ಡ್ರಗ್ಸ್ ಮಾಫಿಯಾ: ಕೊರೋನಾ ಕಾರಣ ವಿಚಾರಣೆಗೆ ಬರ್ತಿಲ್ಲ ಒಬೆರಾಯ್ ಪತ್ನಿ ಪ್ರಿಯಾಂಕ
ವಿಚಾರಣೆಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರಾಗಿದ್ದ ಪ್ರಿಯಾಂಕ| ‘ಪುಟ್ಟಮಕ್ಕಳು ಮನೆಯಲ್ಲಿದ್ದಾರೆ. ಹೀಗಾಗಿ ಕೊರೋನಾ ಕಾರಣ ವಿಮಾನ ಪ್ರಯಾಣ ಸಾಧ್ಯವಾಗುತ್ತಿಲ್ಲ. ಈಗಾಗಲೇ ನಮ್ಮ ಮನೆ ಪರಿಶೀಲನೆಗೆ ಬಂದಿದ್ದ ಪೊಲೀಸರಿಗೆ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದೇನೆ. ತನಿಖೆ ಅಗತ್ಯವೆನಿಸಿದಾಗ ಬರುತ್ತೇನೆ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕ|
ಬೆಂಗಳೂರು(ಅ.22): ‘ಕೊರೋನಾ ಕಾರಣದಿಂದ ಡ್ರಗ್ಸ್ ಕೇಸ್ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ ತನಿಖೆಗೆ ಸಹಕರಿಸುತ್ತೇನೆ’ ಎಂದು ಸಿಸಿಬಿಗೆ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಪ್ರಮುಖ ಆರೋಪಿ ಆದಿತ್ಯ ಆಳ್ವ ಸೋದರಿ ಹಾಗೂ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಅಳ್ವ 4 ಪುಟಗಳ ವಿವರಣೆ ನೀಡಿದ್ದಾರೆ.
ವಿಚಾರಣೆಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಪ್ರಿಯಾಂಕ ಗೈರಾಗಿದ್ದರು. ಈಗ ಉತ್ತರ ನೀಡಿದ್ದಾರೆ. ‘ಪುಟ್ಟಮಕ್ಕಳು ಮನೆಯಲ್ಲಿದ್ದಾರೆ. ಹೀಗಾಗಿ ಕೊರೋನಾ ಕಾರಣ ವಿಮಾನ ಪ್ರಯಾಣ ಸಾಧ್ಯವಾಗುತ್ತಿಲ್ಲ. ಈಗಾಗಲೇ ನಮ್ಮ ಮನೆ ಪರಿಶೀಲನೆಗೆ ಬಂದಿದ್ದ ಪೊಲೀಸರಿಗೆ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದೇನೆ. ತನಿಖೆ ಅಗತ್ಯವೆನಿಸಿದಾಗ ಬರುತ್ತೇನೆ’ ಎಂದು ಪ್ರಿಯಾಂಕ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೊಲೀಸರು ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಕೇಸಲ್ಲಿ ನಾಪತ್ತೆ ಆಗಿರುವ ತಮ್ಮ ಸೋದರನಿಗೆ ಆಶ್ರಯ ನೀಡಿದ ಆರೋಪ ಪ್ರಿಯಾಂಕಾ ಮೇಲಿದೆ.
ಡ್ರಗ್ ಮಾಫಿಯಾ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿಗೆ ಮತ್ತೆ ನೋಟಿಸ್
ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಮುಂಬೈನ ಜುಹು ಪ್ರದೇಶದಲ್ಲಿರುವ ಅಳ್ವ ಮನೆಗೆ ಸಿಸಿಬಿ ದಾಳಿ ನಡೆಸಿ ಶೋಧಿಸಿತ್ತು. ಬಳಿಕ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಆಗಮಿಸುವಂತೆ ಪ್ರಿಯಾಂಕ ಅವರಿಗೆ ಅಧಿಕಾರಿಗಳು ನೋಟಿಸಿದ್ದರು. ಇದಕ್ಕೆ ವಾಟ್ಸ್ ಆ್ಯಪ್ ಹಾಗೂ ಇಮೇಲ್ ಮೂಲಕ ಅಧಿಕಾರಿಗಳಿಗೆ ಅವರು ಪ್ರತ್ಯುತ್ತರ ಕೊಟ್ಟಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಸದ್ಯ ಪ್ರಿಯಾಂಕ ಇಮೇಲ್ ಹೇಳಿಕೆಯನ್ನು ಮಾನ್ಯ ಮಾಡಿ ದಾಖಲಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತನಿಖೆಗೆ ಅಗತ್ಯವಿದ್ದರೆ ಖುದ್ದು ಹಾಜರಾತಿಗೆ ಸೂಚಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.