ಕೊಲೆಗೆ ಯತ್ನ: ಸುಪಾರಿ ಹಂತಕರ ಮೇಲೆ ಪೊಲೀಸರ ಫೈರಿಂಗ್‌..!

ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ| ಜೀವರಕ್ಷಣಗೆಗಾಗಿ ಪೊಲೀಸರಿಂದ ಗುಂಡಿನ ದಾಳಿ| ಘಟನೆಯಲ್ಲಿ ಇಬ್ಬರು ಹೆಡ್‌ಕಾನ್ಸ್‌ಟೇಬಲ್‌ಗಳಿಗೆ ಗಾಯ| 

Police Firing on Supari Killers in Bengaluru

ಬೆಂಗಳೂರು(ಜು.27): ಸುಪಾರಿ ಪಡೆದು ಕೊಲೆಗೆ ಯತ್ನ ನಡೆಸಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಶೆಟ್ಟಿಹಳ್ಳಿಯ ಅರುಣ್‌ ಕುಮಾರ್‌(27) ಹಾಗೂ ದೊಡ್ಡಬಳ್ಳಾಪುರದ ಭರತ್‌(27) ಬಂಧಿತರು.

ಜು.23ರಂದು ರಾಜಶೇಖರ್‌ ಎಂಬುವರು ಬೈಕ್‌ನಲ್ಲಿ ಹೋಗುವಾಗ ಆರೋಪಿಗಳು ಕೊಲೆ ಯತ್ನ ನಡೆಸಿದ್ದರು. ಈ ಬಗ್ಗೆ ರಾಜಶೇಖರ್‌ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಹಲ್ಲೆ ನಡೆಸಿದ್ದ ಪರಿಣಾಮ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಘಟನೆಯಲ್ಲಿ ಹೆಡ್‌ಕಾನ್ಸ್‌ಟೇಬಲ್‌ಗಳಾದ ಸಿದ್ದಲಿಂಗಮೂರ್ತಿ ಮತ್ತು ಶ್ರೀಧರ್‌ ಗಾಯಗೊಂಡಿದ್ದಾರೆ. ಮಾವನ ಆಸ್ತಿ ಲಪಟಾಯಿಸಲು ನಾದಿನಿಯ ಗಂಡ (ಷಡಕ)ನ ಕೊಲೆಗೆ ಸುಪಾರಿ ನೀಡಿದ್ದ ಶ್ರೀನಿವಾಸ್‌ನನ್ನು ಎಂಬಾತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

ಮಾದಕ ವಸ್ತು ದಂಧೆ: ನೈಜೀರಿಯಾ ಪ್ರಜೆ ಸೇರಿ 15 ಮಂದಿ ಬಂಧನ

ಷಡಕನ ಕೊಲ್ಲಲು ಸುಪಾರಿ?

ರಾಜಶೇಖರ್‌ ಮತ್ತು ಆರೋಪಿ ಶ್ರೀನಿವಾಸ್‌ ಷಡಕರಾಗಿದ್ದು, ಸಹೋದರಿಯರನ್ನು ವಿವಾಹವಾಗಿದ್ದಾರೆ. ಮಾವ ಆಸ್ತಿವಂತರಾಗಿದ್ದು, ಹೆಸರುಘಟ್ಟದ ಬಳಿಯ ಕಮರ್ಷಿಯಲ್‌ ಭೂಮಿ ಮೇಲೆ ಶ್ರೀನಿವಾಸ್‌ ಕಣ್ಣಿಟ್ಟಿದ್ದ. ಈ ಮೂರು ಗಂಟೆ ಆಸ್ತಿಯನ್ನು ಮಾವ ರಾಜಶೇಖರ್‌ಗೆ ಕೊಡುತ್ತಾರೆಂದು ತಿಳಿದು ಆರೋಪಿ ಷಡಕನ ಬಳಿ ಜಗಳ ಕೂಡ ನಡೆಸಿದ್ದ. ಹೇಗಾದರೂ ಮಾಡಿ ರಾಜಶೇಖರ್‌ನನ್ನು ಹತ್ಯೆ ಮಾಡಬೇಕು ಎಂದು ನಿರ್ಧರಿಸಿದ ಆರೋಪಿ, ಭರತ್‌ನಿಗೆ .10 ಲಕ್ಷಕ್ಕೆ ಸುಪಾರಿ ನೀಡಿದ್ದ.

ಅದರಂತೆ ಆರೋಪಿಗಳು ಜು.23ರಂದು ರಾಜಶೇಖರ್‌ ಬೈಕ್‌ನಲ್ಲಿ ತನ್ನ ಪತ್ನಿ ಜತೆ ಹೋಗುವಾಗ ಸಿನಿಮೀಯ ರೀತಿಯಲ್ಲಿ ಕಾರಿನಿಂದ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿ ರಾಜಶೇಖರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಆರೋಪಿಗಳು ಜಾಲಹಳ್ಳಿಯ ಎಚ್‌ಎಂಟಿ ಕಾರ್ಖಾನೆ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ಶಿವಸ್ವಾಮಿ, ಭಾನುವಾರ ಬೆಳಗ್ಗೆ 6 ಗಂಟೆ ವೇಳೆಗೆ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್‌ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಹಲ್ಲೆಗೆ ಮುಂದುವರೆಸಿದಾಗ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈಗಾಗಲೇ ಭರತ್‌ಗೆ ಒಂದು ಲಕ್ಷ ಮುಂಗಡ ಹಣವನ್ನು ಶ್ರೀನಿವಾಸ್‌ ನೀಡಿದ್ದ. ಭರತ್‌ ಮತ್ತು ಅರುಣ್‌ಕುಮಾರ್‌ ವಿರುದ್ಧ ದೊಡ್ಡಬಳ್ಳಾಪುರ, ಸಂಜಯನಗರ ಠಾಣೆಯಲ್ಲಿ ಅಪರಾಧ ಪ್ರಕರಣಗಳಿವೆ. ತಂಗಿ ಗಂಡನ ಹತ್ಯೆಗೆ ಪತಿಯೇ ಸುಪಾರಿ ನೀಡಿರುವ ವಿಚಾರ ತಿಳಿದಿರಲಿಲ್ಲ ಎಂದು ಶ್ರೀನಿವಾಸ್‌ ಪತ್ನಿ ಕೂಡ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
 

Latest Videos
Follow Us:
Download App:
  • android
  • ios