*  ಮನೆಗೆ ಬಾಗಿಲು ಮೀಟಿ ಒಳಬಂದ ಕಳ್ಳನ ಬಳಿ ಇದ್ದ ಕಬ್ಬಿಣದ ರಾಡ್‌ ಹಿಡಿದು ಕಿರುಚಿದ ಗೃಹಿಣಿ*  ಮಚ್ಚು ಬೀಸಿದರೂ ವಿಚಲಿತರಾಗದೇ ಗುದ್ದಾಟ*  ಆನೇಕಲ್‌ನ ಪ್ರಕೃತಿ ವಿಲ್ಲಾ ಲೇಔಟಲ್ಲಿ ನಡೆದ ಘಟನೆ 

ಆನೇಕಲ್‌(ಏ.17): ಮನೆ ಬಾಗಿಲು ಮುರಿದು ಒಳಬಂದ ದರೋಡೆಕೋರನನ್ನು(Gangsters) ಗೃಹಿಣಿಯೊಬ್ಬರು ತನ್ನ ಗಂಡ, ಮಾವನ ಸಹಾಯದಿಂದ ಹಿಡಿದು ಹೆಡೆಮುರಿ ಕಟ್ಟಿದ ಘಟನೆ ರೋಚಕ ಘಟನೆ ಆನೇಕಲ್‌(Anekal) ತಾಲೂಕಿನ ಸರ್ಜಾಪುರ ಠಾಣಾ ವ್ಯಾಪ್ತಿಯ ಪ್ರಕೃತಿ ಪಾರ್ಕ್ ವಿಲ್ಲಾ ಬಡಾವಣೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮನೆಯ ಯಜಮಾನ 63 ವಯಸ್ಸಿನ ವಾಮದೇವ ಶರ್ಮ ಅವರ ಬೆರಳಿಗೆ ಗಾಯವಾಗಿದೆ. ಇನ್ನು ಅವರ ಸೊಸೆ ತೇಜಸ್ವಿನಿ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಪುತ್ರ ಶಿವರಾಜ್‌ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ದರೋಡೆಗೆ(Robbery) ಬಂದಿದ್ದ ವಿಜಯ್‌ ಎಂಬಾತನನ್ನು ಹಿಡಿದು ಪೊಲೀಸರಿಗೆ(Police) ಒಪ್ಪಿಸಲಾಗಿದೆ. ತೇಜಸ್ವಿನಿಯ ಅವರ ಧೈರ್ಯಕ್ಕೆ ಬಡಾವಣೆಯ ನಿವಾಸಿಗಳು, ಸರ್ಜಾಪುರ ಠಾಣೆಯ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Shivamogga Crime: ಬೆತ್ತಲೆ ವಿಡಿಯೋ ಪ್ರಕರಣ: ಯುವತಿ ಸಾವಿಗೆ ಕಾರಣವಾದ ಯುವಕ ಅರೆಸ್ಟ್‌

ಘಟನೆಯ ವಿವರ:

ಶನಿವಾರ ಮುಂಜಾನೆ ವಿಜಯ್‌, ವಾಮದೇವ ಶರ್ಮ ಅವರ ಮನೆಯ ಮೊದಲನೇ ಮಹಡಿಯ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮೀಡಿ ಮನೆಯೊಳಗೆ ಒಳಗೆ ಬರುವ ಯತ್ನ ಮಾಡಿದ್ದಾನೆ. ಈ ವೇಳೆ ಸದ್ದು ಕೇಳಿ ಎಚ್ಚರಗೊಂಡ ತೇಜಸ್ವಿನಿ ಬಾಗಿಲ ಬಳಿ ಬಂದು ನೋಡಿದಾಗ ಕಳ್ಳ ಕಾಣಿಸಿದ್ದಾನೆ. ಈ ವೇಳೆ ಸ್ವಲ್ಪವೂ ವಿಚಲಿತರಾಗದೇ ತಕ್ಷಣ ದಢೂತಿ ಕಳ್ಳನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಹಿಡಿದು ಕಿರುಚಿಕೊಂಡಿದ್ದಾರೆ. ಈ ಸದ್ದಿಗೆ ಎಚ್ಚರಗೊಂಡ ಶಿವರಾಜ್‌ ಪತ್ನಿಯ ಸಹಾಯಕ್ಕೆ ಆಗಮಿಸಿದ್ದಾರೆ. ಕಳ್ಳನಿಂದ ರಾಡನ್ನು ಕಿತ್ತುಕೊಂಡು ಪ್ರತಿರೋಧ ತೋರಿದ್ದಾರೆ. ಈ ವೇಳೆ ಕಳ್ಳ ತಕ್ಷಣ ತನ್ನ ಬಳಿ ಇದ್ದ ಮಚ್ಚಿನಿಂದ ದಂಪತಿ ಮೇಲೆ ಹಲ್ಲೆಗೆ(Assault) ಮುಂದಾಗಿದ್ದಾನೆ. ಗಲಾಟೆಯ ಸದ್ದು ಕೇಳಿ ಮೊದಲ ಮಹಡಿಗೆ ಓಡಿ ಬಂದ ಮನೆಯ ಯಜಮಾನ ವಾಮದೇವ ಅವರು ಕಳ್ಳನನ್ನು ತಡೆಯುವ ಯತ್ನದಲ್ಲಿ ಅವರ ಕೈ ಬೆರಳಿಗೆ ಮಚ್ಚಿನೇಟು ಬಿದ್ದಿದೆ. ಇವರ ಕೂಗಾಟ ಚೀರಾಟ ಕೇಳಿದ ನೆರೆಯ ಮನೆಯವರು ಹಾಗೂ ಪಕ್ಕದ ಮನೆಯ ಸೆಕ್ಯೂರಿಟಿ ಗಾರ್ಡ್‌ ಧಾವಿಸಿದ್ದು, ಕಳ್ಳನ ಕೈಯಲಿದ್ದ ಮಚ್ಚನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಕಳ್ಳನ ಮೇಲೆ ಮುಗಿಬಿದ್ದು ಆತನನ್ನು ನೆಲಕ್ಕೆ ಕೆಡವಿ ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸ್ನೇಹಿತನ ಕಾರನ್ನು ಕದ್ದು ಎಸ್ಕೇಪ್ ಆಗಿದ್ದ ಖದೀಮರ ಬಂಧನ: ಜಿಪಿಎಸ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ

ಸ್ಥಳಕ್ಕೆ ಧಾವಿಸಿದ ಪೊಲೀಸರು ಕಳ್ಳ ವಿಜಯ್‌ನನ್ನು ವಶಕ್ಕೆ ಪಡೆದು ಸ್ಥಳದಲ್ಲೇ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನ ಮಾಡಿದ್ದಾನೆ. ಸ್ಥಳೀಯರು ಮತ್ತೆ ಅಟ್ಟಿಸಿಕೊಂಡು ಹೋಗಿ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದು ತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.

ವಿಜಯ್‌ ಊರು ಕೇರಿಯ ಬಗ್ಗೆ ಸರಿಯಾಗಿ ತಿಳಿದು ಬಂದಿಲ್ಲ. ಪೊಲೀಸರ ವಶದಲ್ಲಿರುವ ಆತನನ್ನು ಪೊಲೀಸರು ತನಿಖೆ(Investigation) ನಡೆಸುತ್ತಿದ್ದಾರೆ. ದೂರು ದಾಖಲಿಸಿಕೊಂಡು ಇತರ ಮಾಹಿತಿ ಕಲೆ ಹಾಕುತ್ತಿರುವುದಾಗಿ ಇನ್‌ಸ್ಪೆಕ್ಟರ್‌ ರಾಘವೇಂದ್ರ ತಿಳಿಸಿದರು.