತ್‌ ರಾಜ್‌ಕುಮಾರ್‌ ಅವರ ಮಣ್ಣಿನ ಕಲಾಕೃತಿಯನ್ನು ತಯಾರಿಸಿ ಅದಕ್ಕೆ ಹೂವಿನ ಹಾರ ಹಾಕಿಕೊಂಡು ಸ್ಟುಡಿಯೋ ಒಳಗೆ ಪ್ರವೇಶಿಸಲು ಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಅಂತ್ಯ ಸಂಸ್ಕಾರ ನೆರವೇರಿದ ನಂತರವಾದರೂ ಸಮಾಧಿ ದರ್ಶನಕ್ಕೆ ಅವಕಾಶ ಸಿಗಬಹುದೇನೋ ಎಂದು ಕಾಯುತ್ತಿದ್ದ ಅಭಿಮಾನಿಗಳು, ಅದಕ್ಕೆ ಅವಕಾಶವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ತೀವ್ರ ನಿರಾಸೆಗೊಂಡರು. ಅಂತಿಮ ವಿಧಿವಿಧಾನಗಳು ನೆರವೇರಿ, ಕುಟುಂಬಸ್ಥರು, ಗಣ್ಯರೆಲ್ಲಾ ತೆರಳುತ್ತಿದ್ದಂತೆ ನಿಧಾನವಾಗಿ ಅಭಿಮಾನಿಗಳ ಸಂಖ್ಯೆ ಕರಗತೊಡಗಿತು.