Hassan: ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲನ ಬಂಧನ
ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲನ ಬಂಧಿಸಿದ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ.
ಹಾಸನ (ಡಿ.22): ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲನ ಬಂಧಿಸಿದ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವಸತಿ ಶಾಲೆ ವಿದ್ಯಾರ್ಥಿನಿಯರು ದೂರು ನೀಡಿದ್ದು, ದೂರಿನನ್ವಯ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲ್ಯಾಣ ಸಮಿತಿಯವರು ಪರಿಶೀಲನೆ ನಡೆಸಿದ್ದರು.
ಈ ವೇಳೆ ಮಕ್ಕಳೊಂದಿಗೆ ಆಪ್ತ ಸಮಾಲೋಚನೆಯನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ನಡೆಸಿದ್ದು, ಪ್ರಾಂಶುಪಾಲರ ಲೈಂಗಿಕ ಕಿರುಕುಳ ನೀಡಿರುವುದನ್ನು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದರು. ಮಕ್ಕಳ ಆರೋಪ ಹಿನ್ನೆಲೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹೆಚ್.ಟಿ.ಕೋಮಲ ಪೊಲೀಸರಿಗೆ ದೂರು ನೀಡಿದ್ದು, ಉದರ ಅನ್ವಯ ದೂರು ದಾಖಲಿಸಿಕೊಂಡು ಪ್ರಾಂಶುಪಾಲ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಶಿವಕುಮಾರ್ ಮೂಲತಃ ಕೊಡಗು ಜಿಲ್ಲೆಯವರಾಗಿದ್ದು, ಈತನ ವಿರುದ್ದ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಸಾಯೋ ಮುನ್ನ ಗೂಗಲ್ ಸರ್ಚ್
ಪ್ರಿನ್ಸಿಪಾಲ್ ವಿರುದ್ಧ ಲೈಂಗಿಕ ಕಿರುಕುಳದ ದೂರು: ಬಂಡಾಯ ಸಾಹಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಮೋಟನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ (ಆಡಳಿತ) ಗಾಳೆಪ್ಪ ಪೂಜಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಕುರಿತ ದೂರುಗಳು ಬಂದ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ನೀಡಿದ ಪರಿಶೀಲನಾ ವರದಿಯನ್ವಯ, ವಸತಿ ಶಾಲೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಜಿಲ್ಲಾಧಿಕಾರಿ ಆರ್. ಸ್ನೇಹಲ್, ಈ ಶಾಲೆಗೆ ಪುನ: ಸ್ಥಳ ನಿಯುಕ್ತಿಗೊಳಿಸಬಾರದೆಂದು ಹಾಗೂ ಇವರ ಮೇಲಿನ ದೂರುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಏನಿದು ಆರೋಪ?: ವಿದ್ಯಾರ್ಥಿನಿಯರ ಜೊತೆ ಅಶ್ಲೀಲವಾಗಿ ಮಾತನಾಡುವುದು, ತಮ್ಮ ವೈಯುಕ್ತಿಕ ಜೀವನದ ಪ್ರೇಮದ ವಿಚಾರಗಳನ್ನು ವಿದ್ಯಾರ್ಥಿಗಳೆದುರು ಹಂಚಿಕೊಳ್ಳುವುದು ಸೇರಿದಂತೆ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿರುವ ವಿದ್ಯಾರ್ಥಿಗಳು, ಕ್ರಮಕ್ಕೆ ಆಗ್ರಹಿಸಿದ್ದರು. ನ.26ರಂದು ವಸತಿ ನಿಲಯದ ಸಂರಕ್ಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯೊಬ್ಬಳಿಗೆ ಮೊಬೈಲ್ ನೀಡುವಂತೆ ಹೇಳುತ್ತಾರೆ. ನಂತರ, ವಿದ್ಯಾರ್ಥಿಯ ಜೊತೆ ಮಾತನಾಡುತ್ತ, ಅಶ್ಲೀಲವಾಗಿ ಮಾತನಾಡುವುದು, ಮನೆಗೆ ಬರುವಂತೆ ಕರೆಯುವುದು, ಪ್ರೇಮ ನಿವೇದನೆ ಮಾಡಿದ್ದಾರೆಂದು ದೂರಲಾಗಿದೆ.
ಅನುಚಿತ ವರ್ತನೆ, ಲೈಂಗಿಕ ಕಿರುಕುಳದ ಈ ದೂರಿನ ಕುರಿತು ಜಿಲ್ಲಾಧಿಕಾರಿ ಸ್ನೇಹಲ್ ವಿಚಾರಣೆ ನಡೆಸಿದ್ದರು. ಬಂಡಾಯ ಸಾಹಿತ್ಯದ ಕೃಷಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಗಾಳೆಪ್ಪ, ಈ ಹಿಂದೆ ಕಾರಣಾಂತರಗಳಿಂದ ಅಮಾನತುಗೊಂಡಿದ್ದರಾದರೂ, ನ್ಯಾಯಾಲಯದ ಆದೇಶದ ಮೇರೆಗೆ ಮುಂದುವರೆದಿದ್ದರು ಎನ್ನಲಾಗಿದೆ. ಗಾಳೆಪ್ಪ ವಿರುದ್ಧ ಇಂತಹ ಆರೋಪ ಸ್ಥಳೀಯ ಸಾಹಿತ್ಯ ವಲಯದಲ್ಲಿ ದಿಗ್ರ್ಭಮೆ ಮೂಡಿಸಿದೆ. ಜಿಲ್ಲೆಯಲ್ಲಿ ವಸತಿ ಶಾಲೆಯ ಮಕ್ಕಳ ಮೇಲಿನ ದೌರ್ಜನ್ಯದ ದೂರುಗಳು ಪದೇ ಪದೇ ಕೇಳಿಬರುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.
ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಸೂಚಿಸಿದ್ರಂತೆ ಶಿಕ್ಷಕರು!
ಜಿಲ್ಲೆಯ ಕೆಲವು ವಸತಿ ಶಾಲೆಗಳಲ್ಲಿ ಬಾಲಕಿಯರ ಮೇಲಿನ ಇಂತಹ ದೌರ್ಜನ್ಯ ಪ್ರಕರಣಗಳಿಂದಾಗಿ ಆತಂಕಗೊಂಡ ಪಾಲಕರು, ವಾಪಸ್ ಕರೆದೊಯ್ದು ಶಿಕ್ಷಣದಿಂದಲೇ ದೂರವಿಡುತ್ತಿದ್ದ ಘಟನೆಗಳು ನಡೆದಿದ್ದವು. ‘ಕನ್ನಡಪ್ರಭ’ದ ಜೊತೆ ಫೋನಾಯಿಸಿ ಮಾತನಾಡಿದ ಗಾಳೆಪ್ಪ, ಲೈಂಗಿಕ ಕಿರುಕುಳದ ಆರೋಪಗಳನ್ನು ತಳ್ಳಿ ಹಾಕಿ, ಇದು ತಮ್ಮ ವಿರುದ್ಧ ನಡೆದ ಷಡ್ಯಂತ್ರವಾಗಿದೆ, ಕೆಲವರು ದುರುದ್ದೇಶದಿಂದ ಇಂತಹ ಆರೋಪಗಳ ಮೂಲಕ ವೈಯುಕ್ತಿಕ ತೇಜೋವಧೆ ನಡೆಸುತ್ತಿದ್ದಾರೆಂದರು.