ಯಾದಗಿರಿ(ಮಾ.31):  ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಬಸಪ್ಪ ಚೆಲುವಾದಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿರುವ ಪೊಲೀಸ್‌ ಇಲಾಖೆ, ಈ ವಿಚಾರದಲ್ಲಿ ಖಾಕಿಪಡೆಗೆ ಅಂಟಿಕೊಂಡ ಕಪ್ಪುಚುಕ್ಕೆಯನ್ನು ತೊಲಗಿಸುವಲ್ಲಿ ಹರಸಾಹಸ ನಡೆಸಿದೆ.

ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಾಗೂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳ ಮೂಡಿಸಿರುವ ಬಸಪ್ಪ ಪ್ರಕರಣ ಪೊಲೀಸ್‌ ಅಧಿಕಾರಿಗಳ ನಿದ್ದೆಗೆಡಿಸಿದ್ದು ಸುಳ್ಳೇನಲ್ಲ. ಇನ್ನೊಂದೆಡೆ, ಪೊಲೀಸ್‌ ಕಾರ್ಯವೈಖರಿ ಬಗ್ಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳು, ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆಂಭಾವಿ ಪಿಎಸೈ ಸುದರ್ಶನರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿದೆ. ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ್‌ ಹೊಸ್ಮನಿ, ಇಲಾಖೆಯ ವಿರುದ್ಧ ಕಿಡಿಕಾರಿದರು.

ಬಸಪ್ಪ ಆಸ್ಪತ್ರೆಯಲ್ಲಿದ್ದಾಗ ಪೊಲೀಸರು ಉದ್ದೇಶಪೂರ್ವಕವಾಗಿಯೇ ಹೇಳಿಕೆ ಪಡೆದಿಲ್ಲ ಎಂದು ದೂರಿದರು. ತಮ್ಮ ಇಲಾಖೆಯಲ್ಲಿನ ಅಧಿಕಾರಿಯ ರಕ್ಷಣೆಗಾಗಿ ಪೊಲೀಸ್‌ ಅಧಿಕಾರಿಗಳು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆಂದು ದೂರಿದರು.

ಯಾದಗಿರಿ: ಪಂಪ್‌ ಆಪರೇಟರ್‌ ಆತ್ಮಹತ್ಯೆ; ಪೊಲೀಸರ ಧಮ್ಕಿ ಕಾರಣ?

ದಲಿತ ಸೇನೆ ಉಪಾಧ್ಯಕ್ಷರಾದ ಟಿ. ರಂಗನಾಥ, ಪದ್ಮಾಕರ, ಸುರಪುರ ತಾಲೂಕಾಧ್ಯಕ್ಷ ನಿಂಗಣ್ಣ, ಶಹಾಪೂರ ತಾಲೂಕಾಧ್ಯಕ್ಷ ರಾಹುಲ್‌, ಶಹಾಪೂರ ತಾಲೂಕು ಕಾರ್ಯದರ್ಶಿ ಮೌನೇಶ, ಸುರಪುರ ಉಪಾಧ್ಯಕ್ಷ ಮಾನಪ್ಪ, ಸುರಪುರ ತಾಲೂಕು ಕಾರ್ಯದರ್ಶಿ ಹುಲಗಪ್ಪ, ಬನ್ನಪ್ಪ, ಭೀಮಣ್ಣ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬಸಪ್ಪ ಅತ್ಮಹತ್ಯೆಯೋ..?:

ಅಗ್ನಿ ಗ್ರಾಮದ ಬಸಪ್ಪ ಚೆಲುವಾದಿ ಪ್ರಕರಣವನ್ನು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಈಗ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಬಸಪ್ಪ ಅತ್ಮಹತ್ಯೆ ಪ್ರಕರಣ ಹಾಗೂ ಈ ವಿಚಾರದಲ್ಲಿ ಪೊಲೀಸ್‌ ಇಲಾಖೆಯ ಮೇಲೆ ಕೇಳಿಬರುತ್ತಿರುವ ಆರೋಪಗಳಿಂದ ಮುಕ್ತರಾಗಲು ಹೊರಟಂತಿರುವ ಅಧಿಕಾರಿಗಳಿಗೆ ತನಿಖೆಯ ಹಂತಗಳಲ್ಲಿ ಹೊಸ ಹೊಸ ಬೆಳವಣಿಗೆಗಳು ಕಾಣುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಯಾದಗಿರಿ: ಮಟ್ಕಾ ದಂಧೆಗೆ ಖಾಕಿ ಕಾವಲು ?

‘ಕನ್ನಡಪ್ರಭ’ಕ್ಕೆ ಲಭ್ಯ ಮೂಲಗಳ ಪ್ರಕಾರ, ಬಸಪ್ಪ ಆ ವಾರದ ಅವಧಿಯಲ್ಲಿ ಅನೇಕರ ಜೊತೆ ಮೊಬೈಲ್‌ ಮೂಲಕ ನಡೆಸಿದ್ದ ಸಂಭಾಷಣೆಗಳು, ಸಂಪರ್ಕಿಸಿದ ವ್ಯಕ್ತಿಗಳು ಮುಂತಾದವುಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಖಾತೆಯಲ್ಲಿ ಗುತ್ತಿಗೆದಾರರು ನೀಡಿದ್ದ ವೇತನಗಳ ಬಗ್ಗೆ ಬ್ಯಾಂಕ್‌ ವರದಿ, ಸ್ವಾಧೀನಪಡಿಸಿಕೊಂಡ ಜಮೀನು ಯಾರ ಹೆಸರಿನಲ್ಲಿತ್ತು? ಬಸಪ್ಪನ ಮೊಬೈಲ್‌ ಮತ್ತು ಆತ ಸೇವಿಸಿದ್ದ ಎನ್ನಲಾದ ವಿಷದ ಬಾಟಲಿ ಇನ್ನೂ ಪತ್ತೆಯಾಗದಿರುವುದು ಹಾಗೂ ಈ ವಿಚಾರದಲ್ಲಿ ಪತ್ನಿ ಸೇರಿದಂತೆ ಸಂಬಂಧಿಕರ ಹೇಳಿಕೆಗಳಲ್ಲಿ ವ್ಯತ್ಯಾಸ ಮುಂತಾದವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಬಸಪ್ಪ ಈ ಹಿಂದೆ ಕೆಲವರ ವಿರುದ್ಧ ಜಾತಿನಿಂದನೆ ಹಾಗೂ ಮತ್ತಿತರೆ ದೂರುಗಳನ್ನು ದಾಖಲಿಸಿದ್ದ. ನಂತರ ಅವುಗಳು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣ ಅಂತ್ಯಗೊಂಡಿದ್ದ ಬಗ್ಗೆ, ಆ ಬಗ್ಗೆ ಆಗ ಬಸಪ್ಪ ನೀಡಿದ್ದ ವೀಡಿಯೋ ಹೇಳಿಕೆಗಳು ಹಾಗೂ ಪದೇ ಪದೇ ಬಸಪ್ಪ ಸಂಪರ್ಕಿಸುತ್ತಿದ್ದ ಪ್ರಮುಖ ಸಾಕ್ಷಿಯೊಬ್ಬರನ್ನು ಭೇಟಿಯಾಗಿ ವಿಚಾರಣೆ ನಡೆಸಿರುವ ಅಧಿಕಾರಿಗಳಿಗೆ ಮಹತ್ವದ ತಿರುವೊಂದರ ಸೂಚ್ಯ ಸಿಕ್ಕಂತಾಗಿದೆ. ಖಾಕಿ ಪಡೆಯ ಮೇಲಿನ ಆರೋಪಗಳಿಗೆ ಇದು ಪ್ರತ್ಯುತ್ತರ ನೀಡಬಹುದು ಎಂಬ ಪಕ್ಕಾ ಲೆಕ್ಕಾಚಾರ ಅವರದ್ದಾಗಿದೆ.

ಈ ಮಧ್ಯೆ, ಬಸಪ್ಪ ಪ್ರಕರಣದಲ್ಲಿ ತೀವ್ರ ಆರೋಪಗಳಿಗೆ ಗುರಿಯಾಗಿರುವ ಪಿಎಸೈ ಸುದರ್ಶನರೆಡ್ಡಿ, ಕೋವಿಡ್‌ ಸೋಂಕು ತಗುಲಿದ ತಮ್ಮ ತಂದೆಯ ಆರೈಕೆಗಾಗಿ ತಮ್ಮೂರಿಗೆ ತೆರಳಿದ್ದಾರೆ.