ದೆಹಲಿ ಪೊಲೀಸರು ಲೇಡಿ ಡಾನ್ ಜೋಯಾ ಖಾನ್‌ನನ್ನು ಬಂಧಿಸಿದ್ದಾರೆ. ಆಕೆಯ ಬಳಿ ಒಂದು ಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ. ಈಕೆ ಗ್ಯಾಂಗ್‌ಸ್ಟಾರ್ ಹಶೀಮ್ ಬಾಬಾನ ಪತ್ನಿಯಾಗಿದ್ದು, ಆತನ ಅಪರಾಧ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಳು.

ನವದೆಹಲಿ: ಹಲವು ವರ್ಷಗಳಿಂದ ಆಕೆ ಯಾರೂ ಮುಟ್ಟಲಾಗದಷ್ಟು ಎತ್ತರದಲ್ಲಿದ್ದಳು. ಆದರೆ ದೆಹಲಿ ಪೊಲೀಸರು ಆಖೆಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ. ಆಕೆಯೇ ದೆಹಲಿಯ ಲೇಡಿ ಡಾನ್ ಎಂದು ಹೆಸರಾಗಿದ್ದ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್‌ ಜೋಯಾ ಖಾನ್. ಈಕೆ ಮತ್ತೊಬ್ಬ ನಟೋರಿಯಸ್ ಗ್ಯಾಂಗ್‌ಸ್ಟಾರ್ ಹಶೀಮ್ ಬಾಬಾನ ಪತ್ನಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಒಂದು ಕೋಟಿ ಬೆಲೆ ಬಾಳುವ ಸುಮಾರು 270 ಗ್ರಾಂನ ಹೆರಾಯಿನ್ ಜೊತೆ ಈಕೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. 

33 ವರ್ಷದ ಜೋಯಾ ಚಟುವಟಿಕೆಗಳ ಮೇಲೆ ಪೊಲೀಸರು ಬಹಳ ದಿನಗಳಿಂದಲೂ ಕಣ್ಣಿಟ್ಟಿದ್ದರು. ಆದರೆ ಚಾಲಾಕಿಯಾಗಿದ್ದ ಈಕೆ ಪೊಲೀಸರಿಂದಲೂ ಎರಡು ಹೆಜ್ಜೆ ಮುಂದೆ ಇರುತ್ತಿದ್ದರಿಂದ ಆಕೆಯನ್ನು ಅಷ್ಟು ಸುಲಭವಾಗಿ ಬಲೆಗೆ ಬೀಳಿಸಲು ಸಾಧ್ಯವಿರಲಿಲ್ಲ. ಜೈಲಿನಲ್ಲಿದ್ದ ತನ್ನ ಪತಿ ಗ್ಯಾಂಗ್‌ಸ್ಟಾರ್ ಹಶೀಮ್ ಬಾಬಾನ ಅಪರಾಧ ಸಾಮ್ರಾಜ್ಯ ಹಾಗೂ ಅವನ ಗ್ಯಾಂಗನ್ನು ಈಕೆ ಹೊರಗಿದ್ದು ಮುನ್ನಡೆಸುತ್ತಿದ್ದಳು. ಅಲ್ಲದೇ ತನ್ನ ಈ ಅಕ್ರಮ ಚಟುವಟಿಕೆಗೆ ಯಾವುದೇ ಕಾನೂನಾತ್ಮಕ ಪುರಾವೆಗಳು ಇಲ್ಲದಂತೆ ಆಕೆ ನೋಡಿಕೊಂಡಿದ್ದಳು. ಹಲವು ಅಪರಾಧ ಚಟುವಟಿಕೆಯಲ್ಲಿ ಅವಳ ಪಾತ್ರದ ಬಗ್ಗೆ ಪೊಲೀಸರಿಗೆ ಅನುಮಾನವಿದ್ದರೂ ಇಲ್ಲಿವರೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ, 

ಇತ್ತ ಆಕೆಯ ಪತಿ ಹಸೀಮ್ ಬಾಬಾನ ವಿರುದ್ದ ಡಜನ್‌ಗೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಸುಲಿಗೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಹತ್ತಾರು ಪ್ರಕರಣಗಳನ್ನು ಎದುರಿಸುತ್ತಿರುವ ಹಸೀಮ್ ಖಾನ್‌ಗೆ ಜೋಯಾ ಖಾನ್ ಮೂರನೇ ಪತ್ನಿಯಾಗಿದ್ದಾಳೆ. 2017 ರಲ್ಲಿ ಹಾಶಿಮ್ ಬಾಬಾನನ್ನು ಮದುವೆಯಾಗುವ ಮೊದಲು, ಈ ಜೋಯಾ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆತನೊಂದಿಗೆ ತಲಾಖ್ ಪಡೆದ ನಂತರ ಜೋಯಾ ಹಸೀಮ್‌ ಬಾಬಾನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ಇಬ್ಬರೂ ಈಶಾನ್ಯ ದೆಹಲಿಯಲ್ಲಿ ನೆರೆಹೊರೆಯವರಾಗಿ ವಾಸ ಮಾಡುತ್ತಿದ್ದರು. 

ಅಪರಾಧ ಸಾಮ್ರಾಜ್ಯ
ಬಾಬಾ ಜೈಲಿಗೆ ಹೋದ ನಂತರ, ಜೋಯಾ ಆತನ ಗ್ಯಾಂಗ್‌ನ ಕಾರ್ಯಾಚರಣೆಗಳನ್ನು ವಹಿಸಿಕೊಂಡಳು ಮೂಲಗಳ ಪ್ರಕಾರ, ಜೋಯಾ ತನ್ನ ಪತಿಯ ಗ್ಯಾಂಗ್‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭೂಗತ ಲೋಖದಲ್ಲಿ ಆತನ ಸಹೋದರಿ ಹಸೀನಾ ಪಾರ್ಕರ್‌ ವಹಿಸಿದಂತೆ ತನ್ನ ಪಾತ್ರ ವಹಿಸಿದ್ದರು, ಹಸೀನಾ ಪಾರ್ಕರ್‌ ಒಂದು ಕಾಲದಲ್ಲಿ ದಾವೂದ್‌ನ ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದಳು. ದೆಹಲಿ ಪೊಲೀಸ್ ವಿಶೇಷ ಪಡೆಯ ಮಾಹಿತಿ ಪ್ರಕಾರ, ಜೋಯಾ ಸುಲಿಗೆ ಮತ್ತು ಮಾದಕವಸ್ತು ಪೂರೈಕೆಯನ್ನು ನಿರ್ವಹಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಳು.

ಬ್ರಾಂಡೆಡ್ ಬಟ್ಟೆ, ಐಷಾರಾಮಿ ಜೀವನ

ಸಾಮಾನ್ಯ ಅಪರಾಧ ಲೋಕದ ಡಾನ್‌ಗಳಿಗಿಂತ ಭಿನ್ನವಾಗಿ, ಜೋಯಾ ಒಂದು ನಿರ್ದಿಷ್ಟ ಇಮೇಜ್ ಅನ್ನು ಉಳಿಸಿಕೊಂಡಿದ್ದಳು. ಅವಳು ಹೈ ಪ್ರೊಫೈಲ್ ಪಾರ್ಟಿಗಳಿಗೆ ಹಾಜರಾಗುತ್ತಿದ್ದಳು, ಐಷಾರಾಮಿ ಬ್ರ್ಯಾಂಡ್‌ಗಳ ದುಬಾರಿ ಬಟ್ಟೆಗಳನ್ನು ಧರಿಸುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಫಾಲೋವರ್ಸ್‌ಗಳನ್ನು ಆಕೆ ಹೊಂದಿದ್ದಳು. ಇದರ ಜೊತೆಗೆ ಜೋಯಾ ತಿಹಾರ್ ಜೈಲಿನಲ್ಲಿ ತನ್ನ ಪತಿಯನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದಳು. ಪೊಲೀಸ್ ಮೂಲಗಳ ಪ್ರಕಾರ ಬಾಬಾ ಆಕೆಗೆ ಕೋಡ್‌ ಭಾಷೆಯಲ್ಲಿ ತರಬೇತಿ ನೀಡಿದ್ದ, ಗ್ಯಾಂಗ್‌ನ ಹಣಕಾಸು ಮತ್ತು ಕಾರ್ಯಾಚರಣೆಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಆತ ಕೋಡ್‌ವರ್ಡ್‌ಗಳಲ್ಲಿ ಆಕೆಗೆ ಸಲಹೆ ನೀಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೈಲಿನ ಹೊರಗೆ ಅವನ ಸಹಚರರೊಂದಿಗೆ ಹಾಗೂ ಇತರ ಅಪರಾಧಿಗಳೊಂದಿಗೆ ಅವಳು ನೇರ ಸಂಪರ್ಕವನ್ನು ಹೊಂದಿದ್ದಳು.

ಜಿಮ್ ಮಾಲೀಕನ ಕೊಲೆ ಆರೋಪಿಗಳಿಗೆ ಆಶ್ರಯ

ಹೀಗಾಗಿ ಆಕೆಯನ್ನು ಬಲೆಗೆ ಕೆಡವಲು ಪೊಲೀಸರು ವರ್ಷಗಳ ಕಾಲ ಕಷ್ಟಪಟ್ಟಿದ್ದು, ಕಡೆಗೂ ಆಕೆಗೆ ಖೆಡ್ಡಾ ತೊಡುವಲ್ಲಿ ಯಶಸ್ವಿಯಾಗಿದ್ದಾರೆ. ಗುಪ್ತಚರ ಮಾಹಿತಿಯ ಮೇರೆಗೆ ಪೊಲೀಸರು ಜೋಯಾ ಅವರನ್ನು ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮುಜಫರ್‌ನಗರದಿಂದ ತರಲಾಗುತ್ತಿತ್ತು ಎನ್ನಲಾದ ದೊಡ್ಡ ಪ್ರಮಾಣದ ಹೆರಾಯಿನ್‌ನೊಂದಿಗೆ ಆಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ನಾದಿರ್ ಶಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶೂಟರ್‌ಗಳಿಗೆ ಜೋಯಾ ಆಶ್ರಯ ನೀಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ದಕ್ಷಿಣ ದೆಹಲಿಯ ಐಷಾರಾಮಿ ಗ್ರೇಟರ್ ಕೈಲಾಶ್ -1 ಪ್ರದೇಶದಲ್ಲಿ ಜಿಮ್ ಮಾಲೀಕರಾಗಿದ್ದ ನಾದಿರ್‌ ಶಾ ಅವರನ್ನು ಸೆಪ್ಟೆಂಬರ್ 2024 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಕಳೆದ ತಿಂಗಳು, ಗುಂಡಿನ ದಾಳಿಗೆ ಸಂಬಂಧಿಸಿದಂತೆ ವಿಶೇಷ ಕೋಶದ ಲೋಧಿ ಕಾಲೋನಿ ಕಚೇರಿಯಲ್ಲಿ ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

ಜೋಯಾ ಕೌಟುಂಬಿಕ ಹಿನ್ನೆಲೆ
ಜೋಯಾಗೆ ಅಪರಾಧವು ಒಂದು ಕುಟುಂಬ ವ್ಯವಹಾರವಾಗಿದ್ದು,. ಆಕೆಯ ತಾಯಿಯನ್ನು 2024 ರಲ್ಲಿ ಲೈಂಗಿಕ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲಿಗೆ ಹಾಕಲಾಗಿತ್ತು, ಆದರೆ ಆಕೆ ಪ್ರಸ್ತುತ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಜೋಯಾಳ ತಂದೆ ಮಾದಕವಸ್ತು ಪೂರೈಕೆ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದ. ಇತ್ತ ಜೋಯಾ ಸ್ವತಃ ಈಶಾನ್ಯ ದೆಹಲಿಯ ವಿವಿಧ ಸ್ಥಳಗಳಿಂದ ವಿಶೇಷವಾಗಿ ಉಸ್ಮಾನ್‌ಪುರದಿಂದ ಅಪರಾಧ ವ್ಯವಹಾರಗಳ ಕಾರ್ಯಾಚರಣೆ ನಡೆಸುತ್ತಿದ್ದಳು, ಯಾವಾಗಲೂ 4 ರಿಂದ 5 ಶಸ್ತ್ರಸಜ್ಜಿತ ಸಹಾಯಕರನ್ನು ಜೊತೆಯಲ್ಲಿಟ್ಟುಕೊಂಡು ತಿರುಗಾಡುತ್ತಿದ್ದಳು. 

ಇತ್ತ ಈಕೆ ಇದ್ದ ಈಶಾನ್ಯ ದೆಹಲಿ ಪ್ರದೇಶವು ಬಹಳ ಹಿಂದಿನಿಂದಲೂ ಛೇನು ಗ್ಯಾಂಗ್, ಹಾಶಿಮ್ ಬಾಬಾ ಗ್ಯಾಂಗ್ ಮತ್ತು ನಾಸಿರ್ ಪೆಹೆಲ್ವಾನ್ ಗ್ಯಾಂಗ್ ಸೇರಿದಂತೆ ಇತರ ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿದೆ. ಈ ಗುಂಪುಗಳು ಆರಂಭದಲ್ಲಿ ಮಾದಕವಸ್ತು ಕಳ್ಳಸಾಗಣೆ ಮೇಲೆ ಕೇಂದ್ರೀಕರಿಸಿದ್ದರೂ, 2007 ರ ನಂತರ ಈ ಗ್ಯಾಂಗ್‌ಗಳು ಹಲವು ಗಲಾಟೆಗಳು, ಸರಣಿ ಹಿಂಸಾತ್ಮಕ ಕೊಲೆಗಳಿಗೆ ಕಾರಣವಾಗಿವೆ. ಇತ್ತ ಹಸೀಮ್ ಬಾಬಾ ಗ್ಯಾಂಗ್ ಸುಲಿಗೆಯಿಂದ ಸಂಪಾದಿಸಿದ ಭಾರಿ ಆಸ್ತಿಯಲ್ಲಿ ಹೆಚ್ಚಿನ ಪ್ರಮಾಣವನ್ನು ಜೋಯಾಗೆ ನೀಡಿದ್ದ.

ಲಾರೆನ್ಸ್ ಬಿಷ್ಣೋಯ್ ಜೊತೆಗೆ ಸಂಪರ್ಕ
ಕಳೆದ ವರ್ಷ ನಾದಿರ್ ಷಾ ಕೊಲೆ ಪ್ರಕರಣದಲ್ಲಿ ಬಾಬಾ ಹೆಸರು ಕೇಳಿ ಬಂದಿತ್ತು. ತಿಹಾರ್ ಜೈಲಿನಲ್ಲಿದ್ದ, ಆತ ಹತ್ಯೆಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದ ಮತ್ತು ಲಾರೆನ್ಸ್ ಬಿಷ್ಣೋಯ್ ಅವರನ್ನು ಆರೋಪಿಯನ್ನಾಗಿ ಮಾಡಿದ್ದ. ಪೊಲೀಸರ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಹಾಗೂ ಬಾಬಾ 2021ರಲ್ಲಿ ಜೈಲಿನಲ್ಲಿದ್ದಾಗ ತಮ್ಮ ಪಾತಕ ವ್ಯವಹಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಪ್ರತ್ಯೇಕ ಜೈಲಿನಲ್ಲಿದ್ದರೂ ಅವರು ಅಕ್ರಮವಾಗಿ ಫೋನ್ ಬಳಸುವ ಮೂಲಕ ಪರಸ್ಪರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.