ಸಾಮಾಜಿಕ ಹೋರಾಟಗಾರ ಡೀಕಯ್ಯ ಸಾವಿನ ಕುರಿತು ಸಂಶಯ: ಸಂಬಂಧಿಕರ ದೂರು ಹಿನ್ನೆಲೆ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು

ಉಪ್ಪಿನಂಗಡಿ (ಜು.19): ಬಿಎಸ್‌ಎನ್‌ಎಲ್‌ ಸಂಸ್ಥೆಯ ನಿವೃತ್ತ ಉದ್ಯೋಗಿ, ಬಹುಜನ ಸಮಾಜ ನಾಯಕ, ಸಾಮಾಜಿಕ ಹೋರಾಟಗಾರ ಪಿ. ಡೀಕಯ್ಯಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರಿಂದ ಸೋಮವಾರ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹ ದಫನ ಮಾಡಲಾಗಿದ್ದ ಕಣಿಯೂರು ಗ್ರಾಮದ ಪೊಯ್ಯ ಎಂಬಲ್ಲಿಂದ ಮೇಲಕ್ಕೆತ್ತಿ ತಹಸೀಲ್ದಾರ್‌ ಸುಪರ್ದಿಯಲ್ಲಿ ಪರೀಕ್ಷೆ ನಡೆಸಲಾಯಿತು.

ಪಿ. ಡೀಕಯ್ಯ(P.Deekaiah) 10 ದಿನಗಳ ಹಿಂದೆ ಬೆಳ್ತಂಗಡಿ(Beltangadi) ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಕುಸಿದು ಬಿದ್ದು ಗಾಯಗೊಂಡವರನ್ನು ಮಣಿಪಾಲದ ಆಸ್ಪತ್ರೆ (Manipal Hospital)ಗೆ ಸೇರಿಸಲಾಗಿತ್ತು. ಘಟನೆ ಸಂಭವಿಸಿದಾಗ ಅವರ ಪತ್ನಿ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ (Atradi Amruta shetty)ಕಣಿಯೂರು ಪೊಯ್ಯದಲ್ಲಿರುವ ಡೀಕಯ್ಯರ ಮೂಲ ಮನೆಯಲ್ಲಿದ್ದರು. ಗರ್ಡಾಡಿಯ ಮನೆಯಲ್ಲಿ ಡೀಕಯ್ಯ ಒಬ್ಬರೇ ಇದ್ದರು. ಬೆಳಗ್ಗೆ ಅವರ ಪತ್ನಿ ಗರ್ಡಾಡಿಯ ಮನೆಗೆ ಹೋದಾಗ ಅವರು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ಅವರನ್ನು ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿತ್ತು. ಅದಾದ ನಂತರ ವೆಂಟಿಲೆಂಟರ್‌ನಲ್ಲಿದ್ದ ಅವರು 24 ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ದಫನ ಮಾಡಲಾಗಿತ್ತು.

ಇದನ್ನೂ ಓದಿ: ಆನೆ ಕೊಂದು ದಂತ ಮಾರುತ್ತಿದ್ದವರ ರಕ್ಷಣೆಗೆ ನಿಂತ ಪ್ರಜ್ವಲ್ ರೇವಣ್ಣ? ಸೂಕ್ತ ತನಿಖೆಗೆ ಒತ್ತಾಯಿಸಿದ ಮೇನಕಾ ಗಾಂಧಿ!

ಬಳಿಕದ ದಿನಗಳಲ್ಲಿ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಸಹೋದರಿ ವಿಮಲ ಅವರ ಗಂಡ ಪದ್ಮನಾಭ ಜು.15ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಡೀಕಯ್ಯರ ಸಾವಿನ ಬಗ್ಗೆ ತನಿಖೆ(Death investigation) ನಡೆಸುವಂತೆ ಕೇಳಿಕೊಂಡಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಆದೇಶದಂತೆ ಬೆಳ್ತಂಗಡಿ ತಹಸೀಲ್ದಾರ್‌ ಪೃಥ್ವಿ ಸಾನ್ವಿಕಂ ನೇತೃತದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

ದ.ಕ. ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ (Wenlock Hospital)ಯ ಫೋರನ್ಸಿಕ್‌ ತಜ್ಞರಾದ ಡಾ. ರಶ್ಮಿ ಹಾಗೂ ಸಿಬ್ಬಂದಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಶ್ಮಿ ನೇತೃತ್ವದಲ್ಲಿ ಸ್ಥಳದಲ್ಲೇ ಪರೀಕ್ಷೆ ನಡೆಯಿತು. ಬೆಳ್ತಂಗಡಿ ಪೊಲೀಸ್‌ ಉಪನಿರೀಕ್ಷಕ ನಂದಕುಮಾರ್‌ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲಿದ್ದರು.

ಇದನ್ನೂ ಓದಿ: ದಶಕದ ಹಿಂದಿನ ಮರ್ಡರ್ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು, ಕುಡಿದ ನಶೆಯಲ್ಲಿ ಬಾಯ್ಬಿಟ್ಟ

ಕಾರುಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಾಯ;

ಉಪ್ಪಿನಂಗಡಿಯಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಒಂದು ಕಾರಿನಲ್ಲಿದ್ದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ಸೋಮವಾರ ನಡೆದಿದೆ. ಅಪಘಾತಗೊಂಡ ಮಾರುತಿ 800 ಕಾರಿನಲ್ಲಿದ್ದ ಕೆಮ್ಮಾರದ ಮುಹಮ್ಮದ್‌ ನವಾಝ್‌ ಹಾಗೂ ಅನ್ಸಾರ್‌ ಗಾಯಗೊಂಡವರು. ಸ್ವಿಫ್‌್ಟಡಿಸೈರ್‌ ಕಾರಿನಲ್ಲಿದ್ದ ಸಾಮೆತ್ತಡ್ಕದ ಅಬ್ದುಲ್‌ ಮಜೀದ್‌ ಸಣ್ಣಪುಟ್ಟಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆ ಹೋಗುತ್ತಿದ್ದ ಮಾರುತಿ 800 ಕಾರು ಕೂಟೇಲು ಸೇತುವೆಯ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸ್ವಿಫ್‌್ಟಡಿಸೈರ್‌ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್‌್ಟಡಿಸೈರ್‌ ಕಾರು ಹಳೆಗೇಟು ಕಡೆ ಮುಖ ಮಾಡಿ ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದರೆ, ಮಾರುತಿ 800 ಕಾರು ರಸ್ತೆಯ ಇನ್ನೊಂದು ಬದಿ ಉಪ್ಪಿನಂಗಡಿ ಕಡೆಗೆ ಮುಖ ಮಾಡಿ ನಿಂತಿದೆ. ಮಾರುತಿ 800 ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.