Chikkamagaluru: ಕೋರ್ಟಿಗೆ ಹಾಜರಾಗದ ರೌಡಿ ಶೀಟರ್ ಪೂರ್ಣೇಶ್‌ಗೆ ಪೊಲೀಸ್ ಗುಂಡೇಟು!
ಆತ 32 ವರ್ಷದ ಯುವಕ..! ಭಯಾನಕ ರೌಡಿಶೀಟರ್. ಊರಿನ ಜನರಿಗೆ ಇವನಂದ್ರೆ ಭಯ. ತಲೆ ಕೆಟ್ರೆ ನಿಂತಿದ್ದ ಜಾಗದಲ್ಲೇ ಸಿಕ್ಕ ಸಿಕ್ಕವರಿಗೆ ಲಾಂಗು-ಮಚ್ಚು ಬೀಸಿ ಕ್ಷಣ ಮಾತ್ರದಲ್ಲೇ ಕಣ್ಮರೆಯಾಗ್ತಿದ್ದ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.30): ಆತ 32 ವರ್ಷದ ಯುವಕ..! ಭಯಾನಕ ರೌಡಿಶೀಟರ್. ಊರಿನ ಜನರಿಗೆ ಇವನಂದ್ರೆ ಭಯ. ತಲೆ ಕೆಟ್ರೆ ನಿಂತಿದ್ದ ಜಾಗದಲ್ಲೇ ಸಿಕ್ಕ ಸಿಕ್ಕವರಿಗೆ ಲಾಂಗು-ಮಚ್ಚು ಬೀಸಿ ಕ್ಷಣ ಮಾತ್ರದಲ್ಲೇ ಕಣ್ಮರೆಯಾಗ್ತಿದ್ದ. ಕೋರ್ಟಿನಿಂದ ವಾರಂಟ್ ಜಾರಿಯಾಗಿದ್ರು, ಕಣ್ತಪ್ಪಿಸಿ ಕಾಡು ಮೇಡು, ಮರದ ಪೊಟರೆಯಲ್ಲೇ ವಾಸ ಮಾಡ್ತಿದ್ದವನು ಇವತ್ತು ಪೊಲೀಸರಿಗೆ ಲಾಕ್ ಆಗಿದ್ದಾನೆ. ಪೊಲೀಸರ ಮೇಲೂ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಮಂಡಿ ಚಿಪ್ಪಿಗೆ ಫೈರಿಂಗ್ ಮಾಡಿ ಆತನನ್ನ ಬಂಧಿಸಿದ್ದಾರೆ.
ಪೂರ್ಣೇಶ್ ಎಂಬ ರೌಡಿ ಶೀಟರ್ ಮೇಲೆ ಫೈರಿಂಗ್: ರೌಡಿಶೀಡರ್ ನನ್ನ ಬಂಧಿಸಲು ಹೋದ ಪೊಲೀಸರ ಮೇಲೆ ಮಚ್ಚು ಬೀಸಿದ ಕಾರಣ ಸಬ್ ಇನ್ಸ್ ಪೆಕ್ಟರ್ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ. ಮಾಗಲು ಗ್ರಾಮದ ಪೂರ್ಣೇಶ್ ಎಂಬುವನ ಮೇಲೆ 2012 ರಿಂದ 8 ಪ್ರಕರಣಗಳು ದಾಖಲಾಗಿದ್ದವು. ಕೋರ್ಟಿನಿಂದ ಸಮನ್ಸ್ ಜಾರಿಯಾಗಿದ್ದರೂ ಆತ ಕೋರ್ಟಿಗೆ ಹಾಜರಾಗಿರಲಿಲ್ಲ, ವಾರೆಂಟ್ ಜಾರಿಯಾದರೂ ಕಣ್ತಪ್ಪಿಸಿ ಕಾಡು ಮೇಡು ದೊಡ್ಡ...ದೊಡ್ಡ... ಮರಗಳ ಪೋಟರೆಯಲ್ಲಿ ಅವಿತು ಕುಳಿತು ವಾಸ ಮಾಡುತ್ತಿದ್ದ. ಆದರೆ, ಇವತ್ತು ಆತನ ಗ್ರಹಚಾರ ಕೆಟ್ಟಿತ್ತು ಅನ್ಸುತ್ತೆ.
ಕಾಫಿನಾಡಲ್ಲಿ ಇಂದಿನಿಂದ ದತ್ತಮಾಲಾ ಅಭಿಯಾನ: ಶ್ರೀರಾಮಸೇನೆ ಕಾರ್ಯಕರ್ತರಿಂದ ಮಾಲಾಧಾರಣೆ
ಬಾಳೆಹೊನ್ನೂರು ಪೊಲೀಸರ ಖಚಿತ ಮಾಹಿತಿಯ ಮೇರೆಗೆ ಮಾಗಲು ಗ್ರಾಮದ ರೌಡಿ ಶೀಟರ್ ಮನೆಯ ಬಳಿ ಪೊಲೀಸ್ ತಂಡ ಆತನನ್ನು ವಶಕ್ಕೆ ಪಡೆಯಲು ಹೋದಾಗ ಏಕಾಏಕಿ ಬಾಗಿಲು ತೆಗೆದು ಪೊಲೀಸ್ ಪೇದೆ ಮಂಜುನಾಥ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಇತರ ಪೊಲೀಸರ ಮೇಲು ದಾಳಿ ಮಾಡಲು ಮುಂದಾದ. ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ರು ಕೇಳದ ನಟೋರಿಯಸ್ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಸ್ವಯಂ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಪಿ.ಎಸ್.ಐ ದಿಲೀಪ್ ಕುಮಾರ್ ರೌಡಿಶೀಟರ್ ನನ್ನು ಬಂಧಿಸಿದ್ದಾರೆ.
ಪೂರ್ಣೇಶ್ ಬಂಧನದಿಂದ ಸ್ಥಳೀಯರು ನಿಟ್ಟಿಸಿರು: ಇನ್ನು ಕೋರ್ಟಿಂದ ವಾರೆಂಟ್ ಜಾರಿಯಾದರೂ ಕಳೆದ ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡು ಕಾಡಿನಲ್ಲಿ ಓಡಾಡ್ತಿದ್ದ ಈತನ ಲೈಫ್ ಸ್ಟೈಲ್ ವೀರಪ್ಪನ್ ನೆನಪಿಸುತ್ತೆ. ಪೊಲೀಸರಿಂದ ಕಣ್ ತಪ್ಪಿಸಿಕೊಳ್ಳಲು ದೊಡ್ಡ...ದೊಡ್ಡ... ಮರಗಳನ್ನು ಏರಿ ಅಲ್ಲಿಯೇ ಮಲಗುತ್ತಿದ್ದ. ಗಂಟೆಗಟ್ಟಲೆ ಮರಗಳ ಮೇಲೆ ಕಾಲ ಕಳೆದು ಕಾಡಿನಲ್ಲಿ ಓಡಾಡ್ತಿದ್ದ. ಆದರೆ, ಇವತ್ತು ಬಾಳೆಹೊನ್ನೂರು ಪೊಲೀಸರ ತಂಡ ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್ ನನ್ನು ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರು ನಟೋರಿಯಸ್ ಪೂರ್ಣೇಶ್ ಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ
ಘಟನೆಯಲ್ಲಿ ರೌಡಿಶೀಟರ್ ನಿಂದ ಹಲ್ಲೆಗೊಳಗಾದ ಪೊಲೀಸ್ ಪೇದೆ ಮಂಜುನಾಥ್ ಗೆ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೂರ್ಣೇಶ್ ಬಂಧನದಿಂದ ಸ್ಥಳೀಯರು ನಿಟ್ಟಿಸಿರು ಬಿಟ್ಟಿದ್ದು, ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಪೂರ್ಣೇಶ್ ಇದೀಗ ಜೈಲು ಪಾಲಾಗಿದ್ದಾನೆ.ಒಟ್ಟಾರೆ, ಸಕಾಲಕ್ಕೆ ಪೊಲೀಸರಿಗೆ ಶರಣಾಗದೆ ಖಾಕಿ ಪಡೆಗೆ ಚಳ್ಳೆಹಣ್ಣು ತಿನ್ನಿಸಿ ಕಾಡಿನಲ್ಲಿ ಓಡಾಡ್ತಾ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ರೌಡಿಶೀಟರ್ ಪೊಲೀಸರಿಂದ ಗುಂಡೇಟು ತಿಂದು ಜೈಲು ಪಾಲಾಗಿದ್ದಾನೆ. ಆದರೆ, ಈತನಿಂದ ಹಲ್ಲೆಗೊಳಗಾದ ಹತ್ತಾರು ಜನ ಈತ ಅಂದರ್ ಆಗಿದ್ದರಿಂದ ಸಂತಸಪಟ್ಟಿದ್ದಾರೆ. ಆದರೆ, ಬಂದ ಮೇಲೆ ಮತ್ತಿನ್ನೇನು ಮಾಡ್ತಾನೋ ಅನ್ನೋ ಆತಂಕವಂತು ಇದ್ದೇ ಇದೆ.