ಇತ್ತೀಚೆಗೆ ಮತ್ತೊಬ್ಬ ರೌಡಿಶೀಟರ್‌ ಹತ್ಯೆ ಮಾಡಿದ್ದ ಆರೋಪಿ| ಬಂಧಿಸಲು ಹೋದ ಪೇದೆ ಮೇಲೆ ಹಲ್ಲೆ| ಇನ್‌ಸ್ಪೆಕ್ಟರ್‌ ಭರತ್‌ರಿಂದ ಗುಂಡಿನ ದಾಳಿ| ಲಾಂಗ್‌ಫೆರ್ಡ್‌ ಟೌನ್‌ ಬಳಿಯ ಸ್ಮಶಾನದ ಸಮೀಪ ಘಟನೆ|  

ಬೆಂಗಳೂರು(ಏ.26): ಕೊಲೆ ಪ್ರಕರಣದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ ಕಾಲಿಗೆ ಅಶೋಕ್‌ನಸರ ಠಾಣೆ ಇನ್‌ಸ್ಪೆಕ್ಟರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ. ದಿನೇಶ್‌ ಅಲಿಯಾಸ್‌ ಕ್ರೇಜಿ (28) ಆರೋಪಿ ಮೇಲೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಕಾನ್‌ಸ್ಟೇಬಲ್‌ ವಸಂತ್‌ ಅವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಿನೇಶ್‌ ಅಶೋಕ್‌ನಗರ ಠಾಣೆಯ ರೌಡಿಶೀಟರ್‌ ಆಗಿದ್ದು, ಈತನ ವಿರುದ್ಧ ಹತ್ತಾರು ಅಪರಾಧ ಪ್ರಕರಣಗಳಿವೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಏ.20ರಂದು ಮತ್ತೊಬ್ಬ ರೌಡಿಶೀಟರ್‌ ವಿವೇಕ್‌ನಗರ ನಿವಾಸಿ ರವಿವರ್ಮ ಅಲಿಯಾಸ್‌ ಅಪ್ಪು (30) ಎಂಬಾತನನ್ನು ದಿನೇಶ್‌ನ ಗ್ಯಾಂಗ್‌ ಹತ್ಯೆ ಮಾಡಿತ್ತು. ರವಿವರ್ಮ ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ. ಹನ್ನೆರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.

ಬೀದರ್‌: ನಿವೇಶನ ವಿವಾದ: ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್‌ಐ

ಏ.20ರಂದು ರಾತ್ರಿ ಮುನೇಗೌಡ ಗಾರ್ಡನ್‌ನಲ್ಲಿ ದಿನೇಶ್‌ ಹಾಗೂ ಆತನ ಸಹಚರರು ರವಿವರ್ಮನ ಮೇಲೆ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ಸಂಬಂಧ ಆರೋಪಿಗಳನ್ನು ಬಂಧಿಸಲು ಅಶೋಕ್‌ ನಗರ ಇನ್‌ಸ್ಪೆಕ್ಟರ್‌ ಭರತ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಭಾನುವಾರ ಮಧ್ಯಾಹ್ನ ದಿನೇಶ್‌ ತನ್ನ ಸಹಚರರ ಜತೆ ಲಾಂಗ್‌ಫೆäರ್ಡ್‌ ಟೌನ್‌ ಬಳಿಯ ಸ್ಮಶಾನದ ಬಳಿ ಆರೋಪಿ ಇರುವ ಇನ್‌ಸ್ಪೆಕ್ಟರ್‌ಗೆ ಮಾಹಿತಿ ಬಂದಿದೆ. ಕೂಡಲೇ ತಮ್ಮ ಸಿಬ್ಬಂದಿ ಜತೆ ಆರೋಪಿ ಬಂಧಿಸಲು ಭರತ್‌ ಸ್ಥಳಕ್ಕೆ ತೆರಳಿದ್ದು, ಬಂಧಿಸಲು ಹೋದ ಕಾನ್‌ಸ್ಟೇಬಲ್‌ ವಸಂತ್‌ ಮೇಲೆ ದಿನೇಶ್‌ ಹಲ್ಲೆ ನಡೆಸಿದ್ದ. ಇನ್‌ಸ್ಪೆಕ್ಟರ್‌ ಭರತ್‌ ಎಚ್ಚರಿಕೆ ನೀಡಿದರೂ ಆರೋಪಿ ಹಲ್ಲೆ ಮುಂದುವರೆಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಸೇಂಟ್‌ ಫಿಲೋಮೀನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಣಮುಖನಾದ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಘಟನೆಯಲ್ಲಿ ಗಾಯಗೊಂಡಿರುವ ಕಾನ್‌ಸ್ಟೇಬಲ್‌ ವಸಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.