*   ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಾವು*   ಮೃತ ನಾಗೇಶ್‌ ಕೊಲ್ಕತ್ತಾ ಮೂಲದ ಮಾಡೆಲ್‌ ಕೊಲೆ ಪ್ರಕರಣದ ಆರೋಪಿ*   ಕಾರಾಗೃಹಕ್ಕೆ ಹೆಚ್ಚಿನ ಭದ್ರತೆ 

ಚಿಕ್ಕಬಳ್ಳಾಪುರ(ಸೆ.26):  ಕೊಲ್ಕತ್ತಾ ಮೂಲದ ಮಾಡೆಲ್‌ ಒಬ್ಬರ ಕೊಲೆ(Murder) ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿ(Prisoner) ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಸುಮಾರಿನಲ್ಲಿ ಕಾರಾಗೃಹದಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ(Chikkaballapur) ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾ ಕಾರಾಗೃಹದಲ್ಲಿ(Jail) ಈ ಘಟನೆ ನಡೆದಿದೆ. ಮೃತನನ್ನು ವಿಚಾರಣಾಧೀನ ಕೈದಿಯನ್ನು ಹಾಸನ ಮೂಲದ ಟಿ.ನರಸಿಪುರ ನಿವಾಸಿ ಕ್ಯಾಬ್‌ ಚಾಲಕ ನಾಗೇಶ್‌ (27) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್‌ ಬಳಿಯ ಸಂಜೀವಿನಿ ನಗರದಲ್ಲಿ ವಾಸವಾಗಿದ್ದ.

ಕಳೆದ ಶುಕ್ರವಾರ ರಾತ್ರಿ ಕಾರಾಗೃಹದಲ್ಲಿದ್ದ ಕೈದಿಗಳಿಗೆ ಮಾಂಸದೂಟ ವ್ಯವಸ್ಥೆ ಮಾಡಲಾಗಿತ್ತು. ನಾಗೇಶ್‌ ಎಂದಿನಂತೆ ಊಟ ಸೇವಿಸಿ ನಿದ್ರೆಗೆ ಜಾರಿದ್ದ. ಕೆಲ ಹೊತ್ತಿಗೆ ವಾಂತಿ ಮಾಡಲಾರಂಭಿಸಿದ. ಇದರಿಂದ ಗಾಬರಿಗೊಂಡ ಜೈಲು ಸಿಬ್ಬಂದಿ ಆ್ಯಂಬುಲೆನ್ಸ್‌ ಕರೆಸಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆಯಾದರೂ, ವೈದ್ಯರು ನಡೆಸುವ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ.

ಪೊಲೀಸ್‌ ವಶದಲ್ಲಿದ್ದ 3ರ ಕಂದಮ್ಮ ಸಾವು: ಲಾಕ್‌ಅಪ್‌ ಡೆತ್‌ ಆರೋಪ

ಕೊಲ್ಕತ್ತಾ ಮೂಲದ ಮಹಿಳೆ ಕೊಲೆ

ವಿಚಾರಣಾಧೀನ ಕೈದಿ ನಾಗೇಶ್‌, 2019ರಲ್ಲಿ ಕೊಲ್ಕತ್ತಾದ ಮಾಡೆಲ್‌ ಒಬ್ಬಳು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು(Bengaluru) ನಗರಕ್ಕೆ ಹೋಗಲೆಂದು ನಾಗೇಶ್‌ ಚಾಲಕನಾಗಿದ್ದ ಕ್ಯಾಬ್‌ ಹತ್ತುತ್ತಾರೆ. ಆದರೆ ನಾಗೇಶ್‌ ಬೆಂಗಳೂರಿನತ್ತ ಕರೆದೊಯ್ಯುವ ಮಾರ್ಗ ಮಧ್ಯೆ ಆಕೆಯನ್ನು ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಚಿನ್ನಾಭರಣ ಕಸಿದುಕೊಂಡು, ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ನಾಗೇಶ್‌ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಆದರೆ ಈತನನ್ನು ವಿಚಾರಣಾಧೀನ ಕೈದಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ನಾಗೇಶ್‌ ಸಾವು ಸಾಕಷ್ಟು ಅನುಮಾನಗಳಿಗೆ ಗ್ರಾಸವಾಗಿದೆ.

ಕಾರಾಗೃಹಕ್ಕೆ ಹೆಚ್ಚಿನ ಭದ್ರತೆ:

ವಿಚಾರಣಾಧೀನ ಕೈದಿ ಸಾವಿನ ವಿಷಯ ತಿಳಿದ ಕೂಡಲೇ ಜಿಲ್ಲಾ ಕಾರಾಗೃಹಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಘಟನೆ ವೇಳೆ ಕಾರಾಗೃಹದ ಅಧೀಕ್ಷಕರು ಇರಲಿಲ್ಲ ಎನ್ನಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಕಾರಾಗೃಹಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.