ಮಳವಳ್ಳಿ ಡಯಾಗ್ನೋಸ್ಟಿಕ್‌ ಸೆಂಟರ್‌ಗೆ ಬೀಗ, ಗರ್ಭಿಣಿಯಿಂದ 50 ಸಾವಿರ ಹಣ ಪಡೆದು ಲಿಂಗ ಪತ್ತೆ!

ಮಳವಳ್ಳಿ ಡಯಾಗ್ನೋಸ್ಟಿಕ್‌ ಸೆಂಟರ್‌ಗೆ ರಾಜ್ಯಮಟ್ಟದ ಜಾಗೃತ ದಳ ಅಧಿಕಾರಿಗಳಿಂದ ದಾಳಿ. ಗರ್ಭಿಣಿಯಿಂದ 50 ಸಾವಿರ ರು. ಪಡೆದು ಲಿಂಗ ಪತ್ತೆ. ಹಲವು ದಾಖಲೆ  ವಶಕ್ಕೆ.

pregnant women to find out the gender in Malavalli diagnostic Centre gow

ಸಿ.ಸಿದ್ದರಾಜು ಮಾದಹಳ್ಳಿ

ಮಂಡ್ಯ (ಆ.27): ಭ್ರೂಣಲಿಂಗ ಪತ್ತೆ ಮಾಡುತ್ತಿರುವ ಆರೋಪದ ಮೇಲೆ ಪಟ್ಟಣದ ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್‌ನ ಮೇಲೆ ರಾಜ್ಯ ಭ್ರೂಣ ಹತ್ಯೆ ತಡೆ ಮತ್ತು ಲಿಂಗ ಭ್ರೂಣ ಪತ್ತೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ ಸ್ಕ್ಯಾ‌ನಿಂಗ್‌ ಸೆಂಟರ್‌ಗೆ ಬೀಗ ಜಡಿದಿದ್ದಾರೆ. ಡಾ.ವಿವೇಕ್‌ದೊರೆ ಅವರ ನೇತೃತ್ವದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಸೇರಿದಂತೆ ಆರೋಗ್ಯ ಇಲಾಖೆ ಇತರೆ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಳವಳ್ಳಿ ಡಯಾಗ್ನೋಸ್ಟಿಕ್‌ ಸೆಂಟರ್‌ನಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ದಲ್ಲಾಳಿಗಳ ಮೂಲಕ ಭ್ರೂಣಲಿಂಗ ಪತ್ತೆ ಮಾಡುತ್ತಾ ಲಕ್ಷಾಂತರ ರು. ಹಣ ಸಂಪಾದಿಸಿತ್ತಿದ್ದಾರೆಂಬ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮಹಿಳೆಯೊಬ್ಬರಿಗೆ ಲಿಂಗ ಪತ್ತೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸ್ಥಳೀಯವಾಗಿ ಬರುವ ಮಹಿಳೆಯರಿಗೆ ಯಾವುದೇ ಲಿಂಗ ಪತ್ತೆ ಸುಳಿವು ನೀಡದ ಸೆಂಟರ್‌ನ ಮಾಲೀಕರು ಕೇವಲ ಹೊರ ಜಿಲ್ಲೆಯಿಂದ ಬರುವವರನ್ನು ದಲ್ಲಾಳಿಗಳ ಮೂಲಕ ಸೆಂಟರ್‌ಗೆ ಕರೆಸಿಕೊಳ್ಳುತ್ತಿದ್ದರು. ಒಂದು ಲಿಂಗ ಪತ್ತೆಗೆ ಸುಮಾರು 30 ಸಾವಿರ ರು.ನಿಂದ 50 ಸಾವಿರ ರು.ವರೆಗೆ ಬೆಲೆ ನಿಗದಿ ಪಡಿಸುತ್ತಿದ್ದರು ಎಂದು ಗೊತ್ತಾಗಿದೆ. ಡಯಾಗ್ನೋಸ್ಟಿಕ್‌ ಸೆಂಟರ್‌ನ ಪರವಾನಗಿ ಮುಗಿದು ಒಂದೂವರೆ ವರ್ಷವಾಗಿದ್ದರೂ ಅದನ್ನು ನವೀಕರಣ ಮಾಡದೆ ಸ್ಕ್ಯಾ‌ನಿಂಗ್‌ ಮುಂದುವರೆಸಿರುವುದು ದಾಳಿ ಸಮಯದಲ್ಲಿ ಬೆಳಕಿಗೆ ಬಂದಿದೆ.

ಬೆದರಿದ ಸ್ಕ್ಯಾ‌ನಿಂಗ್‌ ಸೆಂಟರ್‌ಗಳು: ರಾಜ್ಯ ಭ್ರೂಣ ಹತ್ಯೆ ತಡೆ ಮತ್ತು ಲಿಂಗ ಭ್ರೂಣ ಪತ್ತೆ ಜಾಗೃತ ದಳದ ಅಧಿಕಾರಿಗಳು ಪಟ್ಟಣದ ಮಳವಳ್ಳಿ ಡಯಾಗ್ನೋಸ್ಟಿಕ್‌ ಸೆಂಟರ್‌ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇತರೆ ಸ್ಕ್ಯಾ‌ನಿಂಗ್‌ ಸೆಂಟರ್‌ಗಳು ಹಾಗೂ ಖಾಸಗಿ ಕ್ಲಿನಿಕ್‌ಗಳ ಮಾಲೀಕರಲ್ಲಿ ನಡುಕ ಹುಟ್ಟಿಸಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌ ಸೆಂಟರ್‌ ಇಲ್ಲದಿರುವುದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಸ್ಕ್ಯಾ‌ನಿಂಗ್‌ ಸೆಂಟರ್‌ಗಳು ಅಕ್ರಮ ಭ್ರೂಣಲಿಂಗ ಪತ್ತೆಯಲ್ಲಿ ತೊಡಗಿರುವುದು ದಾಳಿಯಿಂದ ಕಂಡುಬಂದಿದೆ.

ಲಿಂಗಭ್ರೂಣ ಪತ್ತೆ ಮಾಡಿಸಿಕೊಳ್ಳುವ ಮಹಿಳೆಯರು ಹೆಣ್ಣು ಮಗುವಾದರೆ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಾರೆಂಬ ಆತಂಕ ಎದುರಿಸುತ್ತಿದ್ದಾರೆ. ಸ್ಕ್ಯಾ‌ನಿಂಗ್‌ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ಕಾನೂನು ಬಾಹಿರ ಎಂದು ಬರೆದಿದ್ದರೂ ಹಾಗೂ ಕಾಯ್ದೆ ಇದ್ದರೂ ಕೂಡ ಹಣಕ್ಕಾಗಿ ಕಾನೂನಿನ ಭಯವಿಲ್ಲದೆ ಲಿಂಗಪತ್ತೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸ್ಕ್ಯಾ‌ನಿಂಗ್‌ ದರ ಹೆಚ್ಚಳ: ಸ್ಕ್ಯಾ‌ನಿಂಗ್‌ ಸೆಂಟರ್‌ಗಳಲ್ಲಿ ಒಂದೊಂದು ಸೆಂಟರ್‌ನಲ್ಲಿಯೂ ಒಂದೊಂದು ಬೆಲೆ ನಿಗದಿಯಾಗಿದೆ, ಸರ್ಕಾರದಿಂದ ನಿರ್ದಿಷ್ಟಬೆಲೆ ನಿಗಧಿ ಮಾಡದ ಹಿನ್ನೆಲೆಯಲ್ಲಿ ಸೆಂಟರ್‌ನ ಮಾಲೀಕರು ಜನರಿಂದ ಎಷ್ಟು ಹಣ ಕೇಳುತ್ತಾರೋ ಅಷ್ಟು ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ,

ಸರ್ಕಾರಿ ವೈದ್ಯರ ಶ್ರೀರಕ್ಷೆ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಹಾಗೂ ಸ್ಕ್ಯಾ‌ನಿಂಗ್‌ ಮಾಡುವ ವೈದ್ಯರು ಇದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌ ಮಾಡುವ ಯಂತ್ರ ಇಲ್ಲದಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರುವವರನ್ನು ತಮ್ಮತ್ತ ಸೆಳೆಯಲು ಸ್ಕ್ಯಾ‌ನಿಂಗ್‌ ಸೆಂಟರ್‌ಗಳು ವೈದ್ಯರಿಗೆ ಆಮಿಷಗಳನ್ನು ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

ಪಿ.ಎಂ ನರೇಂದ್ರಸ್ವಾಮಿ ಅವರು ಶಾಸಕರಾಗಿದ್ದ ಆವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರು. ನೂತನ ಆಸ್ಪತ್ರೆ ಉದ್ಘಾಟನೆಗೊಂಡು ಹಲವು ತಿಂಗಳು ಕಳೆಯುತ್ತಿದ್ದರೂ ಕೂಡ ತಾಂತ್ರಿಕ ಸೌಲಭ್ಯಗಳು ಸೇರಿದಂತೆ ಮೂಲಭೂತ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿದೆ.

ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಹಲವು ದಿನಗಳಿಂದ ಭ್ರೂಣ ಲಿಂಗ ಪತ್ತೆ ಕಾರ್ಯ ಮಾಡುತ್ತಿರುವ ಬಗ್ಗೆ ನಮಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಂದ 50 ಸಾವಿರ ಹಣ ಪಡೆದು ಲಿಂಗವನ್ನು ಗುರುತು ಮಾಡಿ ಮಹಿಳೆಗೆ ಮಾಹಿತಿ ನೀಡಿದ್ದಾರೆ. ನಾವು ಭೇಟಿ ನೀಡಿದಾಗ ಅದು ಸ್ಪಷ್ಟವಾಗಿತ್ತು. ಮತ್ತಷ್ಟುಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸೆಂಟರ್‌ನ ಪರವಾನಗಿ ಮುಗಿದು ಒಂದೂವರೆ ವರ್ಷ ಕಳೆದಿದ್ದು, ನಿರ್ವಹಣೆಯೂ ಸಹ ಸಮರ್ಪಕವಾಗಿ ನಡೆದಿಲ್ಲ, ಕೆಪಿಎಂಸಿ ಮತ್ತು ಪಿಸಿಪಿಎನ್‌ಡಿಟಿ. ಪರವಾನಗಿ ಸಹ ಇರುವುದಿಲ್ಲ, ಇವೆಲ್ಲವನ್ನೂ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾಕಷ್ಟುಅಕ್ರಮ ಪತ್ತೆಯಾಗಿದ್ದು, ಈ ಸಂಬಂಧ ಕಠಿಣ ಕ್ರಮ ಜರುಗಿಸಲಾಗುವುದು.

- ಡಾ.ವಿವೇಕ್‌ ದೊರೆ, ರಾಜ್ಯ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿ

ಹಳೆಯ ಸ್ಕ್ಯಾ‌ನಿಂಗ್‌ ಯಂತ್ರ ಸರಿಯಾದ ಕೆಲಸ ನಿರ್ವಹಿಸದ ಕಾರಣ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಹೊಸ ಸ್ಕ್ಯಾ‌ನಿಂಗ್‌ ಯಂತ್ರವನ್ನು ನೀಡಲಾಗಿದೆ. ಎಂಜಿನಿಯರ್‌ ಬಂದು ಅಳವಡಿಸುವ ವೇಳೆ ಕೆಲವು ದೋಷಗಳು ಕಂಡು ಬಂದಿದ್ದು, ಈ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಒಂದು ವಾರದಲ್ಲಿ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು.

- ಡಾ. ಟಿ.ಎನ್‌.ಧನಂಜಯ, ಜಿಲ್ಲಾ ಆರೋಗ್ಯಾಧಿಕಾರಿ ಮಂಡ್ಯ.

 ಮಳವಳ್ಳಿ ಪಟ್ಟಣದ ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್‌ನ ಮೇಲೆ ರಾಜ್ಯ ಭ್ರೂಣ ಹತ್ಯೆ ತಡೆ ಮತ್ತು ಲಿಂಗ ಭ್ರೂಣ ಪತ್ತೆ ಜಾಗೃತ ದಳದ ಅಧಿಕಾರಿ ಡಾ. ವಿವೇಕ್‌ದೊರೆ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.

Latest Videos
Follow Us:
Download App:
  • android
  • ios