ಮನೆಗಳ್ಳನಿಗೆ ಪೊಲೀಸರ ಗುಂಡೇಟಿನ ಪಾಠ| ಬಂಧನ ವೇಳೆ ಮುಖ್ಯಪೇದೆ ಮೇಲೆ ಹಲ್ಲೆ| ತಪ್ಪಿಸಿಕೊಳ್ಳಲು ಫೈಜಲ್ ಯತ್ನಿಸಿದಾಗ ಗುಂಡು| ದೇವರ ಹುಂಡಿಗೆ ಕಳವಿಗೆ ವಿಫಲ ಯತ್ನ|
ಬೆಂಗಳೂರು(ಫೆ.11): ರಾಜಧಾನಿಯಲ್ಲಿ ಪಾತಕಿಗಳ ವಿರುದ್ಧ ಖಾಕಿ ಪಡೆಯ ಗುಂಡಿನ ದಾಳಿ ಮುಂದುವರೆದಿದ್ದು, ಕುಖ್ಯಾತ ಮನೆಗಳ್ಳನೊಬ್ಬನ ಮೇಲೆ ಜಯನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ದೇವರಬೀಸನಹಳ್ಳಿ ನಿವಾಸಿ ಇಸ್ಮಾಯಿಲ್ ಅಲಿಯಾಸ್ ಮೊಹಮ್ಮದ್ ಫೈಜಲ್‌ಗೆ ಗುಂಡೇಟು ಬಿದ್ದಿದ್ದು, ತನ್ನ ಸಹಚರರ ಜತೆ ಮನೆಗಳಿಗೆ ಕನ್ನ ಹಾಕಿ ತಪ್ಪಿಸಿಕೊಳ್ಳುವಾಗ ಪೊಲೀಸರ ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಪ್ರದೀಪ್ ಅವರಿಗೆ ಸಹ ಪೆಟ್ಟಾಗಿದೆ. ಜಯನಗರದ 8ನೇ ಹಂತದಲ್ಲಿ ಮನೆಗಳ್ಳತನ ಸಂಬಂಧ ಫೈಜಲ್‌ನನ್ನು ಬಂಧಿಸಲು ಇನ್ಸ್‌ಪೆಕ್ಟರ್ ಎಚ್.ವಿ.ಸುದರ್ಶನ್ ತಂಡ ಯತ್ನಿಸಿದೆ. ಆಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದಾಗ ಆತನಿಗೆ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಖ್ಯಾತ ಮನೆಗಳ್ಳ
ವೃತ್ತಿಪರ ಮನೆಗಳ್ಳನಾಗಿರುವ ಫೈಜಲ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳಿಂದ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಕೃತ್ಯಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಖದೀಮರ ತಂಡದ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸೂಚಿಸಿದ್ದರು.
ಸಿನಿಮಿಯ ಸ್ಟೈಲ್: ಗುಂಡು ಹಾರಿಸಿ ದರೋಡೆಗೆ ಯತ್ನ
ಮಂಗಳವಾರ ರಾತ್ರಿ ಗಸ್ತಿನಲ್ಲಿದ್ದ ಜಯನಗರ ಇನ್ಸ್‌ಪೆಕ್ಟರ್ ಸುದರ್ಶನ್ ಅವರಿಗೆ, ಜಯನಗರದ 8ನೇ ಹಂತದಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ ಆಟೋವೊಂದು ಎದುರಾಗಿದೆ. ಆದರೆ ಪೊಲೀಸರನ್ನು ನೋಡಿದ ಕೂಡಲೇ ಆಟೋ, ‘ಯು ಟರ್ನ್’ ಪಡೆದಿದೆ. ಇದರಿಂದ ಅನುಮಾನಗೊಂಡ ಇನ್ಸ್‌ಪೆಕ್ಟರ್, ತಕ್ಷಣವೇ ಆಟೋ ಬೆನ್ನು ಹತ್ತಿದ್ದಾರೆ. ಈ ಹಂತದಲ್ಲಿ ಫೈಜಲ್ ತಪ್ಪಿಸಿಕೊಂಡು, ಅಸ್ಸಾಂ ಮೂಲದ ಆತನ ಸಹಚರರಾದ ಬಿಕಾಸ್ ಹಾಗೂ ಶರ್ಮಾ ಸಿಕ್ಕಿಬಿದ್ದಿದ್ದಾರೆ. ಬಳಿಕ ಈ ಇಬ್ಬರನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಮನೆಗಳ್ಳತನ ಕೃತ್ಯಗಳು ಬೆಳಕಿಗೆ ಬಂದಿವೆ.
ಬಳಿಕ ಸಹಚರರ ಮಾಹಿತಿ ಆಧರಿಸಿ ಫೈಜಲ್ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಲಾಯಿತು. ಜಯನಗರದ 8ನೇ ಬ್ಲಾಕ್‌ನ ಮನೆಯಲ್ಲಿ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಆರೋಪಿ ಅವಿತಿರುವ ಮಾಹಿತಿ ಸಿಕ್ಕಿತು. ಆದರೆ ಆ ಸ್ಥಳಕ್ಕೆ ಪೊಲೀಸರು ತಲುಪುವ ವೇಳೆಗೆ ಆ ಮನೆಯ ಸೆಕ್ಯುರಿಟಿಗಾರ್ಡ್ ಮೇಲೆ ಹಲ್ಲೆ ನಡೆಸಿ ಫೈಜಲ್, ಪಕ್ಕದ ಬಹುಮಹಡಿ ಕಟ್ಟಡಕ್ಕೆ ನುಗ್ಗಿದ್ದ. ಕೂಡಲೇ ಆತನಿಗೆ ಶರಣಾಗುವಂತೆ ಸೂಚಿಸಲಾಯಿತು. ಈ ಮಾತಿಗೆ ಬಗ್ಗದೆ ಬಂಧಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಹಂತದಲ್ಲಿ ಹೆಡ್ ಕಾನ್‌ಸ್ಟೇಬಲ್ ಪ್ರದೀಪ್ ಅವರಿಗೆ ಪೆಟ್ಟಾಗಿದೆ. ಕೊನೆಗೆ ಫೈಜಲ್ ಕಾಲಿಗೆ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ. ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇವರ ಹುಂಡಿಗೆ ಕಳವಿಗೆ ವಿಫಲ ಯತ್ನ
ಜಯನಗರದಲ್ಲಿ ಮಂಗಳವಾರ ರಾತ್ರಿ ತನ್ನ ಸಹಚರರ ಜತೆ ಅನ್ನಪೂಣೇಶ್ವರಿ ದೇವಾಲಯದ ಹುಂಡಿಗೆ ಕದಿಯಲು ಫೈಜಲ್ ಯತ್ನಿಸಿ ವಿಫಲನಾಗಿದ್ದ. ಬಳಿಕ ದೇವಾಲಯದ ಸಮೀಪದ ಅಂಗಡಿ ಬಾಗಿಲು ಮುರಿದು 8 ಸಾವಿರ ಹಣ ದೋಚಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2021, 8:10 AM IST